ನವದೆಹಲಿ: ರಾಜ್ಯ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಅಖಿಲ ಭಾರತ ಕೋಟಾ (ಎಐಕ್ಯೂ) ಸೀಟುಗಳಲ್ಲಿ ಕೇಂದ್ರ ಸರ್ಕಾರವು ತಂದಿರುವ ಆರ್ಥಿಕವಾಗಿ ದುರ್ಬಲ ವರ್ಗದವರು (ಇಡಬ್ಲ್ಯೂಎಸ್) ಮತ್ತು ಇತರ ಹಿಂದುಳಿದ ವರ್ಗ (ಓಬಿಸಿ) ಮೀಸಲಾತಿಯನ್ನು ಆಧರಿಸಿ 2021-2022ನೇ ಸಾಲಿಗೆ ನೀಟ್-ಪಿಜಿ ಕೌನ್ಸೆಲಿಂಗ್‌ಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಅಸ್ತಿತ್ವದಲ್ಲಿರುವ ಇಡಬ್ಲ್ಯೂಎಸ್/ಓಬಿಸಿ ಮೀಸಲಾತಿಯ ಆಧಾರದ ಮೇಲೆ 2021-2022ಕ್ಕೆ ನೀಟ್–ಪಿಜಿ ಕೌನ್ಸೆಲಿಂಗ್ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠವು ಒಬಿಸಿಗೆ ಶೇಕಡಾ 27 ಮತ್ತು ನೀಟ್-ಯುಜಿ ಮತ್ತು ನೀಟ್-ಪಿಜಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇಕಡಾ 10ರಷ್ಟು ಮೀಸಲಾತಿ ನೀಡುವ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದೆ. ಆದರೆ ಇಡಬ್ಲ್ಯೂಎಸ್ ವರ್ಗಕ್ಕೆ ವರ್ಷಕ್ಕೆ 8 ಲಕ್ಷ ರೂಪಾಯಿ ಆದಾಯದ ಮಾನದಂಡದ ತಾರ್ಕಿಕತೆಯನ್ನು ಮಾರ್ಚ್ ತಿಂಗಳಲ್ಲಿ ನಿರ್ಣಯಿಸುವುದಾಗಿ ಹೇಳಿದೆ.
2021-22ನೇ ಶೈಕ್ಷಣಿಕ ಸಾಲಿನ ನೀಟ್-ಪಿಜಿ ಪ್ರವೇಶಕ್ಕೆ 2019ರಲ್ಲಿ ಇಡಬ್ಲ್ಯೂಎಸ್ ಅರ್ಹತೆಯ ಅಧಿಸೂಚನೆಯನ್ನು ಅಂಗೀಕರಿಸಬೇಕೆಂದು ಅಜಯ್ ಭೂಷಣ್ ಪಾಂಡೆ ಸಮಿತಿಯು ಮಾಡಿರುವ ಶಿಫಾರಸುಗಳನ್ನು ನಾವು ಸ್ವೀಕರಿಸಿದ್ದೇವೆ. ಕೇಂದ್ರ ಸರ್ಕಾರ ಕಳೆದ ವರ್ಷ ಜುಲೈ 29ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ ನೀಟ್ ಪಿಜಿ ಮತ್ತು ನೀಟ್ ಯುಜಿ ಪ್ರವೇಶಕ್ಕೆ ಕೌನ್ಸಿಲಿಂಗ್ ನಡೆಸಬಹುದು. ಪ್ರಸಕ್ತ ಸಾಲಿನಲ್ಲಿ ನೀಡಬಹುದು ಎಂದು ನ್ಯಾಯಪೀಠ ಸರ್ಕಾರಕ್ಕೆ ಅನುಮತಿ ಕೊಟ್ಟಿದೆ.
ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು, ಪರಿಷ್ಕೃತ ಮಾನದಂಡಗಳನ್ನು ಅನ್ವಯಿಸುವಂತೆ ಮಾಡಬೇಕು, ಕೌನ್ಸೆಲಿಂಗ್ ಮತ್ತು ಪ್ರವೇಶವನ್ನು ಅಸ್ತಿತ್ವದಲ್ಲಿರುವ ಮಾನದಂಡಗಳ ಪ್ರಕಾರ ನಡೆಸಬೇಕು ಎಂದು ಕೇಳಿಕೊಂಡಿತು. ಓಬಿಸಿ ಮೀಸಲಾತಿ ಅಧಿಸೂಚನೆ ಹಾಗೂ ಇಡಬ್ಲ್ಯೂಎಸ್ ಅನ್ನು ನಿರ್ಧರಿಸಲು 8 ಲಕ್ಷ ಆದಾಯದ ಮಾನದಂಡವನ್ನು ಸರ್ಕಾರ ಸಮರ್ಥಿಸಿಕೊಂಡಿತು.