ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗದಿಂದ ಈಗಾಗಲೇ ಜನತೆ ತತ್ತರಿಸಿಹೋಗಿದ್ದಾರೆ. ಈ ನಡುವೆ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಮತ್ತಷ್ಟು ಕಷ್ಟಕ್ಕೆ ದೂಡಿದ್ಧ ಖ್ಯಾತಿ ಬಿಜೆಪಿ ಸಲ್ಲಸಬೇಕು. ಇದಕ್ಕೆ ಭ್ರಷ್ಟ ಬಿಜೆಪಿ ಸರ್ಕಾರವೇ ಹೊಣೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಕುರಿತು ಇಂದು ಸರಣಿ ಟ್ವೀಟ್ ಮಾಡಿರುವ ಅವರು, ‘ಹಿಂದಿನ ಮುಷ್ಕರದ ಸಂದರ್ಭದಲ್ಲಿ ನೌಕರರ ಬೇಡಿಕೆಗಳ ಬಗ್ಗೆ ಸಮ್ಮತಿಸಿದಾಗಲೇ ಅದರ ಪರಿಣಾಮವನ್ನು ರಾಜ್ಯ ಬಿಜೆಪಿ ಸರ್ಕಾರ ಯೋಚಿಸಬೇಕಿತ್ತು. ಆಗ ಸುಳ್ಳು ಆಶ್ವಾಸನೆ ನೀಡಿ ನಂತರ ಮಾತು ತಪ್ಪಿರುವುದೇ ಈಗಿನ ಸಂಘರ್ಷಕ್ಕೆ ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಸಾರಿಗೆ ಮುಷ್ಕರ: ಎರಡನೇ ದಿನವೂ ಸಾರ್ವಜನಿಕ ಸಾರಿಗೆ ಸ್ತಬ್ದ
‘ಕಾರ್ಮಿಕ ಸಂಘದ ನಾಯಕರೊಂದಿಗೆ ಮನವೊಲಿಸಿ ಸಮಸ್ಯೆಯನ್ನು ಬಗೆಹರಿಸಬೇಕಾಗಿತ್ತು. ಆದರೆ, ರಾಜ್ಯ ಸರ್ಕಾರವು ಖಾಸಗಿ ಬಸ್‌ಗಳನ್ನು ಓಡಿಸುವ, ಎಸ್ಮಾ ಜಾರಿ ಮಾಡುವ ಬೆದರಿಕೆ ಒಡ್ಡಿದ್ದರ ಪರಿಣಾಮವಾಗಿ ಸಂಘರ್ಷಕ್ಕೆ ದಾರಿಮಾಡಿಕೊಡುತ್ತಿರುವುದು ದುರದೃಷ್ಟಕರ’ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ದೂರಿದರು.
‘ನೌಕರರ ಬೇಡಿಕೆಗಳನ್ನು ಈಡೇರಿಸಲಾಗದಿರುವುದಕ್ಕೆ ಆರ್ಥಿಕ ಸಂಕಷ್ಟದ ಕಾರಣ ವ್ಯಕ್ತಪಡಿಸುವುದು ರಾಜ್ಯ ಸರ್ಕಾರದ ಸ್ವಯಂಕೃತ ಅಪರಾಧವಾಗಿದೆ. ತನ್ನ ದುರಾಡಳಿತ ಮತ್ತು ಕೇಂದ್ರದ ಗುಲಾಮಗಿರಿಯಿಂದಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ : ಸಾರಿಗೆ ನೌಕರರ ಮುಷ್ಕರ : ಕ್ವಾಟ್ರಸ್ ಖಾಲಿ ಮಾಡುವಂತೆ ನೋಟಿಸ್
‘ರಾಜ್ಯ ಸರ್ಕಾರ ತನ್ನ ಪ್ರತಿಷ್ಠೆಯನ್ನು ಬದಿಗಿಟ್ಟು ತಕ್ಷಣ ಕೆಎಸ್‌ಆರ್‌ಟಿಸಿ ಕಾರ್ಮಿಕರ ಜೊತೆ ಮಾತುಕತೆ ನಡೆಸಬೇಕು. ಸಮಸ್ಯೆಯನ್ನು ಸೌಹಾರ್ದತೆಯಿಂದ ಬಗೆಹರಿಸಿ, ಸಾರಿಗೆ ವ್ಯವಸ್ಥೆಯಿಲ್ಲದೆ ಕಷ್ಟನಷ್ಟಕ್ಕಿಡಾಗಿರುವ ಜನತೆಯನ್ನು ರಕ್ಷಿಸಬೇಕು’ ಎಂದು ಸಲಹೆ ನೀಡಿದ್ದಾರೆ.
‘ಆಂತರಿಕ ತಿಕ್ಕಾಟ, ಅಸಾಮರ್ಥ್ಯ ಮತ್ತು ಭ್ರಷ್ಟಾಚಾರಗಳಿಂದಾಗಿ ಹಾದಿತಪ್ಪಿರುವ ರಾಜ್ಯದ ಸರ್ಕಾರದ ಪಾಪದ ಫಲದಿಂದ ಜನತೆ ಸಂಕಷ್ಟ ಅನುಭವಿಸಿದಂತಾಗಿದೆ. ಇದರ ವಿರುದ್ಧ ಸ್ಪಷ್ಟ ಸಂದೇಶವನ್ನು ಉಪಚುನಾವಣೆಯಲ್ಲಿ ಮತದಾರರು ನೀಡಲಿದ್ದಾರೆ’ ಎಂದೂ ವಿರೋಧ ಪಕ್ಷದ ನಾಯಕ ಹೇಳಿದ್ದಾರೆ.