ಸಾರಿಗೆ ನೌಕರರಲ್ಲಿ ಗೊಂದಲ, ಮುಷ್ಕರ ಮುಂದುವರೆಸಲು ನಿರ್ಧಾರ

ಬೆಂಗಳೂರು : ಮುಷ್ಕರ ಅಂತ್ಯಗೊಳಿಸುವ ವಿಚಾರದಲ್ಲಿ ಸಾರಿಗೆ ನೌಕರರಲ್ಲಿ ಗೊಂದಲ ಆರಂಭವಾಗಿದ್ದು, ಮುಷ್ಕರವನ್ನು ಮುಂದುವರೆಸುವುದಾಗಿ ಕೆ.ಎಸ್.ಆರ್.ಟಿ.ಸಿ ಯುನಿಯನ್ ಮುಖಂಡ ಚಂದ್ರು ತಿಳಿಸಿದ್ದಾರೆ.

ಇಂದು ಬೆಳಗ್ಗೆಯಿಂದ ಸಾರಿಗೆ ಸಚಿವ, ಉಪಮುಖ್ಯಮಂತ್ರಿ, ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ ರವರು ಸಾರಿಗೆ ನಿಗಮಗಳ ನೌಕರರ ಜೊತೆ ಸಭೆ ನಡೆಸಿತ್ತು, ಸಭೆಯಲ್ಲಿ ಸರಕಾರಿ ನೌಕರರನ್ನಾಗಿಸುವ ಬೇಡಿಕೆ ಹೊರತು ಪಡಿಸಿ ಉಳಿದ ಬೇಡಿಕೆಗಳನ್ನು ಈಡೇರಿಸುವುದಾಗಿ ಚರ್ಚೆಯನ್ನು ನಡೆಸಲಾಯಿತು. ಇದಕ್ಕೆ ಸಮ್ಮತಿ ಸೂಚಿಸಿದ ಸಾರಿಗೆ ನೌಕರರು, ಸಚಿವ ಸವದಿಯವರ ಬಸ್ ಸಂಚಾರ ಆರಂಭಿಸಿ ಎಂದು ಹೇಳಿದ್ದಕ್ಕೆ ನೌಕರರು ಸಮ್ಮತಿಯನ್ನು ಸೂಚಿಸಿದರು.

ಮುಷ್ಕರ ಮುಂದುವರಿಕೆ : ಸಾರಿಗೆ ನೌಕರರು ಮುಷ್ಕರವನ್ನು ಮುಂದುವರೆಸುತ್ತಾರೆ ಎಂದು ರಾಜ್ಯ ರೈತ ಸಂಘ, ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ, ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ನಿರತ ನೌಕರರನ್ನು ಉದ್ದೇಶಿಸಿ ಮಾತನಾಡುತ್ತಾ ” ಸರಾಕರ ನಮ್ಮ ಬೇಡಿಕೆಗಳ ನಿರ್ಧಾರವನ್ನು ಪ್ರತಿಭಟನಾ ಸ್ಥಳಕ್ಕೆ ಬಂದು ತಿಳಿಸಬೇಕಿತ್ತು, ಸಭೆಯ ಪ್ರತಿಯನ್ನು ನಮಗೆ ನೀಡಬೇಕಿತ್ತು, ಇದನ್ಯಾವುದನ್ನು ಮಾಡದೆ ಕೇವಲ ಮಾಧ್ಯಮಗಳ ಮುಂದೆ ಘೋಷಣೆ ಮಾಡಿರುವುದು ಸರಿಯಲ್ಲ, ಸಾರಿಗೆ ಸಚಿವರು ಮುಷ್ಕರದ ಸ್ಥಳಕ್ಕೆ ಬರುವವರೆಗೂ ಮುಷ್ಕರ ಮುಂದುವರೆಯಲಿದೆ ಎಂದರು.

 

ಖಾಸಗಿ ಬಸ್ ಸಂಚಾರ ಇಲ್ಲ : ಸರಕಾರ ಖಾಸಗಿ ಬಸ್ ಬಳಸಿ ಸಂಚಾರ ಆರಂಭಿಸುವುದಾಗಿ ಹೇಳುತ್ತಿದೆ. ನಾವು ಸಾರಿಗೆ ನೌಕರರ ಬೇಡಿಕೆಯ ಜೊತೆ ಇದ್ದೇವೆ. ಸಾರಿಗೆ ಸಚಿವರ ಅಣಿತಿಯಂತೆ ಖಾಸಗಿ ಬಸ್ ಗಳನ್ನು ಸಂಚಾರ ಮಾಡಲು ಸಿದ್ಧರಿಲ್ಲ ಎಂದು ಖಾಸಗೀ ಬಸ್ ಮಾಲಿಕರ ಸಂಘದ ಮುಖಂಡ ನಟರಾಜ ಶರ್ಮಾ ತಿಳಿಸಿದ್ದಾರೆ.

ನಾಳೆ ಅಂತಿಮ ನಿರ್ಧಾರ : ಸಭೆಯಲ್ಲಿ ಒಪ್ಪಿಗೆ ಸೂಚಿಸಿ ಈಗ ಉಲ್ಟಾ ಹೊಡೆದಿರುವುದು ಬೇಸರ ತಂದಿದೆ. ಇದರಲ್ಲಿ ರಾಜಕೀಯ ಷಡ್ಯಂತರ ಇದೆ. ನಾಳೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಲಕ್ಷ್ಮಣ ಸವದಿ ಹೇಳುವ ಮೂಲಕ ಎಸ್ಮಾ ಕಾಯ್ದೆಯ ಪ್ರಯೋಗದ ಸೂಚನೆಯನ್ನು ನೀಡಿದ್ದಾರೆ.

ಸರಕಾರ ಮತ್ತು ಸಾರಿಗೆ ನೌಕರರ ಹಗ್ಗ ಜಗ್ಗಾಟದಲ್ಲಿ ಪ್ರಯಾಣಿಕರು ನಲಗುವಂತಾಗಿದೆ. ಸಾರಿಗೆ ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದು ಸರಕಾರ ಸರಿಯಾದ ನಿಲುವು ತೆಗೆದುಕೊಂಡು ಈಡೇರಿಸಲು ಮುಂದಾಗಬೇಕು. ಹಾಗೂ ಮುಷ್ಕರ ನಿರತ ನೌಕರರು ಸಾರ್ವಜನಿಕರ ಕಷ್ಟವನ್ನು ಅರಿತು ಪರ್ಯಾಯ ಮಾರ್ಗದ ಮೂಲಕ ಹೋರಾಟ ನಡೆಸಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬೆಂಗಳೂರಿನಲ್ಲಿ ಎರಡು ದಿನಗಳಿಂದ ಬಿಜಾಪುರದ ಬಸ್ ಗಾಗಿ ಕಾದು‌ ಕುಳಿತಿರುವ ರಾಘವೇಂದ್ರ ಇಂಡಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *