ಟಿ. ಗುರುರಾಜ್, ಪತ್ರಕರ್ತರು
ಅಪಾತ್ರ ದಾನವೆಂದು ತಿಳಿದೂ, ರಂಗಾಯಣ ನಿರ್ದೇಶಕ ಸ್ಥಾನ ಕೊಟ್ಟ ರಾಜ್ಯ ಸರ್ಕಾರಕ್ಕೆ ಅಡ್ಡಡ್ಡ ಕಾರ್ಯಪ್ಪನವರು ಋಣ ಸಂದಾಯ ಮಾಡಿದ್ದಾರೆ. ಕಣ್ಣಿಗೆ ರಾಚುವ ಎಲ್ಲ ಸತ್ಯಗಳಿಗೂ ಪೂರ್ಣ ವಿದಾಯ ಹೇಳಿದ್ದಾರೆ.
ಚರಿತ್ರೆಯ ಯಾವ ಚಿತ್ರದಲ್ಲೂ ಕಾಣದ, ಮೀಸೆ ಬೋಳಿಸಿದ ಮತ್ತು ಗಡ್ಡ ಬಿಟ್ಟ ಟಿಪ್ಪೂ ಸುಲ್ತಾನನನ್ನು ಇತಿಹಾಸತಜ್ಞ, ಖ್ಯಾತ ಸಂಶೋಧಕ ಅಡ್ಡಡ್ಡ ಕಾರ್ಯಪ್ಪ ಮೊತ್ತ ಮೊದಲ ಬಾರಿಗೆ ಸಾರ್ವಜನಿಕವಾಗಿ ಹೊರ ಕರೆ ತಂದಿದ್ದಾರೆ.
ಗಿರೀಶ್ ಕಾರ್ನಾಡರ ‘ಟಿಪ್ಪುವಿನ ಕನಸುಗಳು’ ನಾಟಕದ ಪ್ರತಿ ದೃಶ್ಯಕ್ಕೆ ಹಾಗೂ ಆಶಯಕ್ಕೆ ವಿರುದ್ಧವಾಗಿ, ಟಿಪ್ಪುವನ್ನು ಕ್ರೂರಿಯಾಗಿ, ಮತಾಂಧನಾಗಿ ಮಾತ್ರವೇ ಚಿತ್ರಿಸಿರುವ. ಸ್ವಂತಿಕೆಯಿಲ್ಲದೆ , ಸುಳ್ಳು ಕಥನದ ‘ಟಿಪ್ಪುವಿನ ನಿಜಕನಸುಗಳು’ ಅಗ್ರಹಾರ ಪ್ರಣೀತ ನಾಗಪುರದ ಭಾಷಣವಾಗಿತ್ತೇ ಹೊರತು, ಸತ್ಯಕ್ಕೆ ಒಂದಿನಿತೂ ಹತ್ತಿರವಾಗಿರಲೇ ಇಲ್ಲ.
ಹಾಗೆಂದು ಟಿಪ್ಪುವನ್ನು ಇಡಿಯಾಗಿ ಒಪ್ಪಿಕೊಳ್ಳಬೇಕೆಂದು ಬಯಸಲೂಬಾರದು. ಆತನ ಒಪ್ಪು- ತಪ್ಪುಗಳೆರಡನ್ನೂ ಒಪ್ಪವಾದ ತಕ್ಕಡಿಯೊಳಗಿಟ್ಟು ತೂಗಿ ನೋಡಬೇಕಾದ್ದು ಇತಿಹಾಸದ ಕರ್ತವ್ಯವಾಗಬೇಕೇ ಹೊರತು. ಅನ್ನ ಕೊಟ್ಟ ಧಣಿಗಳನ್ನು ಮೆಚ್ಚಿಸಲು ಅಮೇಧ್ಯ ತಿನ್ನಬಾರದು.
ಮೂರೂವರೆ ತಾಸಿನ ಈ ನಾಟಕದ ಉದ್ದಕ್ಕೂ ಜಿಹಾದ್, ಅಲ್ಲಾ ಹೊ ಅಕಬರ, ಇಸ್ಲಾಮ್ ರಾಜ್ಯ ಎನ್ನುವ ಶಬ್ದಗಳಷ್ಟೇ ನೆನಪಿನಲ್ಲುಳಿಯುವಂಥ ದೃಶ್ಯಗಳಿವೆಯೇ ವಿನಃ, ಚರಿತ್ರೆಯೊಂದನ್ನು ಪ್ರಾಮಾಣಿಕವಾಗಿ ಕಟ್ಟಿಕೊಡುವ ಕೆಲಸ ನಡೆದೇ ಇಲ್ಲ.
ರಾಜಕಾರಣ ಮತ್ತು ಧರ್ಮಕಾರಣ ಎರಡೂ ಒಂದೇ ಎಂದು ಕಾಯಾ ವಾಚಾ ಮನಸಾ ನಂಬಿರುವ ಅಡ್ಡಡ್ಡರಿಗೆ, ಮೈಸೂರು ಇತಿಹಾಸದ ಅವಜ್ಞೆ ಎಷ್ಟಿದೆ ಎಂಬುದಕ್ಕೆ ಅವರದ್ದೇ ರಚನೆಯ ಈ ನಾಟಕವೇ ಅದ್ಭುತ ಸಾಕ್ಷಿ. ಹೈದರ್ ಅಲಿ ಕಾಲಘಟ್ಟದಲ್ಲಿ ಮೈಸೂರನ್ನು ಆಳಿದ ದೊರೆಯ ಹೆಸರೇನೆಂಬುದೇ ಅರಿವಿಲ್ಲದ ಮತ್ತು ಅವರಿಗೆ ಹೈದರ್ ವಿಷವಿಟ್ಟು ಕೊಂದ ಎಂಬ ಮಾತನ್ನು ಬೇರೆ ಬೇರೆ ಪಾತ್ರಗಳ ಮೂಲಕ ಮತ್ತೆ ಮತ್ತೆ ಹೇಳಿಸುವ ಹುಂಬತನ ಹಾಸ್ಯಾಸ್ಪದವೆನಿಸುತ್ತದೆ.
ಕಾರ್ನಾಡರನ್ನು ಟೀಕಿಸುತ್ತಲೇ, ಅವರ ನಾಟಕದ ದೃಶ್ಯಗಳನ್ನು ಪ್ರೇರಣೆಯಾಗಿಟ್ಟುಕೊಂಡೇ, ಟಿಪ್ಪು ವ್ಯಕ್ತಿತ್ವವನ್ನು ಕೆಳ ತುಳಿಯಲೇಬೇಕೆಂಬ ಹಠಕ್ಕೆ ಬಿದ್ದಂತೆ ನಾಟಕ ಕಟ್ಟಲು ಹೆಣಗಾಡಿ, ಅವರಿವರ ಆಶೀರ್ವಾದದಿಂದ ಸುಳ್ಳಿಗೆ ನಿಜದ ಹೆಸರಿಟ್ಟಿರುವ ಅಡ್ಡಡ್ಡ,, ೧೭೯೧-೯೨ ರ ಅವಧಿಯ ಶೃಂಗೇರಿ ಮಠದ ಸಂಬಂಧ ಮತ್ತು ಪತ್ರ ಪ್ರಸಂಗವನ್ನು ೧೭೯೯ ಮೇ ೪ ರ ಕೊನೆಯ ದಿನಕ್ಕೆ ತಳ್ಳಿ ಬಿಟ್ಟಿದ್ದಾರೆ.
‘ಇವನನ್ನು ಜನ ಹುಲಿ ಅಂತಾ ಇದ್ರು, ನೋಡೋಕೆ ಹುಲಿ ತರಾನೆ ಇಲ್ಲ’ ಎಂಬ ಹಾಗೂ ಟಿಪ್ಪು ತನಗೆ ತಾನೇ ಹೇಳಿಕೊಳ್ಳುವ ‘ನಾನು ನಿಜವಾಗಿಯೂ ಹುಲಿಯಾ, ಇಲ್ಲಾ ಬಣ್ಣ ಬಳಿದುಕೊಂಡ ನರಿಯಾ…’ ಎಂದು ಕೇಳಿಕೊಳ್ಳುವ ಡಯಲಾಗುಗಳ ಮೂಲಕ ಒಂದು ವರ್ಗದ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಕ್ಷುಲ್ಲಕರಾಗುವ ನಿರ್ದೇಶಕ, ಇತಿಹಾಸದಲ್ಲಿ ಇಲ್ಲವೇ ಇಲ್ಲದ ಉರಿಗೌಡ- ನಂಜೇಗೌಡರೆಂಬ ವಾಟ್ಸ್ ಆಪ್ ಸಂಶೋಧನಾ ಪಾತ್ರಗಳಿಗೆ ಜೀವ ಕೊಟ್ಟಿರುವುದು, ಚರಿತ್ರೆಗೆ ಬಗೆದ ಮಹಾದ್ರೋಹ.
ಬರೆದರೆ ಬಹಳವಾದೀತೆಂಬ ನೈತಿಕ ಎಚ್ಚರದಿಂದಾಗಿ ಒಂದೆರಡೇ ಮಾತುಗಳಲ್ಲಿ ವಿರಾಮವಿಡುತ್ತೇನೆ-
ಎಲ್ಲ ಪಾತ್ರಧಾರಿಗಳೂ, ಸಣ್ಣ-ಸಣ್ಣ ಎಡವಿಕೆಗಳ ನಡುವೆಯೂ ಅದ್ಭುತವಾಗಿ ಅಭಿನಯಿಸಿದ್ದಾರೆ. ನಿರ್ದೇಶಕರ ಕೊಳಕು ಮನಸ್ಸು, ಟಿಪ್ಪು ಬಗೆಗಿನ ದ್ವೇಷ ಮತ್ತು ಅಧಿಕಾರ ಕೊಟ್ಟವರಿಗೆ ತೋರಿಸಿರುವ ‘ಸ್ವಾಮಿ ನಿಷ್ಠೆ’ ಹೊರತುಪಡಿಸಿದರೆ, ಸಂಗೀತ, ಬೆಳಕು, ರಂಗ ಸಜ್ಜಿಕೆ ಎಲ್ಲವೂ ಚೆಂದವಾಗಿವೆ.
ಕೊನೆಯ ಮಾತು- ಈ ನಾಟಕದ ನಿಜವನ್ನು ಸಾಬೀತುಪಡಿಸಲು ಅಡ್ಡಡ್ಡರು ಸಿದ್ಧವಿದ್ದರೆ, ಅವರು ಕರೆದಲ್ಲಿಗೆ ಹೋಗಲು ಸಿದ್ದ ಎಂಬುದನ್ನು ಪುನರುಚ್ಚರಿಸುತ್ತೇನೆ.
ಕಾಮಲೆ ಕಣ್ಣಿಗೆ ಕಾಣುವದೆಲ್ಲ ಹಳದಿ ಎಂಬ ಜನಪದರ ಮಾತು ಸಾಕು ಇವರ ಸಾಧನೆಯ ಟಿಪ್ಪು ನಿಜ ಕನಸುಗಳು ನಾಟಕ ಕೃತಿಗೆ.
ವಿಮರ್ಶೆ ಕಿವುಡರ ಮುಂದೆ ಕಿನ್ನರಿ ಬಾರಿಸಿದಂತೆ.