ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಯುವ ವಕೀಲರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ದಿನನಿತ್ಯ ಬರುವ ಆದಾಯದಿಂದಲೇ ಜೀವನ ನಡೆಸುತ್ತಿರುವ ಕಾರಣ ಅವರಿಗೆ ವಿಶೇಷ ಪ್ಯಾಕೇಜ್ ಗೋಷಣೆ ಮಾಡಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟ(ಎಐಎಲ್‌ಯು) ಆಗ್ರಹಿಸಿದೆ.
ಕೊರೊನಾ ಒಂದು ಮತ್ತು ಎರಡನೇ ಅಲೆಯು ಸಂಧರ್ಭದಲ್ಲಿ ಹಲವು ದಿನಗಳ ಕಾಲ ನ್ಯಾಯಾಲಯದ ಕಾರ್ಯಕಲಾಪಗಳು ನಿಗದಿತ ಪ್ರಮಾಣದಲ್ಲಿ ಹಲವು ನಿಬಂಧನೆಗಳಿಗೊಳಪಟ್ಟು ಜರುಗಿದವು. ಅ ಸಂದರ್ಭದಲ್ಲಿಯೂ ಕೂಡಾ ವಕೀಲರು ಸಾಕಷ್ಟು ಸಂಕಷ್ಟ ಹಾಗೂ ಸಮಸ್ಯೆಗಳನ್ನು ಅನುಭವಿಸಿದರು.
ಈಗ ಮತ್ತೆ ಕೊರೊನಾದ ಮೂರನೇ ಅಲೆ ರಾಜ್ಯದಲ್ಲಿ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ವಾರಾಂತ್ಯ ಕರ್ಫ್ಯೂ ಹಾಗೂ ಇತರ ನಿರ್ಬಂಧನೆಗಳನ್ನು ವಿಧಿಸಿದೆ. ಈಗ ಕರ್ನಾಟಕ ಉಚ್ಚ ನ್ಯಾಯಾಲಯ ದಿನಾಂಕ: 17-01-2022 ರಿಂದ ಮುಂದಿನ ಆದೇಶ ಮಾಡುವವರೆಗೂ ಹೈಕೋರ್ಟುಗಳಲ್ಲಿ ವಿಡಿಯೋ ಸಮ್ಮೇಳನ ಮೂಲಕ ವಿಚಾರಣೆ ನಡೆಸಲು ಹಾಗೂ ಜಿಲ್ಲಾ-ತಾಲ್ಲೂಕಿನ ನ್ಯಾಯಾಲಯಗಳು ಕಾರ್ಯಕಲಾಪಗಳನ್ನು ನಡೆಸಲು ಹಲವಾರು ನಿಬಂಧನೆಗಳನ್ನು ಹಾಗೂ ಷರತ್ತುಗಳನ್ನು ವಿದಿಸಿ ನಿಯಮಾವಳಿಯನ್ನು ಜಾರಿ ಮಾಡಿದೆ.
ಈ ಕೂಡಲೇ ಸರಕಾರ ಯುವ ವಕೀಲರಿಗೆ ಸಹಾಯ ಒದಗಿಸಲು ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟ, ಕರ್ನಾಟಕ ರಾಜ್ಯ ಸಮಿತಿ ಘಟಕ ಎಐಎಲ್‌ಯು ರಾಜ್ಯ ಜಂಟಿ ಕಾರ್ಯದರ್ಶಿ ಕೆ.ಎಚ್.ಪಾಟೀಲ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
ಈಗ ತಾನೇ ವೃತ್ತಿ ಆರಂಬಿಸಿದ ಹಾಗೂ ಮೂರು ನಾಲ್ಕು ವರ್ಷ ವೃತ್ತಿಯಲ್ಲಿ ತೊಡಗಿದ ಯುವ ವಕೀಲರು ಹಲವಾರು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಬೇಕಾಯಿತು. ಅಗಲೂ ಕೂಡಾ ಅಖಿಲ ಭಾರತ ವಕೀಲರ ಒಕ್ಕೂಟ(ಎಐಎಲ್‌ಯು) ಕರ್ನಾಟಕ ರಾಜ್ಯ ಸಮಿತಿ ಹಲವಾರು ಮನವಿ ಮತ್ತು ಭಿತ್ತಿಚಿತ್ರ ಅಭಿಯಾನದ ಮೂಲಕ ಪ್ರತಿಭಟನೆ ನಡೆಸಿ ವಕೀಲರಿಗೆ ವಿಶೇಷ ಪ್ಯಾಕೇಜ್ ಘೊಷಣೆಗೆ ಆಗ್ರಹಿಸಲಾಗಿತ್ತು. ಆದರೆ ಸರ್ಕಾರ ಯಾವ ಕ್ರಮವನ್ನು ಕೈಗೊಂಡಿಲ್ಲ.
ಈಗ ಮತ್ತೆ ನ್ಯಾಯಾಲಯಗಳು ನಿಗದಿತ ಹಾಗೂ ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲು ನಿಯಮಾವಳಿ ಜಾರಿ ಮಾಡಿರುವುದರಿಂದ ನಿತ್ಯ ವೃತ್ತಿ ನಡೆಸಿ ಬಂದ ಆದಾಯದಿಂದಲೇ ಬದುಕು ನಡೆಸುವ ವಕೀಲರು ತೀರ್ವ ಸಂಕಷ್ಟಕ್ಕೆ ಇಡಾಗಲಿದ್ದಾರೆ. ಅದರಲ್ಲಿ ಯುವ ವಕೀಲರು ಬಹಳ ಸಮಸ್ಯೆಗಳಿಗೆ ತುತ್ತಾಗುವ ಸನ್ನಿವೇಶ ಉಂಟಾಗಲಿದೆ.
ಒಂದು ವೇಳೆ ಸರಕಾರ ಯುವ ವಕೀಲರಿಗೆ ಯಾವುದೇ ರೀತಿಯ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡದಿದ್ದಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟದ ನೇತೃತ್ವದಲ್ಲಿ ವಕೀಲರನ್ನು ಸಂಘಟಿಸಿ ಪ್ರತಿಭಟನೆ ಹಾಗೂ ಹೋರಾಟ ಹಮ್ಮಿಕೊಳ್ಳುವುದಾಗಿ ಎಐಎಲ್‌ಯು ಎಚ್ಚರಿಸಿದೆ.