ನವದೆಹಲಿ: ಇಂದು ಸಹ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಮತ್ತೆ ಲೀಟರ್‍ಗೆ 80 ಪೈಸೆ ಹೆಚ್ಚಳ ಮಾಡಿವೆ. ತೈಲ ಮಾರುಕಟ್ಟೆ ಕಂಪನಿಗಳು(ಓಎಂಸಿ) ಕಳೆದ ನಾಲ್ಕು ತಿಂಗಳು ತಡೆಯಾಗಿದ್ದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳವನ್ನು ನಿನ್ನೆಯಿಂದ ಮತ್ತೆ ಆರಂಭ ಮಾಡಿವೆ.
ನಿನ್ನೆ 80 ಪೈಸೆ ಹೆಚ್ಚಳವಾಗಿದ್ದು, ಇಂದು ಕೂಡ 80 ಪೈಸೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ನಿಗದಿಯಂತೆ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‍ಗೆ 102.26 ರೂಪಾಯಿ ಇದ್ದರೆ, ಡೀಸೆಲ್ 86.58 ರೂ. ಆಗಿದೆ.
ರಾಜ್ಯದಿಂದ ರಾಜ್ಯಕ್ಕೆ, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮೌಲ್ಯವರ್ಧಿತ ತೆರಿಗೆ ಹಾಗೂ ಸಾಗಣೆ ವೆಚ್ಚ ಆಧರಿಸಿ ತೈಲ ಬೆಲೆಯಲ್ಲಿ ಬದಲಾವಣೆ ಇರುತ್ತದೆ.
ಇದನ್ನು ಓದಿ: 137 ದಿನಗಳ ಬಳಿಕ ಮತ್ತೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರಗಳು
ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ ಪೆಟ್ರೋಲ್ ದರ 96.21 ರೂಪಾಯಿಯಿಂದ 97.01ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ 88.2 ರೂ.ನಿಂದ 86.67ಕ್ಕೆ ಏರಿಕೆಯಾಗಿದೆ. ವಾಣಿಜ್ಯ ನಗರಿ ಮುಂಬಯಿಯಲ್ಲಿ ಪೆಟ್ರೋಲ್ 111.67 ರೂ. ಇದ್ದರೆ ಡೀಸೆಲ್ 95.85 ರೂ.ಗಳಾಗಿದೆ. 137 ದಿನಗಳ ಬಳಿಕ ನಿನ್ನೆ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ರೂ.50, ಪೆಟ್ರೋಲ್, ಡೀಸೆಲ್ ಬೆಲೆ 80 ಪೈಸೆ ಏರಿಕೆ ಮಾಡಲಾಗಿತ್ತು.
ಉತ್ತರ ಪ್ರದೇಶ, ಪಂಜಾಬ್, ಗೋವಾ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ನವೆಂಬರ್ 4 ರಿಂದ ಬೆಲೆಗಳು ಸ್ಥಿರವಾಗಿದ್ದವು. ಈ ಅವಧಿಯಲ್ಲಿ ಕಚ್ಚಾ ವಸ್ತುಗಳ(ಕಚ್ಚಾ ತೈಲ) ಬೆಲೆ ಪ್ರತಿ ಬ್ಯಾರೆಲ್‌ಗೆ 30 ಅಮೆರಿಕನ್ ಡಾಲರ್ ಏರಿಕೆಯಾಗಿತ್ತು. ರಷ್ಯಾ–ಉಕ್ರೇನ್ ಕದನ ಆರಂಭವಾದ ನಂತರದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 13 ವರ್ಷಗಳ ಗರಿಷ್ಠ ಮಟ್ಟವಾದ 140 ಡಾಲರ್‌ಗೆ ತಲುಪಿತ್ತು. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಮಂಗಳವಾರ 113 ಡಾಲರ್ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಗೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ನಿಗದಿ ಮಾಡುವ ವ್ಯವಸ್ಥೆಯು 2017ರ ಜೂನ್‌ನಲ್ಲಿ ಜಾರಿಗೆ ಬಂತು. ಆದರೆ, 2021ರ ನವೆಂಬರ್ 4ರಿಂದ ಬೆಲೆಯಲ್ಲಿ ಬದಲಾವಣೆ ಮಾಡಿರಲಿಲ್ಲ.
ಕಚ್ಚಾ ತೈಲದ ಬೆಲೆ ಹೆಚ್ಚಾಗಿದ್ದರೂ, ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸದೆ ಇದ್ದುದರಿಂದ ಆಗಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು ಮತ್ತೆ ದರ ಏರಿಕೆಯನ್ನು ಮಾಡಲಾಗುತ್ತಿದೆ ಎನ್ನಲಾಗಿದೆ. ಈಗಿನ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಪ್ರಮಾಣವು ಮತ್ತಷ್ಟು ಜಾಸ್ತಿ ಆಗಬಹುದು ಎಂಬ ಆತಂಕ ವ್ಯಕ್ತವಾಗಿದೆ.