ಸಾರಿಗೆ ಸಂಸ್ಥೆಯಿಂದ ಶೀಘ್ರದಲ್ಲೆ ಎಲೆಕ್ಟ್ರಿಕ್ ಬಸ ಸೇವೆ ಪ್ರಾರಂಭ: ಡಿಸಿಎಂ ಸವದಿ

ಗದಗ ಜ 25 : ಸಾರಿಗೆ ಸಂಸ್ಥೆಯು ಶೀಘ್ರದಲ್ಲಿಯೇ ಜನ ಸಾಮಾನ್ಯರಿಗೆ ಎಲೆಕ್ಟ್ರಿಕ್ ಬಸ ಸೇವೆ ಒದಗಿಸುವದರೊಂದಿಗೆ ಪರಿಸರ ಸ್ನೇಹಿ ಸಾರಿಗೆ ಒದಗಿಸಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಹೇಳಿದರು.

ಗದಗ ನಗರದಲ್ಲಿ ನವೀಕೃತ ಗಾನಯೋಗಿ ಪಂ.ಪುಟ್ಟರಾಜ ಗವಾಯಿ ಬಸ ನಿಲ್ದಾಣ ಉದ್ಘಾಟನೆ ಮತ್ತು ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅತ್ಯಾದುನಿಕ ಸೌಲಭ್ಯಗಳುಳ್ಳ ಐದನೂರು ಎಲೆಕ್ಟ್ರಿಕ್ ಬಸ ಸೇವೆಯನ್ನು ಸಾರಿಗೆ ಸಂಸ್ಥೆಯು ಆರಂಭಿಸಲಿದ್ದು ಇದರಲ್ಲಿ ಐವತ್ತು ಬಸ ಗಳನ್ನು ಹುಬ್ಬಳ್ಳಿ ವಿಭಾಗಕ್ಕೆ ನೀಡಲಾಗುವುದು. ಇದರಿಂದ ಸಾರಿಗೆ ವೆಚ್ಚವನ್ನು ಕಡಿಮೆಗೊಳಿಸವುದರೊಂದಿಗೆ ಸಾರಿಗೆ ಸಂಸ್ಥೆಗಳನ್ನು ಲಾಭದಾಯಕದತ್ತ ಕೊಂಡೊಯ್ಯುವ ಉದ್ದೇಶ ಹೊಂದಲಾಗಿದೆ ಎಂದರು.

2014 ರಿಂದ ಬಸ ದರವನ್ನು ಹೆಚ್ಚಿಸಿಲ್ಲ ಹಾಗೂ ಸರಕಾರದಿಂದ ನಿಗಮಕ್ಕೆ ೨೯೮೦ ಕೋಟಿ ರೂ.ಬಾಕಿ ಹಣ ಒದಗಿಸಬೇಕಿದೆ. ಸಾರಿಗೆ ಸಂಸ್ಥೆಯು ನಾಲ್ಕು ನಿಗಮಗಳು ಸೇರಿದಂತೆ ಒಟ್ಟಾರೆ ೪೦೦೦ ಕೋಟಿ ರೂ. ನಷ್ಟದಲ್ಲಿ ಸಂಸ್ಥೆ ನಡೆಯುತ್ತಿವೆ ಸಂಸ್ಥೆಗಳಲ್ಲಿ ಪಾರದರ್ಶಕ ಆಡಳಿತ ಜಾರಿ ಮಾಡುವದರೊಂದಿಗೆ ಹಣದ ಸೋರಿಕೆಯನ್ನು ತಡೆದು ಸಂಸ್ಥೆಗಳ ನಷ್ಟವನ್ನು ಸರಿದೂಗಿಸುವ ಸಂಕಲ್ಪದೊಂದಿಗೆ ಸಾರಿಗೆ ಇಲಾಖೆ ಸಚಿವನಾಗಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮುನ್ನವೆ ಕೋವಿಡ್-೧೯ ಮಹಾಮಾರಿ ಒಕ್ಕರಿಸಿದ್ದರಿಂದ ಹಿನ್ನಡೆಯುಂಟಾಯಿತು. ಸಂಸ್ಥೆಯ ೧.೩೦ ಲಕ್ಷ ನೌಕರರಿಗೆ ವೇತನ ನೀಡಲು ಹಣವಿಲ್ಲದೆ ಪರದಾಡುವಂತಾಗಿತ್ತು ಒಂದು ತಿಂಗಳ ಸಿಬ್ಬಂದಿಗಳ ವೇತನ ಪಾವತಿಗೆ ೩೨೬ ಕೋಟಿ ರೂ.ಗಳ ಅನುದಾನದ ಅವಶ್ಯಕವಿತ್ತು. ಮಾನ್ಯ ಮುಖ್ಯಮಂತ್ರಿಗಳಲ್ಲಿ ಈ ಕುರಿತು ಮಾತನಾಡಿದಾಗ ಎರಡು ತಿಂಗಳುಗಳ ವೇತನದ ಅನುದಾನ ಸಂಸ್ಥೆಗೆ ಒದಗಿಸಿದರು. ಆದರೂ ಕೋರೊನಾ ಮುಗಿಯದ ಹಿನ್ನಲೆಯಲ್ಲಿ ಒಟ್ಟಾರೆ ೫ ತಿಂಗಳ ವೇತನದ ಅನುದಾನ 1762 ಕೋಟಿ ರೂ.ಗಳನ್ನು ಸರಕಾರದಿಂದ ಪಡೆಯಲಾಗಿದೆ ಎಂದರು.

ನೌಕರರು ರಾಜ್ಯಾದ್ಯಂತ ಪ್ರತಿಭಟನೆ ನಿರಂತರ ನಾಲ್ಕು ದಿನಗಳ ವರೆಗೆ ಸಾಗಿದ್ದರಿಂದ ಈಗಾಗಲೇ ನಷ್ಟದಲ್ಲಿರುವ ಸಂಸ್ಥೆಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸಿತು. ನೌಕರರ ಹತ್ತು ಬೇಡಿಕೆಗಳಲ್ಲಿ ಒಂಭತ್ತು ಬೇಡಿಕೆಗಳನ್ನು ಈಡೇರಿಸಲು ಸರಕಾರ ಬದ್ಧವಾಗಿದ್ದು ಈ ಬೇಡಿಕೆಗಳನ್ನು ಈಡೇರಿಸಲಾಗುವದು ಎಂದರು.

ಶಾಲಾ ಮಕ್ಕಳಿಗೆ ಉಚಿತ ಹಾಗೂ ಕನಿಷ್ಠ ದರದಲ್ಲಿ ಬಸ ಪಾಸಗಳನ್ನು ಒದಗಿಸುತ್ತಿದೆ. ಶಾಲಾ ಮಕ್ಕಳು ಸರಕಾರಿ ಬಸಗಳಲ್ಲಿ ಸಂಚರಿಸುವಂತೆ ಮಕ್ಕಳ ಪಾಲಕರು ಸಹ ಸಾರಿಗೆ ಸಂಸ್ಥೆ ಬಸಗಳನ್ನೇ ದೈನಂದಿನ ಸಂಚಾರಕ್ಕೆ ಬಳಸುವ ಮೂಲಕ ಸಂಸ್ಥೆಗೆ ನೆರವಾಗಬೇಕು. ಸಾರಿಗೆ ಬಸ ಸೇರಿದಂತೆ ನಿಲ್ದಾಣಗಳಲ್ಲಿ ಶುಚಿತ್ವದೆಡೆಗೆ ಸಾರ್ವಜನಿಕರು ಸಹಕರಿಸಬೇಕೆಂದು ಸಚಿವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಿಸಿ ಮಾತನಾಡಿ, ಬಸ ನಿಲ್ದಾಣಕ್ಕೆ ಪಂ.ಪುಟ್ಟರಾಜ ಗವಾಯಿಗಳ ಹೆಸರನ್ನು ನಾಮಕರಣ ಮಾಡಲಾಗಿದ್ದು ಅವರ ಹೆಸರಿಗೆ ಚ್ಯುತಿ ಬಾರದಂತೆ ನಿಲ್ದಾಣವನ್ನು ಶುಚಿಯಾಗಿಡುವಂತೆ ಒತ್ತು ನೀಡಬೇಕೆಂದು ತಿಳಿಸಿದರು. ಅಲ್ಲದೇ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿಗಳ ಹೆಸರು ನಾಮಕರಣಕ್ಕೆ ಸಹಕಾರ ನೀಡಿದ ಸಾರಿಗೆ ಸಚಿವರಿಗೆ ಹಾಗೂ ಈ ಭಾಗದ ಶಾಸಕರಾದ ಎಚ್.ಕೆ.ಪಾಟೀಲ ಅವರಿಗೆ ಅಭಿನಂದನೆ ಸಲ್ಲಿಸುವದಾಗಿ ತಿಳಿಸಿದರು.

ಶಾಸಕರಾದ ಎಚ್.ಕೆ.ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹುಬ್ಬಳ್ಳಿ ವಿಭಾಗಕ್ಕೆ ಒದಗಿಸಲಾಗುವ ಎಲೆಕ್ಟಿಕ್ ಬಸಗಳಲ್ಲಿ ಹದಿನೈದು ಬಸಗಳನ್ನು ಗದಗ ವಿಭಾಗಕ್ಕೆ ನೀಡಬೇಕು. ಜಿಲ್ಲೆಯಲ್ಲಿ ಚಾಲಕ ತರಬೇತಿ ಕೇಂದ್ರವನ್ನು ಆರಂಭಿಸಲು, ಗದಗನಿಂದ ಬೆಂಗಳೂರು ಹಾಗೂ ಮೈಸೂರು ಮಹಾನಗರಗಳಿಗೆ ಸಂಪರ್ಕ ಕಲ್ಪಿಸವು ಮಲ್ಟಿ ಎಕ್ಸೆಲ್ ಬಸ ಸೇವೆ ಒದಗಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ವಾ.ಕ.ರ.ಸಾ.ಸಂ ಹುಬ್ಬಳ್ಳಿ ಅಧ್ಯಕ್ಷರಾದ ವಿ.ಎಸ್.ಪಾಟೀಲ ಮಾತನಾಡಿ ವಿಭಾಗದಲ್ಲಿ ಪ್ರತಿ ದಿನ ಇಪ್ಪತ್ತೆರೆಡು ಲಕ್ಷ ಜನ ಸಂಸ್ಥೆಯ ಬಸಗಳಲ್ಲಿ ಪ್ರಯಾಣಿಸುತ್ತಿದ್ದರು. ಕೋರೊನಾ ಎದುರಾದ ನಂತರ ಅದು ಸಂಪೂರ್ಣ ಸ್ಥಗಿತಗೊಂಡು ಸಂಸ್ಥೆ ಅಧಿಕ ನಷ್ಟವನ್ನು ಅನುಭವಿಸಿದೆ. ಲಾಕ ಡೌನ್ ನಂತರ ಆರಂಭವಾದ ಸಾರಿಗೆ ಸೇವೆಯಿಂದ ಪ್ರತಿ ದಿನ ಪ್ರಯಾಣಿಕರ ಸಂಖ್ಯೆ ಅಧಿಕಗೊಳ್ಳುತ್ತಿದ್ದು ಪ್ರತಿ ದಿನ ೧೩ ಲಕ್ಷ ಜನ ಸಂಸ್ಥೆಯ ಬಸಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರು.

ವೀರೆಶ್ವರ ಪೂಣ್ಯಾಶ್ರಮದ ಪೀಠಾದಿಪತಿ ಶ್ರೀ ಕಲ್ಲಯ್ಯಜ್ಜನವರು ಸಾನಿಧ್ಯ ವಹಿಸಿದ್ದರು. ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಕಳಕಪ್ಪ ಬಂಡಿ, ಜಿ.ಪಂ. ಅಧ್ಯಕ್ಷ ಈರಪ್ಪ ನಾಡಗೌಡ್ರ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಜಿ.ಪಂ. ಉಪಾದ್ಯಕ್ಷೆ ಮಂಜುಳಾ ಹುಲ್ಲಣ್ಣವರ, ತಾ.ಪಂ. ಅಧ್ಯಕ್ಷ ವಿದ್ಯಾದರ ದೊಡಮನಿ, ಉಪಾಧ್ಯಕ್ಷೆ ಮಮತಾಜಬಿ ನದಾಫ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿ.ಪಂ., ತಾ.ಪಂ. ಸದಸ್ಯರು, ವಾ.ಕ.ರಾ.ರ.ಸಾ.ಸಂಸ್ಥೆ ಹುಬ್ಬಳ್ಳಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಬಾಜಪೇಯಿ, ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್.ಸಿ.ಹಿರೇಮಠ, ಸಂಸ್ಥೆಯ ಮುಖ್ಯ ಕಾಮಗಾರಿ ಅಭಿಯಂತರ ಟಿ.ಕೆ.ಪಾಲನೇತ್ರಾನಾಯಕ ಸೇರಿದಂತೆ ಸಂಸ್ಥೆಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ: ದಾವಲಸಾಬ ತಾಳಿಕೋಟಿ

Donate Janashakthi Media

Leave a Reply

Your email address will not be published. Required fields are marked *