ಚಳ್ಳಕೆರೆ: ಜಮೀನಿನ ಅಕ್ಕಪಕ್ಕದಲ್ಲಿನ ಹುಣಸೆ ಮರದ ವಿಚಾರವಾಗಿ ನಡೆದ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿ ರಾಜೀಸಂಧಾನ ವಿಫಲವಾಗಿತ್ತು. ಇದರಿಂದಾಗಿ ಸರ್ಕಾರಿ ಉದ್ಯೋಗ ಆಕಾಂಕ್ಷಿಯಾಗಿದ್ದ ನವ ವಿವಾಹಿತೆ ಉಷಾ ಎಂಬವರ ಹೆಸರು ಇದ್ದಿದ್ದರಿಂದ ಉದ್ಯೋಗ ಸಿಗದೆ ಇರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬಿ.ಎಸ್ಸಿ ಮುಗಿಸಿ ಬಿ.ಇಡಿ ವ್ಯಾಸಂಗ ಮಾಡುತ್ತಿದ್ದ ಉಷಾ, ಕೊಂಡ್ಲಹಳ್ಳಿ ಗ್ರಾಮದ ಸೋದರ ಮಾವ ಗಣೇಶ ಅವರ ಜೊತೆಗೆ ಕಳೆದ ಏಪ್ರಿಲ್ 25ರಂದು ವಿವಾಹವಾಗಿದ್ದರು. ವಿವಾಹನ ನಂತರ ವ್ಯಾಸಂಗ ಮೊಟಕುಗೊಳಿಸಿದ್ದರು. ಈ ನಡುವೆ ಹತ್ತನೇ ತರಗತಿ ವ್ಯಾಸಂಗದ ಮೇಲೆ ಕೋರ್ಟ್ನಲ್ಲಿ ಪ್ರೋಸೆಸ್ ಸರ್ವರ್ ಹುದ್ದೆಗೆ ಅರ್ಜಿ ಹಾಕಿದ್ದರು. ಉದ್ಯೋಗಿಗೆ ಸಂಬಂಧಿಸಿ ಪೊಲೀಸರ ತಪಾಸಣೆ ಪರಿಶೀಲನೆ ಬಂದಿತು. ಜಮೀನು ಗಲಾಟೆ ವಿಚಾರವಾಗಿ ಉಷಾ ಹೆಸರು ಸಹ ದಾಖಲಾಗಿರುವುದು ಉಲ್ಲೇಖಗೊಂಡಿತು.
ತನಗೆ ದೊರಲಿದ್ದ ಸರ್ಕಾರಿ ಕೆಲಸ ಈ ಪ್ರಕರಣದ ಕಾರಣಕ್ಕಾಗಿ ಸಿಗುತ್ತಿಲ್ಲ ಬೇಸತ್ತಿದ್ದ ಉಷಾ “ಜಾಬ್ಗೋಸ್ಕರವಾಗಿ ಸಾಯುತ್ತಿದ್ದೇನೆ. ನನ್ನ ಸಾವಿಗೆ ನನ್ನ ಕುಟುಂಬ ಕಾರಣವಲ್ಲ. ಸಮಾಜದ ಅವ್ಯವಸ್ಥೆಯೇ ಕಾರಣ” ಎಂದು ಮರಣಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಮೇಲೆ ದಾಖಲಾಗಿದ್ದ ಪ್ರಕರಣ ಹಿಂಪಡೆಯದ ಕಾರಣ ಯುವತಿ ಮನನೊಂದಿದ್ದರು ಎಂದು ವರದಿಯಾಗಿದೆ.
ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಠಾಣಾ ವ್ಯಾಪ್ತಿಯ ಕಾಮಸಮುದ್ರ ಗ್ರಾಮದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಘಟನೆ ಹಿನ್ನೆಲೆ
ಜಮೀನಿನ ಬೇಲಿ ಪಕ್ಕದಲ್ಲಿರುವ ಹುಣಸೇಹಣ್ಣು ಮರದ ವಿಚಾರಕ್ಕೆ ಫೆಬ್ರವರಿ 13ರಂದು ಗಲಾಟೆಯಾಗಿತ್ತು. ಕಾಮಸಂದ್ರ ನಾಗರಾಜ, ಜಯಮ್ಮ ಹಾಗೂ ಅವರ ಮಕ್ಕಳಾದ ಪುನೀತ್ ನಡುವೆ ಗಲಾಟೆಯಾಗಿತ್ತು. ಎರಡು ಕುಟುಂಬಗಳು ಸಹ ಪರಶುರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದವು. ಅದರಲ್ಲಿ ಮೃತ ಉಷಾಳ ಹೆಸರು ಕೂಡ ಇತ್ತು.
“ತನ್ನ ಮಗಳಿಗೆ ಸರಕಾರಿ ಉದ್ಯೋಗ ದೊರೆಯುತ್ತದೆ. ಏನಾದರೂ ಮಾಡಿ ಅವಳ ಹೆಸರನ್ನು ಪೊಲೀಸ್ ಪ್ರಕರಣದಿಂದ ತೆಗೆಸಿ” ಎಂದು ತಾಯಿ ಯಶೋದಮ್ಮ ಅಂಗಲಾಚಿದ್ದರು. “ಸರಕಾರಿ ಕೆಲಸವಲ್ಲ, ಅವಳು ಸತ್ತರೂ ನಾವು ರಾಜೀ ಆಗುವುದಿಲ್ಲ” ಎಂದು ಉಡಾಫೆ ಉತ್ತರ ನೀಡಲಾಗಿತ್ತು. ಇದರಿಂದ ಬೇಸತ್ತ ಉಷಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಭಾನುವಾರ(ಆಗಸ್ಟ್ 21) ನೇಣು ಬಿಗಿದುಕೊಂಡಿದ್ದಾರೆ.
“ಪೊಲೀಸರ ವರ್ತನೆಯಿಂದ ನೊಂದು ಉಷಾ ಜೀವ ಕಳೆದುಕೊಂಡಿದ್ದಾಳೆ” ಎಂದು ಉಷಾ ಅವರ ಭಾವ ಹೇಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಅಮಾಯಕ ವಿದ್ಯಾವಂತ ಹೆಣ್ಣುಮಗಳನ್ನು ಪ್ರಕರಣದಲ್ಲಿ ಸೇರಿಸುವ ಮುನ್ನ ಗ್ರಾಮದಲ್ಲಿ ವಿಚಾರಣೆ ಮಾಡಬೇಕಿತ್ತು. ಪೊಲೀಸರ ಬೇಜವಾಬ್ದಾರಿಯಿಂದ ಈ ಘಟನೆ ಜರುಗಿದೆ. ಪೊಲೀಸ್ ಇಲಾಖೆ ಹಾಗೂ ದೂರು ಕೊಟ್ಟವರು ಸಾವಿಗೆ ಕಾರಣ ಎಂದಿದ್ದಾರೆ.
ಪಾಠ ಮಾಡಿದ ಶಿಕ್ಷಕರ ಸಂತಾಪ
ಉಷಾ ಅವರ ಶಿಕ್ಷಕ ಲಕ್ಷ್ಮೀಕಾಂತ ಮಿರಜಕರ ಎಂಬವರು “ಮೊನ್ನೆ ಸಂಜೆ ಈ ಘಟನೆ ಕೇಳಿದಾಗಿನಿಂದ ಮನಸ್ಸು ಬಹಳ ಘಾಸಿಗೊಂಡಿತ್ತು. ಉಷಾ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿನಿ. ಪ್ರತಿಭಾವಂತೆ, ಗುಣವಂತೆ. ಎಸ್ಎಸ್ಎಲ್ಸಿಯಲ್ಲಿ ಶಾಲೆಗೆ ಎರಡನೇ ಟಾಪರ್. ಕನಸುಗಾರ್ತಿ” ಎಂದು ಸ್ಮರಿಸಿದ್ದಾರೆ.
“ಬಡತನದಲ್ಲಿ ಬೆಳೆದಿದ್ದ, ಮೂರು ತಂಗಿಯರು ಒಬ್ಬ ತಮ್ಮನನ್ನು ಹೊಂದಿದ್ದ ಮನೆಯ ಹಿರಿಮಗಳು ಉಷಾ. ಮನೆ ತೊರೆದು ನಡುದಾರಿಯಲ್ಲಿ ಕೈಬಿಟ್ಟ ಹೋದ ಗಂಡನ ಅನುಪಸ್ಥಿತಿಯಲ್ಲಿ ಉಷಾ ಅವರ ತಾಯಿ ಎಲ್ಲ ಮಕ್ಕಳಿಗೂ ಶಿಕ್ಷಣ ಕೊಡಿಸಿದ್ದರು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಹೊತ್ತಿದ್ದ ಉಷಾಳನ್ನು ನಮ್ಮ ಭ್ರಷ್ಟ ವ್ಯವಸ್ಥೆ ಬಲಿ ಪಡೆದಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ವ್ಯವಸ್ಥೆ ಇರೋದೆ ಹಾಗೆ. ಅದನ್ನು ಪ್ರತಿರೋಧಿಸಿ ಗೆಲ್ಲಬೇಕು ಎಂದು ಸಾವಿರ ಸಲ ಪಾಠ ಮಾಡುವಾಗ ಮಕ್ಕಳಿಗೆ ಹೇಳಿದ್ದೇನೆ. ಆದರೆ ಈ ಹುಡುಗಿ ವ್ಯವಸ್ಥೆಯ ಎದುರು ಸೋಲು ಒಪ್ಪಿಕೊಂಡು ತನ್ನ ಜೀವನಕ್ಕೆ ಅಂತ್ಯ ಹಾಡಿದ್ದಾಳೆ. ಈ ಘಟನೆಯಿಂದ ಮಕ್ಕಳಿಗೆ ಆದರ್ಶಗಳ ಕುರಿತು ಅತಿಯಾಗಿ ಹೇಳಬಾರದೇನೋ ಅನಿಸಿಬಿಟ್ಟಿದೆ” ಎಂದು ವಿಷಾದಿಸಿದ್ದಾರೆ.
“ಇವತ್ತಲ್ಲ ನಾಳೆ ನೌಕರಿ ಸಿಕ್ಕೇ ಸಿಗುತ್ತಿತ್ತು. ಆ ಅರ್ಹತೆ ಅವಳಿಗೆ ಖಂಡಿತ ಇತ್ತು. ಆದರೆ ಜನರ ಸ್ವಾರ್ಥ, ದುರಾಸೆ, ದ್ವೇಷ, ಭ್ರಷ್ಟ ಮನಸ್ಸನ್ನು ನೋಡಲಾಗದೇ ಉಷಾ ಡೆತ್ ನೋಟ್ ಬರೆದಿಟ್ಟು ಉಸಿರು ಚೆಲ್ಲಿದ್ದಾಳೆ. ಇವಳಿಗೆ ಪಾಠ ಮಾಡಿದ ನಾವೆಲ್ಲ ಶಿಕ್ಷಕರು ಸುದ್ದಿ ಕೇಳಿ ಇಡೀ ದಿನ ಕಂಗಾಲಾದೆವು” ಎಂದಿದ್ದಾರೆ.