ಬೇಡಿಕೆ ಈಡೇರಿಕೆಗಾಗಿ ವಾರಪೂರ್ತಿ ಸಾರಿಗೆ ನೌಕರರ ವಿನೂತನ ಪ್ರತಿಭಟನೆ

ಬೆಂಗಳೂರು: ಸಾರಿಗೆ ನೌಕರರು ತಮ್ಮ 9 ಬೇಡಿಕೆಗಳ ಈಡೇರಿಕೆಗಾಗಿ ಇಂದಿನಿಂದ ವಿಭಿನ್ನ ಧರಣಿ ನಡೆಸುತ್ತಿದ್ದಾರೆ. ಮೊದಲ ದಿನದಂದು ನೌಕರರು ಸರ್ಕಾರದ ವಿರುದ್ಧ ಕಪ್ಪುಪಟ್ಟಿ ಚಳುವಳಿ ಆರಂಭಿಸಿದ್ದಾರೆ. ಏಪ್ರಿಲ್ 7ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ಏ.1ರಂದು ನೌಕರರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರು ಮತ್ತು ಸರ್ಕಾರದ ಗಮನ ಸೆಳೆದ ಸಾರಿಗೆ ನೌಕರರು ಏ.2ರಂದು ಸಾರ್ವಜನಿಕ ಪ್ರದೇಶಗಳಲ್ಲಿ ಕಾಫಿ, ಟೀ, ಬಜ್ಜಿ, ಬೋಂಡ ತಯಾರಿಸಿ ಮಾರಾಟ ಮಾಡಲಿದ್ದಾರೆ. 3ರಂದು ನೌಕರರು ಮತ್ತು ಕುಟುಂಬ ಸದಸ್ಯರು ಎಲ್ಲಾ ನಗರಗಳ ಮುಖ್ಯ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಭಿತ್ತಿ ಪತ್ರ ಪ್ರದರ್ಶನ ಮಾಡುವರು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ತಿಳಿಸಿದೆ.

‘ಏ.4ರಂದು ಸಾರ್ವಜನಿಕರಿಗೆ ಕರಪತ್ರ ಹಂಚುವುದು, ಫೇಸ್‌ಬುಕ್, ಟ್ವಿಟರ್ ಅಭಿಯಾನ ನಡೆಸಲಾಗುವುದು. 5ರಂದು ಧರಣಿ ಸತ್ಯಾಗ್ರಹ, 6ರಂದು ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸಾರಿಗೆ ನೌಕರರು ತಿಳಿಸಿದ್ದಾರೆ.

ಇಂದು ಸಾರಿಗೆ ನೌಕರರು ಎಡಗೈ ತೋಳಿಗೆ ಕಪ್ಪುಪಟ್ಟಿ ಧರಸಿ ಪ್ರತಿಭಟನೆ ಆರಂಭಿಸಿದ್ದಾರೆ. ಬೇಡಿಕೆಗಳನ್ನು ಈಡೇರಿಸಿದ್ದೇವೆ ಎಂದು ಸರ್ಕಾರ ಬಿಂಬಿಸುತ್ತಿದೆ. ಆದರೆ, ಆರನೇ ವೇತನ ಆಯೋಗದ ಶಿಫಾರಸು ಬಗ್ಗೆ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ‘ಸಾರಿಗೆ ನೌಕರರಿಗೆ ಸರ್ಕಾರಿ ಶಿಕ್ಷಕರಂತೆ ಅಂತರ ನಿಗಮ ವರ್ಗಾವಣೆ ಪದ್ಧತಿ ಜಾರಿಗೆ ತರಬೇಕು ಎಂಬ ಬೇಡಿಕೆಗೆ ಹಲವು ನಿಬಂಧನೆಗಳನ್ನು ಹೇರಿ ಶೇ 2ರಷ್ಟು ಮಾತ್ರ ವರ್ಗಾವಣೆಗೆ ಅವಕಾಶ ನೀಡಲಾಗಿದೆ. ಬಾಟಾ, ಭತ್ಯೆ ಮತ್ತು ಓಟಿ ನೀಡುವ ಭರವಸೆ ಹಳೇ ಪದ್ಧತಿಯಲ್ಲೇ ಮುಂದುವರಿದಿದೆ. ಎನ್‌ಐಎನ್‌ಸಿ ರದ್ದು ಮಾಡುವ ಭರವಸೆ ಈಡೇರಿಲ್ಲ. ಎಚ್‌ಆರ್‌ಎಂಎಸ್ ಪದ್ಧತಿ ಇನ್ನೂ ಜಾರಿಯಾಗಿಲ್ಲ’ ಎಂದು ಬಿಎಂಟಿಸಿ ನೌಕರರು ತಿಳಿಸಿದ್ದಾರೆ.

‘ಆರನೇ ವೇತನ ಆಯೋಗದ ಶಿಫಾರಸಗಳನ್ನು 2020ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಆದೇಶ ಹೊರಡಿಸಿದರೆ ಮುಷ್ಕರ ವಾಪಸ್ ಪಡೆಯುತ್ತೇವೆ. ಇಲ್ಲದಿದ್ದರೆ ಎಸ್ಮಾ ಜಾರಿಗೂ ಹೆದರದೆ ಮುಷ್ಕರ ನಡೆಸುತ್ತೇವೆ. ಸಾರ್ವಜನಿಕರಿಗೆ ಆಗುವ ತೊಂದರೆಗೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ ಎಂದು ಸಾರಿಗೆ ನೌಕರರು ಎಚ್ಚರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *