ಸಾರ್ವತ್ರಿಕ ಮುಷ್ಕರ: ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಪ್ರದರ್ಶನ

ಮಂಗಳೂರು:‌ ಕಾರ್ಮಿಕ ವರ್ಗದ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಮಹಾಮುಷ್ಕರದ ಅಂಗವಾಗಿ ಇಂದು ಮಂಗಳೂರಿನಲ್ಲಿ ಕಾರ್ಮಿಕರ ಮೆರವಣಿಗೆ ಹಾಗೂ ಪ್ರತಿಭಟನಾ ಪ್ರದರ್ಶನ ನಡೆಯಿತು.

ಸಾವಿರಾರು ಸಂಖ್ಯೆಯಲ್ಲಿ ವಿವಿಧ ವಿಭಾಗದ ಕಾರ್ಮಿಕರು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕ್ಲಾಕ್‌ ಟವರ್‌ವರೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಪ್ರತಿಭಟನಾ ಸಮಾವೇಶನ್ನುದ್ದೇಶಿಸಿ ಮಾತನಾಡಿದ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೇರಿದ ಕೇಂದ್ರದ ನರೇಂದ್ರ ಮೋದಿ ಸರಕಾರವು ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯುತ್ತಾ ದೇಶದ ಸಂಪತ್ತನ್ನೇ ಮಾರಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರ ಸಂಘಟಿತ ಹೋರಾಟದ ಫಲವಾಗಿ ರೂಪುಗೊಂಡಿದ್ದ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ, ಕಾರ್ಪೊರೇಟ್ ಪರವಾದ 4 ಸಂಹಿತೆಗಳನ್ನು ಮಾಡುವ ಮೂಲಕ ಮತ್ತೆ ಕಾರ್ಮಿಕರನ್ನು ಜೀತದಾಳುಗಳನ್ನಾಗಿ ದುಡಿಸುವ ಹುನ್ನಾರ ಅಡಗಿದೆ. ಬೆಲೆಯೇರಿಕೆಯಿಂದ ಕಂಗೆಟ್ಟ ಕಾರ್ಮಿಕರು ಸಾಮಾಜಿಕ ಭದ್ರತೆಯಿಲ್ಲದೆ, ಕನಿಷ್ಠ ಕೂಲಿಯಿಲ್ಲದೆ ತೀರಾ ಶೋಚನೀಯ ಬದುಕು ಸಾಗಿಸುವಂತಾಗಿದೆ. ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ತ್ಯಾಗ ಬಲಿದಾನದ ಪರಂಪರೆ ಹೊಂದಿದ ಕಾರ್ಮಿಕ ವರ್ಗ ಇಂದು ಮತ್ತೆ ದೇಶದ ರಕ್ಷಣೆಗಾಗಿ ಸಂಘಟಿತ ಹೋರಾಟ ನಡೆಸುವ ಮೂಲಕ ಜನತೆಯ ಬದುಕನ್ನು ಉಳಿಸಬೇಕಾಗಿದೆ ಎಂದರು.

ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಚ್.ವಿ.ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರಕಾರದ ಜನವಿರೋಧಿ ತೆರಿಗೆ ನೀತಿ ಹಾಗೂ ಜಿಎಸ್‌ಟಿಯಂತಹ ಕ್ರಮಗಳಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆಗಳು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದರು.

ಬ್ಯಾಂಕ್ ನೌಕರರ ಸಂಘಟನೆಯ ರಾಜ್ಯ ನಾಯಕರಾದ ವಿನ್ಸೆಂಟ್ ಡಿಸೋಜ ಮಾತನಾಡಿ, ಬ್ಯಾಂಕ್ ವಿಲೀನೀಕರಣದ ಹೆಸರಿನಲ್ಲಿ ಲಾಭದಲ್ಲಿದ್ದ ಅನೇಕ ಬ್ಯಾಂಕುಗಳನ್ನು ಇಲ್ಲವಾಗಿಸಿ, ಇರುವ ಉದ್ಯೋಗಗಳನ್ನು ನಷ್ಟಗೊಳಿಸುವ ಮೂಲಕ ದೇಶದ ಆರ್ಥಿಕತೆಯನ್ನೇ ಸರ್ವನಾಶ ಮಾಡಿದ ಕೇಂದ್ರ ಸರಕಾರದ ವಿರುದ್ಧ ಬ್ಯಾಂಕ್ ನೌಕರರು ಮಾತ್ರವಲ್ಲದೆ ಇಡೀ ದೇಶದ ಜನತೆ ಒಂದಾಗಬೇಕಾಗಿದೆ ಎಂದರು.

ಎಐಟಿಯುಸಿ ಜಿಲ್ಲಾ ನಾಯಕ ಸೀತಾರಾಮ ಬೇರಿಂಜ ಮಾತನಾಡಿ, ಕೋಟ್ಯಂತರ ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯಿಲ್ಲ. ಪ್ರಸಕ್ತ ಸಂದರ್ಭದಲ್ಲಿ ದುಡಿಯುವ ಕಾರ್ಮಿಕರಿಗೆ ಮಾಸಿಕ ಕನಿಷ್ಠ ಕೂಲಿ 24,000 ರೂ. ಸಿಗಬೇಕೆಂದು ಒತ್ತಾಯಿಸಿದರೆ ಕೇಂದ್ರ ಸರಕಾರವು ಕೇವಲ ದಿನಕ್ಕೆ 175 ರೂ. ಕೂಲಿ ನಿಗದಿಪಡಿಸಿ ಕಾರ್ಮಿಕರನ್ನು ಅಪಹಾಸ್ಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯನ್ನುದ್ದೇಶಿಸಿ ಐಎನ್‌ಟಿಯುಸಿ ನಾಯಕರಾದ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಎಐಸಿಸಿಟಿಯು ನಾಯಕರಾದ ಮೋಹನ್, ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ರಾಜ್ಯಾಧ್ಯಕ್ಷ ರಾಘವ ಕೆ, ವಿಮಾ ನೌಕರರ ಸಂಘಟನೆಯ ಮುಖಂಡ ಅಲ್ಬನ್ ಮಸ್ಕರೇನಸ್, ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕ್ರಷ್ಣ ಶೆಟ್ಟಿ, ಬ್ಯಾಂಕ್ ನೌಕರರ ಸಂಘಟನೆಯ ನಾಯಕ ಪುರುಷೋತ್ತಮ ಪೂಜಾರಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಿಐಟಿಯು ನಾಯಕರಾದ ಯೋಗೀಶ್ ಜಪ್ಪಿನಮೊಗರು, ವಸಂತ ಆಚಾರಿ, ಪದ್ಮಾವತಿ ಶೆಟ್ಟಿ, ರಮಣಿ ಮೂಡುಬಿದಿರೆ, ನೋಣಯ್ಯ ಗೌಡ, ಶಿವ ಕುಮಾರ್, ಜಯಂತ ನಾಯಕ್, ಬಿ.ಕೆ.ಇಮ್ತಿಯಾಝ್, ಮುಹಮ್ಮದ್ ಮುಸ್ತಫಾ, ಹರೀಶ್ ಪೂಜಾರಿ, ವಿಲ್ಲಿ ವಿಲ್ಸನ್, ಸಂತೋಷ್ ಆರ್. ಎಸ್., ಬಿಜು ಅಗಸ್ಟಿನ್, ರವಿಚಂದ್ರ ಕೊಂಚಾಡಿ, ದಿನೇಶ್ ಶೆಟ್ಟಿ, ಜಯಂತಿ ಶೆಟ್ಟಿ, ಭಾರತಿ ಬೋಳಾರ, ರಾಧಾ ಮೂಡುಬಿದಿರೆ, ಗಿರಿಜಾ ಮೂಡುಬಿದಿರೆ, ಶಂಕರ ವಾಲ್ಪಾಡಿ, ವಸಂತಿ ಕುಪ್ಪೆಪದವು, ಎಐಟಿಯುಸಿ ನಾಯಕರಾದ ಕರುಣಾಕರ್, ಸುರೇಶ್ ಕುಮಾರ್, ವಿ.ಕುಕ್ಯಾನ್, ಪುಷ್ಪಾರಾಜ್, ಜಗತ್ಪಾಲ್, ಸುಲೋಚನಾ, ಐಎನ್‌ಟಿಯುಸಿ ನಾಯಕರಾದ ಮನೋಹರ್ ಶೆಟ್ಟಿ, ಹುಸೈನ್, ರಮಾನಾಥ್, ಎಐಸಿಸಿಟಿಯು ನಾಯಕರಾದ ಸತೀಶ್, ಭರತ್, ಬ್ಯಾಂಕ್ ನೌಕರರ ಸಂಘಟನೆಯ ನಾಯಕರಾದ ಫಣೀಂದ್ರ, ಸುರೇಶ್ ಹೆಗ್ಡೆ, ಲೋಕೇಶ್,ವಿಮಾ ನೌಕರರ ಸಂಘಟನೆಯ ಮುಖಂಡರಾದ ಬಿ.ಎನ್.ದೇವಾಡಿಗ, ರಾಘವೇಂದ್ರ ರಾವ್, ವಸಂತ ಕುಮಾರ್, ರೈತ ನಾಯಕರಾದ ಕೆ.ಯಾದವ ಶೆಟ್ಟಿ, ಯುವಜನ ನಾಯಕರಾದ ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ರಫೀಕ್ ಹರೇಕಳ, ಮನೋಜ್ ವಾಮಂಜೂರು ಮುಂತಾದವರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *