ಬೆಂಗಳೂರು: ಗೋಮೂತ್ರ ಕುಡಿಯುವವರ ಬುದ್ಧಿ ಹತ್ಯೆಯಾಗಿದೆ ಅಂತಾ ಸಾವರ್ಕರ್ ಹೇಳಿದ್ದರು ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವರ್ಕರ್ ಹಸು ಪವಿತ್ರ ಅಲ್ಲ, ಬದಲಾಗಿ ಉಪಯುಕ್ತವಾದ ಪ್ರಾಣಿ ಎಂದು ಹೇಳಿದ್ದರು. ಗೋ ಯಾರಿಗಾದರೂ ತಾಯಿ ಇದ್ದರೆ ಅದು ಎತ್ತಿಗೆ ಮಾತ್ರ, ಬದಲಾಗಿ ಹಿಂದೂಗಳಿಗೆ ಅಲ್ಲ ಎಂದಿದ್ದರು ಎಂದು ವಿವರಿಸಿದರು.
ಹಿಂದೂಗಳು ಗೋ ಮಾತೆಯನ್ನು ಪೂಜಿಸುವುದು ಬಿಡಬೇಕು. ಗೋ ಮೂತ್ರ ಕುಡಿಯುವವರ ಬುದ್ಧಿ ಹತ್ಯೆಯಾಗಿದೆ ಎಂದಿದ್ದರು. ಹಾಗಾದರೆ ಗೋಮೂತ್ರ ಸೇವಿಸುವುದನ್ನು ಬಿಜೆಪಿಯವರು ನಿಲ್ಲಿಸುತ್ತೀರಾ?ಎಂದು ಪ್ರಶ್ನಿಸಿದರು.
ಪ್ರತ್ಯೇಕ ದೇಶ ಕೇಳಿದ್ದು ಸಾವರ್ಕರ್
1906 ರಲ್ಲಿ ಸಾವರ್ಕರ್ ಯುನಿವರ್ಸಿಟಿ ಆಫ್ ಲಂಡನ್ ಗೆ ಓದಲು ಹೋಗುತ್ತಾರೆ. ಇದಕ್ಕೆ ಮೊದಲು ಅಭಿನವ ಭಾರತ್ ಸಂಸ್ಥೆ ಸ್ಥಾಪನೆ ಮಾಡುತ್ತಾರೆ. ಬ್ರಿಟೀಷ್ ಅಧಿಕಾರಿಯೊಬ್ಬರನ್ನು ಗುಂಡಿಟ್ಟು ಅಭಿನವ ಭಾರತ ಸಂಘಟನೆಯವರು ಕೊಲ್ಲುತ್ತಾರೆ. ತನಿಖೆ ಮಾಡುವ ಸಂದರ್ಭದಲ್ಲಿ ಅದರ ಅಧ್ಯಕ್ಷರು ಸಾವರ್ಕರ್ ಎಂದು ಗೊತ್ತಾಗುತ್ತದೆ. ಹತ್ಯೆಗೆ ಆಯುಧ ನೀಡಿದ್ದು ಸಾವರ್ಕರ್ ಅವರು.
ಬ್ರಿಟಿಷ್ ಅಧಿಕಾರಿ ಹತ್ಯೆಗೆ ಸಾವರ್ಕರ್ ಸಹೋದರ ಬಂಧನ ಕಾರಣವಾಗಿತ್ತು. ಬಂಧನ ಆದ ಸಂದರ್ಭದಲ್ಲಿ ಸಾವರ್ಕರ್ ಅರ್ಜಿ ಸಲ್ಲಿಸುತ್ತಾರೆ. ಭಾರತಕ್ಕೆ ವಿಚಾರಣೆಗೆ ಕರೆದುಕೊಂಡು ಹೋಗಲು ನಿಯಮಗಳ ಕಾರಣದಿಂದ ಸಾಧ್ಯವಿಲ್ಲ ಎಂದು ಉಲ್ಲೇಖ ಮಾಡುತ್ತಾರೆ. ಆದರೂ ಅವರನ್ನು ಹಡಗಿನ ಮೂಲಕ ಭಾರತಕ್ಕೆ ಕರೆದುಕೊಂಡು ಬರಲಾಗುತ್ತದೆ. ಆದರೆ ಹಡಗಿನ ಮೂಲಕ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ ಎಂದರು.
ಭಾರತಕ್ಕೆ ಕರೆತಂದ ನಂತರ ಸಾರ್ವಕರ್ ಪರ ಬ್ಯಾಪಿಸ್ಟ್ ವಾದ ಮಾಡಿದ್ದರು. ಅಂಡಮಾನ್ನ ಕಾಲಪಾನಿಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸಾವರ್ಕರ್ ಇತರ ರಾಜಕೀಯ ಖೈದಿಗಳಂತೆ ಎಣ್ಣೆ ತೆಗೆಯಲಿಲ್ಲ. ಬ್ರಿಟಿಷರ ಜೊತೆಗೆ ಚೆನ್ನಾಗಿದ್ದ ಕಾರಣ ಅವರಿಗೆ ಕ್ಲರಿಕಲ್ ಕೆಲಸ ಕೊಡಲಾಗಿತ್ತು ಎಂದು ವಿವರಿಸಿದರು.
ಅಂಡಮಾನ್ಗೆ ಹೋದ ಎರಡೇ ತಿಂಗಳಲ್ಲಿ ಸಾವರ್ಕರ್ ಕ್ಷಮಾಪಣೆ ಪತ್ರ ಬರೆದರು. ಸಾರ್ವಕರ್ ಸಹೋದರ ಕೂಡ ಪತ್ರ ಬರೆದು, ನಾವು ನಿಮ್ಮ ಸರ್ಕಾರದಲ್ಲಿ ಕೆಲಸ ಮಾಡ್ತೇವೆ. ದಾರಿ ತಪ್ಪಿದ ಮಗ ಇನ್ನೆಲ್ಲಿಗೆ ಹೋಗ್ತಾನೆ. ಮತ್ತೆ ಮನೆಗೆ ಬಂದಿದ್ದೇನೆ ಕ್ಷಮಾಪಣೆ ಕೊಡಿ ಎಂದು ಕೋರಿದ್ದರು. ಮುಸ್ಲಿಮರು ಮತ್ತು ಹಿಂದುಗಳಿಗೆ ಪ್ರತ್ಯೇಕ ದೇಶ ಬೇಕು ಎಂದವರು ಸಾವರ್ಕರ್ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಸಾವರ್ಕರ್ ಜೈಲಿಂದ ಬಿಡುಗಡೆಯಾದ ಬಳಿಕ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರಾ? ಸಾವರ್ಕರ್ ವಿಚಾರವಾಗಿ ನಡೆಯುತ್ತಿರುವ ಚರ್ಚೆಯ ಹಿನ್ನಲೆಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದ ಪ್ರಿಯಾಂಕ್ ಖರ್ಗೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿರುದ್ಧ ಸಾವರ್ಕರ್ ಬ್ರಿಟಿಷರಿಗೆ ಸಹಕಾರ ನೀಡಿದ್ದರು. ಸಾವರ್ಕರ್ ಬಿಡುಗಡೆ ಆದ ಮೇಲೆ ಬ್ರಿಟಿಷರ ವಿರುದ್ಧ ಎಷ್ಟು ಹೋರಾಟ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಸಾವರ್ಕರ್ ನಾಸ್ತಿಕರೂ ಆಗಿದ್ದರು, ವಿಚಾರವಾದಿ ಕೂಡಾ ಆಗಿದ್ದರು. ಸಾವರ್ಕರ್ ಕ್ರಾಂತಿಕಾರಿ ಆದರೂ ಕ್ರಾಂತಿಯ ಸಂದರ್ಭದಲ್ಲಿ ಹಿಂದೇಟು ಹಾಕಿದರು. ಅಂಡಮಾನ್ ಜೈಲಿನಲ್ಲಿ ಇದ್ದ ಕೈದಿಗಳಲ್ಲಿ ಹೆಚ್ಚು ಕ್ಷಮಾಪಣೆ ಪತ್ರ ಕೊಟ್ಟಿದ್ದು ಸಾವರ್ಕರ್. ಅವರ ಮೂರನೇ ಕ್ಷಮಾಪಣೆ ಪತ್ರದಲ್ಲಿ ಯುದ್ಧ ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯವನ್ನು ರಕ್ಷಣೆ ಮಾಡುತ್ತೇನೆ, ಆಳಾಗಿ ದುಡಿಯುತ್ತೇನೆ ಎಂದಿದ್ದರು. ಆರನೇ ಕ್ಷಮಾಪಣೆ ಪತ್ರದಲ್ಲಿ ಭಾರತೀಯ ನಾಗರಿಕರು ಬ್ರಿಟಿಷರ ಜೊತೆಗೆ ಹೊಂದಾಣಿಕೆ ಮಾಡಬೇಕು ಅಂತಾ ಬರೆದಿದ್ದರು ಎಂದು ವಿವರಿಸಿದರು.
ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಬೇಕು ಎಂದು ಸಾವರ್ಕರ್ ಕ್ಷಮಾಪಣೆ ಪತ್ರ ಬರೆದಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಬೇರೆಯವರು ಏಕೆ ಬರೆದಿಲ್ಲ…? ಮಹಾತ್ಮಾ ಗಾಂಧಿ ಕ್ಷಮಾಪಣೆ ಪತ್ರ ಬರೆಯಿರಿ ಎಂದು ಸಾವರ್ಕರ್ ಅವರಿಗೆ ಹೇಳಿದ್ದಾರೆ ಎಂಬುದು ಸುಳ್ಳು. ಸಾವರ್ಕರ್ ಸಹೋದರರಲ್ಲಿ ಯಾವುದೇ ಕ್ರಾಂತಿಕಾರಿ ಆಲೋಚನೆ ಇಲ್ಲ. ಅದಕ್ಕಾಗಿ ಅವರನ್ನು ಬಿಟ್ಟುಬಿಡಿ ಎಂದಿದ್ದರು ಗಾಂಧೀಜಿ ಅವರು ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.
1923ರಲ್ಲಿ ಚಿತ್ರಗುಪ್ತ ಬರೆದ ಪುಸ್ತಕದಲ್ಲಿ ಸಾವರ್ಕರ್ ವರ್ಣನೆ ಮಾಡಲಾಗಿದೆ. 1987ರಲ್ಲಿ ಲೈಪ್ ಆಫ್ ಸಾವರ್ಕರ್ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಸಾವರ್ಕರ್ ಅವರೇ ಚಿತ್ರಗುಪ್ತ ಎಂದು ಉಲ್ಲೇಖ ಮಾಡಲಾಗಿದೆ. ಸಾವರ್ಕರ್ ಗೆ ವೀರ್ ಬಿರುದು ಕೊಟ್ಟದ್ದು ಚಿತ್ರಗುಪ್ತ. ಆದರೆ, ಚಿತ್ರಗುಪ್ತ ಸ್ವತಃ ಸಾವರ್ಕರ್ ಆಗಿದ್ದರು.
ಅಸಲಿ ದೇಶಭಕ್ತರು-ನಕಲಿ ದೇಶಭಕ್ತರ ಚರ್ಚೆಯಿಂದ ಹೊರಬನ್ನಿ
ಯಾರು ಅಸಲಿ ದೇಶ ಭಕ್ತರು? ಯಾರು ನಕಲಿ ದೇಶ ಭಕ್ತರು ಎಂಬುದನ್ನು ನಂತರ ನಿರ್ಧರ ಮಾಡೋಣ. ಅದಕ್ಕೆ ಮೊದಲು ಜನರ ಕಷ್ಟಕ್ಕೆ ಸ್ಪಂದಿಸಿರಿ. ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸರ್ಕಾರವೇ ನಡೆಯುತ್ತಿಲ್ಲ, ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ. ತಮ್ಮ ಸಮಸ್ಯೆ, ಗೊಂದಲಗಳನ್ನು ಪರಿಹರಿಸಿಕೊಳ್ಳಲು ವಿಫಲರಾದ ಬಿಜೆಪಿ ನಾಯಕರು ಜನರ ಗಮನ ಬೇರೆಡೆಗೆ ಸೆಳೆಯಲು ಭಾವನಾತ್ಮಕ ಅಂಶಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಕರ್ನಾಟಕ ಸರ್ಕಾರವು ಜನೋತ್ಸವ ಮಾಡಲು ಎರಡು ಮೂರು ಬಾರಿ ತೀರ್ಮಾನವಾಗಿ ಮತ್ತೆ ಮುಂದೂಡಲ್ಪಟ್ಟಿದೆ. ಜನರ ಆಕ್ರೋಶ ತೀವ್ರವಾಗಿದ್ದರಿಂದ ಅದನ್ನು ಮುಂದೂಡಲಾಗಿದೆ. ತಮ್ಮ ಸಾಧನೆ ಶೂನ್ಯ ಇರುವುದರಿಂದಲೇ ಜನೋತ್ಸವ ಬಿಟ್ಟು ಸಾರ್ವಕರ್ ಉತ್ಸವ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಚಿವರುಗಳು ತಮ್ಮ ತಮ್ಮ ಜಿಲ್ಲೆಗಳಿಗೆ ಹೋಗಿ ಎಂದು ಸ್ವತಃ ಮುಖ್ಯಮಂತ್ರಿ ಕಣ್ಣೀರು ಹಾಕುತ್ತಾ ಹೇಳಿದರೂ ಯಾವೊಬ್ಬ ಸಚಿವರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಸಚಿವರು ಹೊಗದ ಕಾರಣ ಪಾಪ ಮುಖ್ಯಮಂತ್ರಿ ಅವರೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪ್ರವಾಹದ ವರದಿಯನ್ನು ಮಂತ್ರಿಗಳಿಗೆ ನೀಡುವ ಪರಿಸ್ಥಿತಿ ನಿರ್ಮಾಣವಾಯಿತು. ಇದು ನಮ್ಮ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.
ಸಚಿವ ಮುನಿರತ್ನ ವಿರುದ್ಧ ಕೆಂಪಣ್ಣ ಮಾಡಿರುವ ಭ್ರಷ್ಟಾಚಾರದ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಈಗ ಕೆಂಪಣ್ಣನವರೇ ನೇರವಾಗಿ ಮಾಧ್ಯಮಗಳ ಎದುರು ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಎಂದರು. ಹೀಗಿದ್ದರೂ ಸಹ ಮುಖ್ಯಮಂತ್ರಿಗಳು ವಿಶೇಷ ತನಿಖಾ ತಂಡವನ್ನ ಯಾಕೆ ರಚಿಸಿಲ್ಲ? ನ್ಯಾಯಾಂಗ ತನಿಖೆಯನ್ನು ಏಕೆ ಮಾಡಿಸಲಿಲ್ಲ? ನಾವು ಶುದ್ಧವೆಂದು ಹೇಳುವವರು ಈಗೇಕೆ ಸುಮ್ಮನಿದ್ದಾರೆ ಎಂದು ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಎಸ್ಸಿ ಪರೀಕ್ಷೆ ಬರೆದಿರುವವರಿಗೂ ಈಗ ಸಂಕಷ್ಟ ಎದುರಾಗಿದೆ. ಶಾಂತಿ ಸುವ್ಯವಸ್ಥೆಗೆ ಅಪಾಯ ಬಂದಿರುವುದರಿಂದ ವ್ಯಾಪಾರ ವ್ಯಹಾರಗಳು ಕುಸಿಯುತ್ತಿವೆ. ಇದು ಜನರ ದೈನಂದಿನ ಬದುಕಿಗೆ ಧಕ್ಕೆ ತರುತ್ತದೆ. ಅಷ್ಟೇ ಅಲ್ಲ, ರಾಜ್ಯದ ತೆರಿಗೆ ಆದಾಯದ ಮೇಲೆಯೂ ಪರಿಣಾಮ ಬೀರುತ್ತದೆ. ಬಿಜೆಪಿಯವರು ಜನರ ಕಣ್ಣೀರು ಒರೆಸುವುದು ಬಿಟ್ಟು ಭಾವನಾತ್ಮಕ ವಿಷಯಗಳಿಗೆ ಒತ್ತು ಕೊಡುತ್ತಿದೆ. ಇವರ ಚರ್ಚೆಗೆ ನಾವು ಖಂಡಿತ ಸಿದ್ಧರಿದ್ದೇವೆ ಎಂದರು.