ರಾಯ್‌ಪುರ: ಮಹಾತ್ಮ ಗಾಂಧಿ ಅವರ ಸಲಹೆ ಮೇರೆಗೆ ವಿ.ಡಿ. ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರಗಳನ್ನು ಬರೆದಿದ್ದರು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಛತ್ತೀಸ್‌ಘಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ದೇಶವನ್ನು ಇಬ್ಬಾಗ ಮಾಡುವ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಮೊದಲು ಪ್ರಸ್ತಾಪಿಸಿದ್ದು ಸಾವರ್ಕರ್ ಎಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಭೂಪೇಶ್ ಬಘೇಲ್ ಮಹಾತ್ಮ ಗಾಂಧಿ ವಾರ್ಧಾ ಜೈಲಿನಲ್ಲಿದ್ದರು ಮತ್ತು ಸಾವರ್ಕರ್ ಸೆಲ್ಯುಲರ್ ಜೈಲಿನಲ್ಲಿದ್ದರು, ಹೀಗಿರುವಾಗ ಅವರು ಸಂವಹನ ನಡೆಸಲು ಹೇಗೆ ಸಾಧ್ಯ, ಜೈಲಿನಿಂದಲೇ ಹಲವು ಬಾರಿ ಕ್ಷಮಾಧಾನ ಅರ್ಜಿ ಹೇಗೆ ಸಲ್ಲಿಸಿದರು ಎಂದು ಪ್ರಶ್ನಿಸಿದ್ದಾರೆ.
ಸಾವರ್ಕರ್ ಆ ಸಮಯದಲ್ಲಿ ಬ್ರಿಟಿಷರ ಪರವಾಗಿ ಕೆಲಸ ಮಾಡಲು ನಿರ್ಧರಿಸಿದರು ಮತ್ತು ವಿಭಜಿಸಿ ಆಳುವ ನೀತಿಗೆ ಸಹಾಯ ಮಾಡಿದರು. 1925ರಲ್ಲಿ ಜೈಲಿನಿಂದ ಹೊರಬಂದ ನಂತರ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಅವರು ಮೊದಲು ಪ್ರಸ್ತಾಪಿಸಿದರು ಎಂದು ತಿಳಿಸಿದ್ದಾರೆ.
ಸಾವರ್ಕರ್ ಅವರು ಬ್ರಿಟಿಷ್ ಸರ್ಕಾರಕ್ಕೆ ಕ್ಷಮಾಪಣೆ ಪತ್ರಗಳನ್ನು ಬರೆದ ಬಗ್ಗೆ ಸುಳ್ಳುಗಳನ್ನು ಪ್ರಚಾರ ಮಾಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಹೀಗೆ ದಾರಿ ತಪ್ಪಿಸುತ್ತಿರುವವರಿಗೆ ಕ್ಷಮಾಪಣೆ ಪತ್ರಗಳನ್ನು ಬರೆಯಲು ಸಲಹೆ ನೀಡಿದ್ದು ಮಹಾತ್ಮ ಗಾಂಧಿ ಎಂಬುದು ಗೊತ್ತಿಲ್ಲ ಎಂದು ಇತ್ತೀಚಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದರು.