ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆ ಬಗ್ಗೆ ಸ್ವಾಮೀಜಿಗಳ ವಿರೋಧಕ್ಕೆ ಸರ್ಕಾರ ಮಣಿಯದಿರಲಿ: ವಿದ್ಯಾರ್ಥಿಗಳ ಆಗ್ರಹ

ಬೆಂಗಳೂರು: ಮಕ್ಕಳಿಗೆ ಅಪೌಷ್ಠಿಕತೆ ನಿವಾರಣೆಗಾಗಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದಲ್ಲಿ 3 ದಿನಗಳ ಕಾಲ ಮೊಟ್ಟೆ ಮತ್ತು ಬಾಳೇಹಣ್ಣು ವಿತರಣೆ ಮಾಡುವ ರಾಜ್ಯ ಸರ್ಕಾರದ ಆದೇಶವನ್ನು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ರಾಜ್ಯ ಸಮಿತಿ ಸ್ವಾಗತಿಸಿದೆ. ಕೆಲವು ಮಠಾಧೀಶರು ಸರ್ಕಾರದ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ಒತ್ತಡ ಹಾಕುತ್ತಿರುವುದು ಸರಿಯಲ್ಲ ಎಂದು ಎಸ್‌ಎಫ್‌ಐ ಮನವಿ ಮಾಡಿದೆ.

ಇಂದು ಎಸ್‌ಎಫ್‌ಐ ಸಂಘಟನೆ ರಾಜ್ಯ ನಿಯೋಗವು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಎಸ್‌ಎಫ್‌ಐ ಸಂಘಟನೆಯು ಮೊಟ್ಟೆಯನ್ನು ತಿನ್ನುವುದು ಹಾಗೂ ತಿನ್ನದಿರುವುದನ್ನು ಮಕ್ಕಳ ಆಯ್ಕೆಯಾಗಿರುತ್ತದೆ ಇದನ್ನೇ ತಿನ್ನಬೇಕು, ಇದನ್ನೇ ತಿನ್ನಬಾರದೆಂದು ಆಹಾರದ ಹಕ್ಕಿನ ಮೇಲೆ ಸ್ವಾಮೀಜಿಗಳು ದಾಳಿ ಮಾಡುವುದನ್ನು ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ ಎಂದಿದೆ.

ರಾಜ್ಯದಲ್ಲಿ ಶಾಲಾ ಮಕ್ಕಳ ಅಪೌಷ್ಠಿಕತೆ ನಿವಾರಣೆಗಾಗಿ ಕಲ್ಯಾಣ ಕರ್ನಾಟಕದ ಕೊಪ್ಪಳ, ಬೀದರ್‌, ಯಾದಗಿರಿ, ಕಲಬುರಗಿ, ಬೀದರ್‌, ಬಳ್ಳಾರಿ, ರಾಯಚೂರು ಸೇರಿದಂತೆ ಬಿಜಾಪುರ ಜಿಲ್ಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಅಪೌಷ್ಠಿಕತೆ ಮತ್ತು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ರಾಜ್ಯದ ಅತೀ ಹಿಂದುಳಿದ ಪ್ರದೇಶವಾದ ಹೈದ್ರಾಬಾದ್‌ ಕರ್ನಾಟಕದ ಈಗೀನ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಕ್ಕಳ ಅಪೌಷ್ಠಿಕತೆಯ ಪ್ರಮಾಣ ಯಾದಗಿರಿ- ಶೇ. 74, ಕಲಬುರಗಿ- ಶೇ. 72.4, ಬಳ್ಳಾರಿ- ಶೇ. 72.3, ಕೊಪ್ಪಳ- ಶೇ. 70.7, ರಾಯಚೂರು- ಶೇ. 70.6, ಬೀದರ್-‌ ಶೇ. 69.1, ಬಿಜಾಪುರ- ಶೇ. 68ರಷ್ಟು ಇದೆ.

ಇವೆಲ್ಲವೂದರ ನಡುವೆ ಕೆಲವು ಮಠದ ಸ್ವಾಮೀಜಿಗಳು ಜಾತಿ ಮತ್ತು ಧಾರ್ಮೀಕತೆ, ನಂಬಿಕೆಯ ಹೆಸರಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಮೊಟ್ಟೆ ವಿತರಣೆಗೆ ಅಡ್ಡಿಪಡಿಸುತ್ತಿದ್ದಾರೆ.  ಅಪೌಷ್ಠಿಕತೆ ಸಮಸ್ಯೆಯ ನಿವಾರಣೆಗೆ ಸ್ವಾಮೀಜಿಗಳು ಶ್ರಮವಹಿಸಲಿ ಅದನ್ನು ಬಿಟ್ಟು ಜಾತಿ, ಧರ್ಮದ ಹೆಸರಿನಲ್ಲಿ, ಸಮಾಜದಲ್ಲಿ ಅಶಾಂತಿಯನ್ನು ಸೃಷ್ಠಿ ಮಾಡುವ ಸ್ವಾಮೀಜಿಗಳ ಕ್ಷುಲ್ಲಕ ಮನಸ್ಥಿತಿಯನ್ನು ಎಸ್‌ಎಫ್‌ಐ ಸಂಘಟನೆ ವಿರೋಧಿಸುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಿದೆ.

ಮೊಟ್ಟೆ ಮತ್ತು ಬಾಳೇಹಣ್ಣು ವಿತರಣೆ ನಂತರ ಇದೇ ತಿಂಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಶೇ.10 ರಿಂದ 12ರಷ್ಟು ಏರಿಕೆ ಕಂಡುಬಂದಿದೆ. 80ರಷ್ಟು ಮಕ್ಕಳು ಮೊಟ್ಟೆ ಬೇಕೆಂದು ಬೇಡಿಕೆ ಇಟ್ಟಿದ್ದಾರೆ ಸುಮಾರು 14,44,000 ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಮೊಟ್ಟೆ ಸಹಾಯವಾಗಲಿದೆ ಶೇಕಡ 20ರಷ್ಟು ಮಕ್ಕಳಿಗೆ ಬಾಳೇಹಣ್ಣು ವಿತರಣೆ ಮಾಡುವುದರಿಂದ ಯಾವುದೇ ವಿದ್ಯಾರ್ಥಿಗಳಿಗೆ ಬೇಧಭಾವ ತಾರತಮ್ಯ ಮಾಡುವ ಅವಕಾಶವಿರುವುದಿಲ್ಲ ಇದನ್ನು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಲಿ ಎಂದು ಎಸ್‌ಎಫ್‌ಐ ತಿಳಿಸಿದೆ.

ಅಲ್ಲದೇ, ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ವಿವಿಧ ಜಾತಿ-ಧರ್ಮದ ತುಳಿತಕ್ಕೆ ಒಳಗಾದ ಸಮುದಾಯದ, ಬಡವರ, ಹಿಂದುಳಿದ ವರ್ಗ ಸಮುದಾಯದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ರಾಜ್ಯದ ಎಲ್ಲಾ ಶಾಲೆಗಳಿಗೂ ಅಪೌಷ್ಠಿಕತೆ ನಿವಾರಣೆಗಾಗಿ ಮೊಟ್ಟೆ ಮತ್ತು ಬಾಳೇಹಣ್ಣನ್ನು ವಿತರಣೆ ಮಾಡಲು ಸರ್ಕಾರ ಮುಂದಾಗಬೇಕೆಂದು ಎಂದು ತಿಳಿಸಿದೆ.

ನಿಯೋಗದಲ್ಲಿ ಎಸ್‌ಎಫ್‌ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ರಾಜ್ಯ ಉಪಾಧ್ಯಕ್ಷ ದಿಲೀಪ್ ಶೆಟ್ಟಿ, ಪ್ರಜ್ವಲ್, ಭೀಮನಗೌಡ, ಸಂಗಮೇಶ, ಬಸವರಾಜ, ಮಣಿಕಂಠ, ಇತರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *