ಕೋಲಾರ: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ಬಿಜೆಪಿಯವರು ಬೃಹತ್ ಪ್ರತಿಭಟನೆ ಹಾಗೂ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಅವರು ಪ್ರತಿಭಟನೆ ನಡೆಸುವ ಸ್ಥಾನದಲ್ಲಿದ್ದು, ನಾವು ಉತ್ತರ ಕೊಡುವ ಸ್ಥಾನದಲ್ಲಿದ್ದೇವೆ. ಹೀಗಾಗಿ ಉತ್ತರ ನೀಡುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕೋಲಾರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಮುಡಾ ವಿಚಾರವಾಗಿ ಬಿಜೆಪಿಯವರು ಬೆಂಗಳೂರಿನಿಂದ ಮೈಸೂರು ಚಲೋ ಹಮ್ಮಿಕೊಂಡಿರುವುದಕ್ಕೆ ಈಗಾಗಲೇ ಸಿಎಂ ಪ್ರತಿಕ್ರಿಯಿಸಿದ್ದಾರೆ. ಆದರೂ ಬಿಜೆಪಿಯವರು ಪಾದಯಾತ್ರೆ ಹಮ್ಮಿಕೊಂಡಿದ್ದು, ನಾವು ಉತ್ತರ ನೀಡುತ್ತೇವೆ ಎಂದರು.
ವಾಲ್ಮೀಕಿ ನಿಗಮದ ಹಗರಣ ಸಂಬಂಧ ಎಸ್‌ಐಟಿ, ಸಿಬಿಐ, ಇಡಿ ತನಿಖೆ ನಡೆಯುತ್ತಿದೆ. ಅವರು ನ್ಯಾಯಾಲಯಕ್ಕೆ ನೀಡುವ ವರದಿ ಅಂತಿಮವಾಗಲಿದೆ. ತನಿಖಾ ಹಂತದಲ್ಲಿರುವ ಕಾರಣ ಸದನದಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲ. ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರೂ ಎಲ್ಲ ಜವಾಬ್ದಾರಿ ಅವರ ಮೇಲೆ ಇರುವುದಿಲ್ಲ. ಆಯಾ ಇಲಾಖೆ ಸಚಿವರು, ಅಧಿಕಾರಿಗಳು ಜವಾಬ್ದಾರಿಯಾಗಲಿದ್ದಾರೆಯೇ ಹೊರತು ಸಿಎಂ ನೇರ ಹೊಣೆಯಲ್ಲ ಎಂದ ಸತೀಶ್ ಜಾರಕಿಹೊಳಿ ಅವರು, ಎಸ್ಸಿಪಿ, ಟಿಎಸ್ಪಿ ಹಣ ಗ್ಯಾರಂಟಿಗಳಿಗೆ ದುರುಪಯೋಗದ ವಿಚಾರವಾಗಿ ಸಂಬಂಧಪಟ್ಟ ಇಲಾಖೆಯ ಸಚಿವರು ಮಾಹಿತಿ ನೀಡಬೇಕೇ ಹೊರತು ನಾವು ಹೇಳುವುದು ಸರಿಯಲ್ಲ ಎಂದರು.
ನಮ್ಮ ಭಾಗದಲ್ಲಿ (ಬೆಳಗಾವಿ) ಎಲ್ಲ ನದಿ, ಡ್ಯಾಂಗಳು ಭರ್ತಿಯಾಗಿದೆ. ಹೆಚ್ಚಿನ ನೀರನ್ನು ಹೊರಗೆ ಬಿಡಲಾಗುತ್ತಿದ್ದು, ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಮುಳುಗಡೆ ಪ್ರದೇಶದ ಜನರನ್ನು ಸ್ಥಳಾಂತರ ಮಾಡುತ್ತಿದ್ದೇವೆ. ಆದರೂ ಏನು ಕೆಲಸ ಮಾಡುತ್ತಿಲ್ಲವೆಂದು ಬಿಜೆಪಿಯವರು ನಮ್ಮ ಮೇಲೆ ಆರೋಪ ಮಾಡುತ್ತಾರೆ ಎಂದು ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.
ಕೆಲಸ ಮಾಡುವವರಿಗೆ ಸಲಹೆ ನೀಡಬೇಕೇ ಹೊರತು ರಾಜಕೀಯ ಆರೋಪ ಮಾಡಬಾರದು. ಯಾರೂ ಶೇ. 100 ರಷ್ಟು ಪ್ರಮಾಣದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅವರ ಆಡಳಿತದಲ್ಲಿಯೂ ವ್ಯತ್ಯಾಸಗಳಾಗಿರುತ್ತವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರಾದ ಬಾಲ ಗೋವಿಂದ್, ವೆಂಕಟರಾಮ್ ಮತ್ತಿತರರಿದ್ದರು.