ಐದು ದಶಕ ಒಟ್ಟಿಗೇ ಜೀವಿಸಿ ಸಾವಿನಲ್ಲೂ ಒಂದಾದ ದಂಪತಿ

ಕಾಪು : ಐದು ದಶಕಗಳ ಕಾಲ ಜೊತೆಯಾಗಿ ಬಾಳಿ, ಮಕ್ಕಳು, ಮೊಮ್ಮಕ್ಕಳನ್ನು ಕಂಡು, ಸಿಹಿ ಕಹಿ, ನೋವು ಕಷ್ಟ ಸವಾಲುಗಳನ್ನು ಒಟ್ಟಿಗೇ ಎದುರಿಸಿದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕಾಪು ತಾಲೂಕಿನ ಬೆಳಪುವಿನಲ್ಲಿ ನಡೆದಿದೆ.

ಕಾಪು ತಾಲೂಕಿನ ಬೆಳಪು ಎಂಬಲ್ಲಿ ಈ ಘಟನೆ ನಡೆದಿದೆ. ಕೃಷ್ಣ ಅಲಿಯಾಸ್ ಕುಟ್ಟಿ ಶೆಟ್ಟಿ (80) ಮತ್ತು ಅವರ ಪತ್ನಿ ರೇವತಿ ಶೆಟ್ಟಿ (75) ಸಾವಿನಲ್ಲೂ ಒಂದಾದ ದಂಪತಿ.
ಇಬ್ಬರ ಅಂತಿಮ ಕಾರ್ಯಗಳು ಒಟ್ಟಿಗೇ ನಡೆದಿದೆ. ಕೃಷ್ಣ ಅವರು ವಯಸ್ಸಿನ ಕಾರಣದಿಂದ ಆಗಸ್ಟ್‌ 2ರ ಬೆಳಗ್ಗೆ ಮೃತಪಟ್ಟಿದ್ದಾರೆ. ರೇವತಿ ಅವರು ಆಗಸ್ಟ್‌ 3ರ ಬೆಳಗ್ಗೆ ಮೃತಪಟ್ಟಿದ್ದಾರೆ. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕೃಷ್ಣ ಯಾನೆ ಕುಟ್ಟಿ ಶೆಟ್ಟಿ ಅವರು ವಯೋ ಸಹಜ ಕಾರಣಗಳಿಂದಾಗಿ ಮಂಗಳವಾರ ಮುಂಜಾನೆ ಮೃತಪಟ್ಟಿದ್ದು ಮಕ್ಕಳು ಮುಂಬಯಿ ಸಹಿತ ಬೇರೆ ಕಡೆಗಳಲ್ಲಿ ಇರುವುದರಿಂದ ಅವರ ಶವವನ್ನು ಕುಟುಂಬದ ಮೂಲ ಮನೆಯಲ್ಲಿ ಶೈತ್ಯೀಕರಣದ ವ್ಯವಸ್ಥೆಯೊಂದಿಗೆ ಮನೆಯಲ್ಲೇ ಇರಿಸಲಾಗಿತ್ತು. ಬುಧವಾರ ಮುಂಜಾನೆ ಮಕ್ಕಳು ಮನೆಗೆ ಬರುತ್ತಲೇ ಅವರ ಮೃತದೇಹವನ್ನು ತಮ್ಮ ಸ್ವಂತ ಮನೆಗೆ ತರಲಾಗಿತ್ತು. ಮೃತದೇಹವನ್ನು ಮನೆಯೊಳಗೆ ತಂದು ನೆಲಕ್ಕೆ ಇಟ್ಟ ಕೆಲವೇ ಕ್ಷಣದಲ್ಲಿ ಪತ್ನಿ ರೇವತಿ ಶೆಟ್ಟಿ ಅವರು ಕುಸಿದು ಬಿದ್ದು ಮೃತ ಪಟ್ಟಿದ್ದಾರೆ.

ಸಾವಿನಲ್ಲೂ ಒಂದಾದ ದಂಪತಿಯ ಮೃತದೇಹವನ್ನು ಮಕ್ಕಳು ಮತ್ತು ಕುಟುಂಬಸ್ಥರು ಜೊತೆ ಸೇರಿ ಸಾಮಾಜಿಕ ಕಾರ್ಯಕರ್ತ ಸೂರಿ ಶೆಟ್ಟಿ ನೇತೃತ್ವದಲ್ಲಿ ಬೆಳಪು ಧೂಮಪ್ಪ ಶೆಟ್ಟಿ ಮನೆ ಬಳಿಯ ಜಮೀನಿನಲ್ಲಿ ಸಿದ್ಧಪಡಿಸಿದ ಚಿತೆಯಲ್ಲಿ ಜೋಡಿಯಾಗಿಯೇ ಅಂತ್ಯಕ್ರಿಯೆ ನಡೆಸಲಾಯಿತು.

Donate Janashakthi Media

Leave a Reply

Your email address will not be published. Required fields are marked *