ಸಾರಿಗೆ ಮುಷ್ಕರ ನಿಷೇಧಿಸುವುದು ದಮನಕಾರಿ ತೀರ್ಮಾನ ಸಿಐಟಿಯು ಆರೋಪ

ಬೆಂಗಳೂರು :  “ಸಾರ್ವಜನಿಕ ಉಪಯುಕ್ತ ಸೇವೆ” ಯಲ್ಲಿರುವ ಬಿಎಂಟಿಸಿ – ಕೆಎಸ್‌ಆರ್‌ಟಿಸಿ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಮಾತುಕತೆಯ ಮೂಲಕ ಇತ್ಯರ್ಥ ಮಾಡಲು ಆಗ್ರಹ ಮುಷ್ಕರ ನಿಷೇಧ ಹಾಗು ಮುಖಂಡರುಗಳ ಬಂಧನ ಅಮಾನವೀಯ ಹಾಗೂ ದಮನಕಾರಿ ತೀರ್ಮಾನ ಎಂದು ಸಿಐಟಿಯು  ಆರೋಪವನ್ನು  ಮಾಡಿದೆ.  ಸರಕಾರದ ನಡೆಯನ್ನು ವಿರೋಧಿಸಿ ನಾಳೆ ರಾಜ್ಯವ್ಯಾಪಿ (ಏಪ್ರಿಲ್‌ 12) ಪ್ರತಿಭಟನೆಗೆ ಕರೆ ನೀಡಿದೆ.

“ಸಾರ್ವಜನಿಕ ಉಪಯುಕ್ತ ಸೇವೆ”ಯಾಗಿರುವ ಸಾರಿಗೆ ರಂಗದಲ್ಲಿನ ಕಾರ್ಮಿಕರಿಗೆ ಸಾರ್ವಜನಿಕ ಕೆಲಸದಲ್ಲಿರುವವರೆಂಬ ಮಾನ್ಯತೆಯನ್ನು ಸರ್ಕಾರ ನೀಡಲಿಲ್ಲ. ಅವರ ನ್ಯಾಯಯುತ ಬೇಡಿಕೆಗಳನ್ನು ಸೌಹಾರ್ದಯುತವಾಗಿ ಮಾತುಕತೆಯ ಮೂಲಕ ಇತ್ಯರ್ಥ ಮಾಡಲು ಮುಂದಾಗುವುದು ಮಾತ್ರವೇ ಪ್ರಜಾಸತ್ತ ನಡೆಯಾಗಿರುತ್ತದೆ. ಆದರೆ ಸರ್ಕಾರ ಸಾರಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಬದಲು ಅವರ ಕಾನೂನು ಬದ್ಧ ಮುಷ್ಕರವನ್ನು ನಿಷೇಧ ಮಾಡಿರುವ ಕ್ರಮವನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ, ಕೂಡಲೇ ಬಂಧಿಸಲಾದ ಮುಖಂಡರನ್ನು ಬಿಡುಗಡೆ ಮಾಡಬೇಕು ಮತ್ತು ಕೂಡಲೇ ಹೋರಾಟ ನಿರತ ಮುಖಂಡರೊಂದಿಗೆ ಮಾತುಕತೆ ನಡೆಸಬೇಕೆಂದು ಸಿಐಟಿಯು  ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.‌ ವರಲಕ್ಷ್ಮಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಸಾರಿಗೆ ಮುಷ್ಕರ : ನಾಳೆ ತಟ್ಟೆ, ಲೋಟ ಬಾರಿಸಿ ಪ್ರತಿಭಟನೆ

ಕಾರ್ಮಿಕರ ಸಾಮೂಹಿಕ ಚೌಕಾಶಿಮಾಡುವ ಹಕ್ಕಿನ ಮೇಲಿನ ಅಪ್ಪಟ ದಾಳಿ ಇದಾಗಿದೆ. ಈ ಕಾರ್ಮಿಕರು ಕಳೆದ ಬಾರಿ ಮುಷ್ಕರ ಮಾಡಿದ್ದಾಗ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲ. ಕಾರ್ಮಿಕರು ಕಾನೂನು ಬದ್ಧವಾಗಿ ಮುಷ್ಕರದ ತಿಳುವಳಿಕೆ ಪತ್ರ ನೀಡಿದ ದಿನದಿಂದ ಮುಷ್ಕರ ಪ್ರಾರಂಭವಾಗುವವರೆಗಿನ ಅವಧಿಯಲ್ಲಿ ಸಮರ್ಪಕವಾಗಿ ಮಾತುಕತೆ ನಡೆಸಿ ಮುಷ್ಕರವು ಪ್ರಾರಂಭವಾಗುವ ಮೊದಲೇ ಅವರ ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಸರ್ಕಾರ ವಿಫಲವಾಗಿದೆ. “ಸಾರ್ವಜನಿಕ ಉಪಯುಕ್ತ ಸೇವೆ”ಯಲ್ಲಿ ತೊಡಗಿರುವ ಕಾರ್ಮಿಕರು ನೀಡಿದ ಮುಷ್ಕರ ನೋಟಿಸಿಗೆ ಮಾನ್ಯತೆ ನೀಡದೆ, ಕಾನೂನಲ್ಲಿನ ಅವಕಾಶವನ್ನು ಬಳಸಿಕೊಂಡು ಅವರ ನ್ಯಾಯಯುತ ಮುಷ್ಕರವನ್ನು ನಿಷೇಧ ಮಾಡಿರುವ ಕ್ರಮವು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಸಮರ್ಥಿಸಿಕೊಳ್ಳುವ ವ್ಯರ್ಥ ಪ್ರಯತ್ನವಲ್ಲದೆ ಮತ್ತೇನೂ ಅಲ್ಲ ಎಂದು ಆರೋಪಿಸಿದ್ದಾರೆ.

ಕೈಗಾರಿಕಾ ವಿವಾದಗಳ ಕಾಯಿದೆ ೧೯೪೭ರ ಸೆಕ್ಷನ್ ೧೦(ಬಿ) ಅನ್ವಯ ಹೋರಾಟದಲ್ಲಿರುವ ಕಾರ್ಮಿಕರ ಸೇವಾ ನಿಯಮಗಳ ರಕ್ಷಣೆ ಹಾಗು ಮಧ್ಯಂತರ ಪರಿಹಾರ ನೀಡಬೇಕಾದ ಕರ್ತವ್ಯವನ್ನು ಸರ್ಕಾರ ಪರಿಗಣಿಸಿಲ್ಲ. ಅತಿ ತೀವ್ರ ಹಾಗು ಅಮಾನವೀಯ ಶೋಷಣೆಗೆ ಒಳಗಾಗಿರುವ ಕಾರ್ಮಿಕರಿಗೆ ಯಾವುದೇ ತಾತ್ಕಾಲಿಕ ಪರಿಹಾರವು ನೀಡದೆ ಹಾಗು ಅ ಕಾರ್ಮಿಕರಿಗೆ ಆತ್ಮವಿಶ್ವಾಸ ತುಂಬುವ ಯಾವುದೇ ಮಧ್ಯಂತರ ಪರಿಹಾರವು ನೀಡದೇ ಮುಷ್ಕರವನ್ನು ನಿಷೇಧ ಮಾಡಿ ಆದೇಶ ಹೊರಡಿಸಿರುವುದು ರಾಜ್ಯ ಸರ್ಕಾರದ ಹೊಣೆಗೇಡಿತನವಾಗಿರುತ್ತದೆ. ರಾಜ್ಯ ಸರ್ಕಾರ ಮುಷ್ಕರದ ನಿಷೇದಾಜ್ಙೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದ್ದಾರೆ.

ಯುಗಾದಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದೆ ಸುಗಮವಾದ ಸಂಚಾರ ವ್ಯವಸ್ಥೆಯನ್ನು ಖಾತರಿ ಪಡಿಸಲು ಮಾತುಕತೆಯ ಮೂಲಕ ಆಗುವ ಒಪ್ಪಂದವೊAದು ಆರೋಗ್ಯಕರವಾದ ಮಾರ್ಗವಾಗುತ್ತದೆ.
ಈಗಾಗಲೆ ಸರ್ಕಾರದ ನಿರ್ಲಕ್ಷ್ಯ ಧೋರಣೆಗಳಿಂದ ನೊಂದಿರುವ ಕಾರ್ಮಿಕರನ್ನು ಕಾನೂನು ಸಮರಕ್ಕೆ ತಳ್ಳುವ ಹಾಗು ಅವರಿಗೆ ನ್ಯಾಯವಂಚನೆ ಮಾಡುವ ಪ್ರಯತ್ನಗಳನ್ನು ಕೈಬಿಟ್ಟು ಕಾರ್ಮಿಕರ ನ್ಯಾಯಯುತ ಬೇಡಿಕೆಗಳಿಗೆ ಮಾನ್ಯತೆ ನೀಡಬೇಕು ಹಾಗು ಸೌಹಾರ್ದಯುತವಾಗಿ ಸಮಸ್ಯೆಗಳನ್ನು ಇತ್ಯರ್ಥಮಾಡಲು ಸರ್ಕಾರ ಮುಂದಾಗಬೇಕೆಂದು ಸಿಐಟಿಯು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *