ಸಾರಿಗೆ ಮುಷ್ಕರ ನಿಲ್ಲಿಸಿ, ಕರ್ತವ್ಯಕ್ಕೆ ಹಾಜರಾಗಿ : ಹೈಕೋರ್ಟ್‌ ಸೂಚನೆ

ಬೆಂಗಳೂರು: ಇಡೀ ರಾಜ್ಯ ಕೊರೋನಾ ವೈರಸ್ ಹಿಡಿತದಲ್ಲಿರುವುದರಿಂದ ಮುಷ್ಕರ ನಡೆಸಲು ಇದು ಅತ್ಯಂತ ಕೆಟ್ಟ ಸಮಯ. ಕೂಡಲೇ ಮುಷ್ಕರ ನಿಲ್ಲಿಸಿ, ಸೇವೆ ಆರಂಭಿಸಿ ಎಂದು ಹೈಕೋರ್ಟ್ ಮಂಗಳವಾರ ಮುಷ್ಕರ ನಿರತ ಸಾರಿಗೆ ನೌಕರರಿಗೆ ಸೂಚನೆ ನೀಡಿದೆ.

ಸಾರಿಗೆ ಮುಷ್ಕರದ ವಿರುದ್ಧ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಪೀಠ, ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಷ್ಕರ ನಡೆಸುವುದು ಸರಿಯಲ್ಲ. ನಿಮ್ಮ ಬೇಡಿಕೆ ಕಾಯ್ದಿರಿಸಿ ತಕ್ಷಣ ಸೇವೆ ಆರಂಭಿಸಿ ಎಂದು ಹೇಳಿದೆ. ಅಲ್ಲದೆ ಈ ಸಂಬಂಧ ರಾಜ್ಯ ಸರ್ಕಾರ, ಸಾರಿಗೆ ಇಲಾಖೆ ಮತ್ತು ನೌಕರರ ಸಂಘಕ್ಕೆ ನೋಟಿಸ್ ನೀಡಿದೆ.

ಕೋವಿಡ್ ಸಂಕಷ್ಟದಿಂದಾಗಿ ಜನರು ತತ್ತರಿಸಿದ್ದಾರೆ. ಲಸಿಕಾ ಕೇಂದ್ರಕ್ಕೆ ಜನರು ಹೋಗೋದಕ್ಕೂ ಕಷ್ಟ ಆಗಿದೆ. ಆಸ್ಪತ್ರೆಗೆ ಹೋಗೋದಕ್ಕೆ ಬಸ್ ಸಂಚಾರ ಇಲ್ಲದೇ ಕಷ್ಟ ಪಡುವಂತಾಗಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

ಇನ್ನು ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ನ್ಯಾಯಾಲಯದ ಪೂರ್ಣ ಪ್ರಮಾಣದ ಆದೇಶವನ್ನ ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *