- ಸಿಎಎ ವಿರೋಧಿಸಿ ಶಾಹಿನ್‍ಬಾಗ್ ನಲ್ಲಿ ನಡೆದ ಪ್ರತಿಭಟನೆ ಸಂಬಂಧ ವಿಚಾರಣೆ
ನವದೆಹಲಿ: ಶಾಹೀನ್ಬಾಗ್ನಂತಹ ಸಾರ್ವಜನಿಕ ಸ್ಥಳಗಳನ್ನು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಬಳಸಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಸಂಜಯ್ ಕೌಲ್ ನೇತೃತ್ವದ ಪೀಠ ಈ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆ ಮತ್ತು ಸ್ಥಳಗಳನ್ನು ಪ್ರತಿಭಟನೆಗಾಗಿ ಬಳಸಿಕೊಳ್ಳಲು ಕಾನೂನು ಅವಕಾಶ ನೀಡುವುದಿಲ್ಲ ಎಂದು ಪೀಠ ತಿಳಿಸಿದೆ, ಶಾಹೀನ್ ಬಾಗ್ ಇರಲಿ ಮತ್ಯಾವುದೇ ಸಾರ್ವಜನಿಕ ಸ್ಥಳವಿರಲಿ ಅವನ್ನು ಪ್ರತಿಭಟನೆ ಹಕ್ಕಕ್ಕಾಗಿ ಬಳಸಿಕೊಳ್ಳುವಂತಿಲ್ಲ. ಸಂವಿಧಾನವೂ ಪ್ರತಿಭಟನೆಯ ಹಕ್ಕನ್ನು ನೀಡುತ್ತದೆ. ಹಾಗೇಂದ ಮಾತ್ರಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಮಾಡುವುದಲ್ಲ . ಅದಕ್ಕೆ ಕಾನೂನಿಂದ ಅನುಮೋದನೆ ಪಡೆದು ಗೊತ್ತುಪಡಿಸಿದ ಪ್ರದೇಶದಲ್ಲಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ
ಸಿಎಎ ವಿರೋಧಿಸಿ ಶಾಹೀನ್ ಬಾಗ್ನಲ್ಲಿ ನಡೆಸಲಾದ ಅನಿರ್ಧಿಷ್ಟಾವಧಿ ಪ್ರತಿಭಟನೆ ಕುರಿತು ಈ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿದೆ. ಶಾಹೀನ್ಬಾಗ್ ಪ್ರದೇಶದ ಪ್ರತಿಭಟನೆಯಿಂ ರಸ್ತೆಗಳು ಬಂದ್ ಆಗಿದ್ದು, ಅವನ್ನು ತೆರವುಗೊಳಿಸುವಲ್ಲಿ ದೆಹಲಿ ಪೊಲೀಸ್ ಮತ್ತು ಸರ್ಕಾರ ನಿಷ್ಕ್ರಿಯವಾಗಿದೆ ಎಂದು ವಕೀಲ ಅಮಿತ್ ಸಾಹ್ನಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.
ದೆಹಲಿಯ ಹೃದಯಭಾಗದಲ್ಲಿರುವ ಈ ರಸ್ತೆಗಳಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆಯಿಂದ ಸಾರ್ವಜನಿಕರು ರಸ್ತೆ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗಿತ್ತು ಎಂಬ ಅಂಶವನ್ನು ಸಾಹ್ನಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಈ ಕುರಿತು ಈ ಹಿಂದೆ ಕೂಡ ನ್ಯಾಯಾಲಯ ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ದೆಹಲಿ ಪೊಲೀಸರಿಗೆ ತಿಳಿಸಿತ್ತು. ಆದರೆ, ಪೊಲೀಸರಿಂದ ಯಾವುದೇ ತೆರವು ಕಾರ್ಯ ನಡೆದಿರಲಿಲ್ಲ. ಪ್ರತಿಭಟನಾಕಾರರನ್ನು ಈ ಸಾರ್ವಜನಿಕ ಸ್ಥಳದಿಂದ ತೆರವು ಮಾಡುವಲ್ಲಿ ವಿಫಲರಾಗಿದ್ದರು ಎಂದು ಕೂಡ ಇದೇ ವೇಳೆ ನ್ಯಾಯಾಲಯ ತಿಳಿಸಿದೆ.
ಇದೇ ವೇಳೆ ದೆಹಲಿ ಆಡಳಿತ ವಿರುದ್ಧ ಪರೋಕ್ಷವಾಗಿ ತಿಳಿಸಿರುವ ನ್ಯಾಯಾಲಯ ಸಾರ್ವಜನಿಕ ಸ್ಥಳಗಳನ್ನು ಸಂಚಾರ ಮುಕ್ತವಾಗಿರಿಸಿಕೊಳ್ಳಬೇಕು. ಪ್ರತಿಭಟನೆ ನಡೆದರೆ, ಅವರನ್ನು ತೆರವುಗೊಳಿಸಲು ಪ್ರತಿಭಟನಾಕಾರರೊಂದಿಗೆ ಮಾತುಕತೆ ಮಾಡಿ ಮನವೊಲಿಸಬೇಕು. ಅದನ್ನು ಬಿಟ್ಟು ನ್ಯಾಯಾಲಯದ ಆದೇಶದವರೆಗೂ ಕಾಯುವುದಲ್ಲ ಎಂದು ಚಾಟಿ ಬೀಸಿದೆ.