ಐಸಿಡಿಎಸ್ ಯೋಜನೆಯನ್ನು ಉಳಿಸಿಕೊಳ್ಳಲು ಪ್ರಬಲ ಹೋರಾಟಕ್ಕೆ ಸಜ್ಜಾಗಿ – ಮೀನಾಕ್ಷಿಸುಂದರಂ

ಹೊಸಪೇಟೆ :  ‘ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ (ಐ.ಸಿ.ಡಿ.ಎಸ್‌.) ಬಗ್ಗೆ ಸರ್ಕಾರ ಹಾಗೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿವೆ. ಅಪೌಷ್ಟಿಕತೆ ನೀಗಿಸುವ ಯೋಜನೆ ಇದು. ದೇಶದ ಭವಿಷ್ಯದ ದೃಷ್ಟಿಯಿಂದ ಇದು ಉತ್ತಮವಾದುದು. ಯಾವುದೇ ಕಾರಣಕ್ಕೂ ಇದನ್ನು ಮೊಟಕುಗೊಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಅಂಗನವಾಡಿ ನೌಕರರ ಮೇಲಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿಸುಂದರಂ ಕರೆ ನೀಡಿದರು.

ನಗರದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಅಂಗನವಾಡಿ ನೌಕರರ 8ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ,

ಯಾವ ದೇಶದ ಮಕ್ಕಳು ಆರೋಗ್ಯವಂತರಾಗಿ ಇರುತ್ತಾರೋ ಆ ದೇಶ ಭವಿಷ್ಯದಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ಐ.ಸಿ.ಡಿ.ಎಸ್‌. ಯೋಜನೆಯು ಮಗು ತಾಯಿಯ ಭ್ರೂಣದಲ್ಲಿ ಬೆಳೆಯುವ ಹಂತದಿಂದ ಜನಿಸಿದ ನಂತರ ಅದಕ್ಕೆ ಪೌಷ್ಟಿಕ ಆಹಾರ ಕೊಟ್ಟು ಆರೋಗ್ಯವಂತ ಪ್ರಜೆಯಾಗಿ ರೂಪಿಸಲು ಇರುವ ಮಹತ್ತರ ಯೋಜನೆ. ಅದನ್ನು ಮೊಟಕುಗೊಳಿಸುವ ಯೋಚನೆಯೂ ಸರಿಯಲ್ಲ ಎಂದು ಹೇಳಿದರು.

ಐ.ಸಿ.ಡಿ.ಎಸ್. ಒಂದೇ ಅಲ್ಲ, ಪಿ.ಎಫ್‌., ಇ.ಎಸ್‌.ಐ ಸೇರಿದಂತೆ ಇತರೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ರದ್ದುಪಡಿಸುತ್ತಿದೆ. ಇದು ಸರಿಯಲ್ಲ. ಅಂಗನವಾಡಿ ಕಾರ್ಯಕರ್ತೆಯರ ಸೇವೆ ಕಾಯಂಗೊಳಿಸುವವರೆಗೆ ಅವರಿಗೆ ಕನಿಷ್ಠ ವೇತನ ನೀಡಬೇಕು. ಯಾವ ಮಸೀದಿಯಲ್ಲಿ ಶಿವಲಿಂಗ ಇದೆ ಎಂದು ಹುಡುಕುವುದು ಸರ್ಕಾರದ ಕೆಲಸವಲ್ಲ. ದುಡಿಯುವ ವರ್ಗದ ಹಿತಾಸಕ್ತಿ ಕಾಯುವ ಕೆಲಸ ಮಾಡಬೇಕು ಎಂದರು.

ಅಂಗನವಾಡಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಎಸ್‌. ವರಲಕ್ಷ್ಮಿ ಮಾತನಾಡಿ, ಯು.ಪಿ.ಎ. ಸರ್ಕಾರದ ಮೊದಲ ಅವಧಿಯಲ್ಲಿ ಕಮ್ಯುನಿಸ್ಟ್‌ ಪಕ್ಷದ ಬೆಂಬಲದೊಂದಿಗೆ ಆಹಾರ ಭದ್ರತಾ ಕಾಯ್ದೆ, ನರೇಗಾ ಯೋಜನೆ ಜಾರಿಗೆ ಬಂತು. ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲೇ ಅಂಗನವಾಡಿಗಳು ಬರುತ್ತವೆ. ಇದೊಂದು ಸಂಸ್ಥೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಅದು ಐತಿಹಾಸಿಕ ತೀರ್ಪು. ಅಂಗನವಾಡಿ ಕಾರ್ಯಕರ್ತೆಯರು ಗ್ರ್ಯಾಚುಟಿ ಪಡೆಯಲು ಅರ್ಹರೆಂದು ಹೇಳಿದೆ. ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎ.ಆರ್‌.ಸಿಂಧು, ಗ್ರಾಮ ಪಂಚಾಯತಿ ನೌಕರರ ಸಂಘದ ಮುಖಂಡ ಆರ್‌.ಎಸ್‌. ಬಸವರಾಜ, ಅಂಗನವಾಡಿ ನೌಕರರ ಸಂಘದ ಗೌರವ ಅಧ್ಯಕ್ಷೆ ಶಾಂತಾ ಎನ್‌. ಘಂಟೆ, ರಾಜ್ಯ ಮುಖಂಡರಾದ ಯಮುನಾ ಗಾಂವಕರ್‌, ಜೆ. ಕಮಲ, ಜಿಲ್ಲಾ ಅಧ್ಯಕ್ಷೆ ಕೆ. ನಾಗರತ್ನ ಸೇರಿದಂತೆ ಇತರರಿದ್ದರು.

ನೂತನ ರಾಜ್ಯ ಸಮಿತಿ : ರಾಜ್ಯ ಸಮ್ಮೇಳನದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಸ್‌. ವರಲಕ್ಷ್ಮಿ , ಕಾರ್ಯಾಧ್ಯಕ್ಷರಾಗಿ ಶಾಂತಾ ಘಂಟೆ, ಪ್ರದಾನ ಕಾರ್ಯದರ್ಶಿಯಾಗಿ ಹೆಚ್.ಎಸ್.ಸುನಂದ ಹಾಗೂ ಖಜಾಂಚಿಯಾಗಿ ಜಿ.ಕಮಲಾ ಪುನರಾಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಟಿ. ಲೀಲಾವತಿ, ಕೆ. ನಾಗರತ್ನ, ಕಲಾವತಿ, ಸುಜಾತಾ, ಪದ್ಮಾ, ಸುನಂದಾ ನಾಯಕ್, ಮಾರುತಿ ಚಿಟಗಿ, ಶ್ರೀದೇವಿ ಚುಡೆ ಕಾರ್ಯದರ್ಶಿಗಳಾಗಿ ಯಮುನಾ ಗಾಂವ್ಕರ್, ಲಕ್ಷ್ಮಿದೇವಮ್ಮ, ಗೌರಮ್ಮ ಪಾಟೀಲ್, ದೊಡ್ಡವ್ವ ಪೂಜೇರಿ, ಗುಲ್ಜಾರ್, ನಳಿನಾಕ್ಷಿ, ಉಮಾ, ಎಂ.ಬಿ ಪುಷ್ಪಾ, ಸುಶೀಲಾ ನಾಡಾ ಆಯ್ಕೆಯಾದರು.

ಒಟ್ಟೂ 52 ಜನರ ರಾಜ್ಯ ಸಮಿತಿಯಲ್ಲಿ 22 ಜನ ಪದಾಧಿಕಾರಿಗಳು ಆಯ್ಕೆಯಾದರು. ಎಲ್ಲಾ ತಾಲೂಕು ಸಮಿತಿ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಕೌನ್ಸಿಲ್ ಸದಸ್ಯರಾಗಿ ಆಯ್ಕೆಯಾದರು.

Donate Janashakthi Media

Leave a Reply

Your email address will not be published. Required fields are marked *