ಸರಕಾರಿ ಶಾಲೆಗಳ ದುರಸ್ಥಿಗೆ ಮೂರು ವರ್ಷದಿಂದ ಸಿಗದ ಅನುದಾನ

ಕರ್ನಾಟಕ ರಾಜ್ಯದಲ್ಲಿ 49,067 ಸರಕಾರಿ ಶಾಲೆಗಳು ಇವೆ ಇದರಲ್ಲಿ 27,318 ಶಾಲೆಗಳು ದುರಸ್ಥಿಯಲ್ಲಿವೆ. 2800 ಕ್ಕೂ ಹೆಚ್ಚ ಶಾಲೆಗಳಿಗೆ ಶೌಚಾಲಯ ಇಲ್ಲ.  ಕಳೆದ ಬಾರಿ ಸುರಿದ ಅತಿವೃಷ್ಟಿ ಮಳೆಯಿಂದಾಗಿ 7577 ಸರಕಾರಿ ಶಾಲೆಗಳು ಸಂಪೂರ್ಣವಾಗಿ ನಾಶಗೊಂಡಿದ್ದವು. ಅವುಗಳ ಅಭಿವೃದ್ಧಿ 334 ಕೋಟಿ ರೂ ಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಆ ಹಣವೂ ಕೂಡ ಸಂಪೂರ್ಣವಾಗಿ ಶಾಲೆಗಳಿಗೆ ತಲುಪಿಲ್ಲ.

  – ಗುರುರಾಜ ದೇಸಾಯಿ

ಮಕ್ಕಳಿಗೆ ಶಿಕ್ಷಣ ನೀಡುವುದು ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ, ಅದಕ್ಕೆ ಮೂಲ ಸೌಲಭ್ಯಗಳನ್ನು, ಸೌಕರ್ಯಗಳನ್ನು ಹಾಗೂ ಸಾಧನ ಸಲಕರಣೆಗಳನ್ನು ಒದಗಿಸುವುದು ಸಹ ಅಷ್ಟೇ ಮಹತ್ವವನ್ನು ಪಡೆದುಕೊಂಡಿದೆ. ಶಿಕ್ಷಣಕ್ಕೆ ಪೂರಕವಾಗಿರುವ ಶಾಲಾ ಕಟ್ಟಡ, ಆಟದ ಮೈದಾನ, ಕುಡಿಯುವ ನೀರಿನ ವ್ಯವಸ್ಥೆ, ಶಿಕ್ಷಕರ ನೇಮಕ, ಶೌಚಾಲಯ ವ್ಯವಸ್ಥೆ ಒದಗಿಸುವುದು ಆಯಾ ಸರಕಾರಗಳ ಆದ್ಯ ಕರ್ತವ್ಯ. ಇದರ ಜೊತೆಗೆ ಸರಕಾರಗಳು ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ಹತ್ತು ಹಲವು ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸುತ್ತಿವೆ. ಆದರೆ, ಹಣಕಾಸಿನ ಕೊರೆತೆಯಿಂದ, ಇಲಾಖೆಗಳ ನಿರ್ಲಕ್ಷ್ಯದಿಂದ, ಅವೈಜ್ಞಾನಿಕ ಕ್ರಿಯಾ ಯೋಜನೆಗಳಿಂದ, ಅನುದಾನಗಳು ಸರಿಯಾಗಿ ದೊರೆಯದೇ ಎಷ್ಟೋ ಯೋಜನೆಗಳು ಅರ್ಧದಲ್ಲಿಯೇ ನಿಂತು ಹೋಗುವುದನ್ನು ನಾವು ಪದೇ ಪದೇ ನೋಡುತ್ತಿರುತ್ತೇವೆ. ಇದು ಸರಕಾರಿ ಶಾಲೆಗಳ ಪ್ರತಿಷ್ಠೆಯನ್ನು ಕೆಳ ದರ್ಜೆಗೆ ತಳ್ಳುವಂತೆ ಮಾಡಿದೆ.

ಸರಕಾರದ ಅಂಕಿ ಅಂಶಗಳನ್ನು ಹೆಕ್ಕಿ ತೆಗೆದಾಗ ಆಘಾತಕಾರಿ ಸಂಗತಿಯೊಂದು ಹೊರ ಬಿದ್ದಿದೆ, 2019 – 20 ನೇ ಸಾಲಿನಿಂದ ಸರಕಾರಿ ಶಾಲೆಗಳ ದುರಸ್ಥಿಗಾಗಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕ ಪಂಚಾಯತಿಗಳಿಗೆ ನೀಡುತ್ತಿದ್ದ ಅನುದಾನವನ್ನು ನಿಲ್ಲಿಸಲಾಗಿದೆ. ಸರಕಾರದ ಈ ನಿರ್ಧಾರದಿಂದ ಸಾವಿರಾರು ಸರಕಾರಿ ಶಾಲೆಗಳು ದುರಸ್ತಿಗೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ.  ಈ ಮಾಹಿತಿ ಲಭ್ಯವಾಗಿದ್ದು ಹೇಗೆ ಅಂದರೆ 2021-22 ನೇ ಸಾಲಿನ ವಾರ್ಷಿಕ ಬಜೆಟ್ ತಯಾರಿ ಸಂದರ್ಭದಲ್ಲಿ ಅಧಿಕಾರಿಗಳು ಸರಕಾರಕ್ಕೆ ಸಲ್ಲಿಸಿರುವ ಪ್ರಸ್ಥಾಪದಿಂದ ಬಹಿರಂಗ ಗೊಂಡಿದೆ. ಆ ಪ್ರತಿ ಜನಶಕ್ತಿ ಮೀಡಿಯಾಗೆ ಲಭ್ಯವಾಗಿದ್ದು ಅದರ ಸಾರಾಂಶ ಈ ಕೆಳಗಿನಂತಿದೆ.

ವಾರ್ಷಿಕ ಆಯವ್ಯಯದಲ್ಲಿ ಪ್ರತೀ ವರ್ಷ ಎಲ್ಲಾ ಜಿಲ್ಲಾ ಪಂಚಾಯತ್‌ಗಳಿಗೆ ಲೆಕ್ಕ ಶೀರ್ಷಿಕೆ 2,202-00-102-0-34 ರಲ್ಲಿ ಪ್ರೌಢಶಾಲಾ ಕೊಠಡಿಗಳ ದುರಸ್ಥಿಗೆ ಪ್ರತಿ ಜಿಲ್ಲೆಗೆ 1 ಕೋಟಿರೂ ಅನುದಾನ ಬಿಡುಗಡೆಯಾಗುತಿತ್ತು. ಅದರಲ್ಲಿ ತುರ್ತು ದುರಸ್ಥಿಗೆ ಕ್ರಿಯಾ ಯೋಜನ ತಯಾರಿಸಿ ಅನುದಾನ ಬಳಸಿ ಕೊಠಡಿಗಳನ್ನು ದುರಸ್ಥಿ ಪಡಿಸಲಾಗುತಿತ್ತು. ಅದೇ ರೀತಿ ವಾರ್ಷಿಕ ಆಯವ್ಯಯದಲ್ಲಿ  2202-00-101-0-66 ರಲ್ಲಿ ಪ್ರತೀ ವರ್ಷ ತಾಲೂಕು ಪಂಚಾಯತ್ ಗಳಿಗೆ ತಲಾ 50 ಲಕ್ಷದಂತೆ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳ ದುರಸ್ಥಿಗೆ ಅನುದಾನ ಬಿಡುಗಡೆಯಾಗುತ್ತಿತ್ತು.ಆದರೆ 2019-20 ನೇ ಸಾಲಿನಿಂದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಗಳಿಗೆ ಅನುದಾನ ನಿಗದಿ ಪಡಿಸುವುದನ್ನು ನಿಲ್ಲಿಸಲಾಗಿದೆ,

ಇದರಿಂದ ಪ್ರತಿ ವರ್ಷ 30 ಜಿಲ್ಲಾ ಪಂಚಾಯತ್ ಗಳಿಗೆ ತಲಾ 1 ಕೋಟಿ ಯಂತೆ 30 ಕೋಟಿ ಹಾಗೂ ಪ್ರತಿ ತಾಲೂಕು ಪಂಚಾಯತ್‌ಗೆ ತಲಾ 50.00 ಲಕ್ಷದಂತೆ 254 ತಾಲೂಕು ಪಂಚಾಯತ್ ಗಳಿಗೆ 127 ಕೋಟಿ ಹಣದ ಕೊರತೆಯಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಠಡಿ ದುರಸ್ಥಿಗೆ ಅನುದಾನವಿಲ್ಲದೆ ತೂಂದರೆಯಾಗಿದೆ. ಆದ್ದರಿಂದ 2021-22 ಸಾಲಿನ ಆಯವ್ಯಯದಲ್ಲಿ ಸರಕಾರಿ ಪ್ರೌಢಶಾಲೆಗಳ ದುರಸ್ಥಿಗೆ ಪ್ರತಿ ಜಿಲ್ಲಾ ಪಂಚಾಯತ್ ಗೆ 3 ಕೋಟಿಯಂತೆ 100 ಕೋಟಿ ರೂ ಮೀಸಲಿಡಬೇಕು ಹಾಗೂ  ಪ್ರತೀ ತಾಲೂಕು ಪಂಚಾಯತ್ ಗೆ 1 ಕೋಟಿಯಂತೆ 254 ಕೋಟಿ ಅನುದಾನ ನಿಗದಿಪಡಿಸುವಂತೆ ಕೋರಲಾಗಿದೆ.

ಎರಡು ವರ್ಷಗಳ ಕಾಲ ಶಾಲೆಗಳಿಗೆ ಸಿಗಬೇಕಾಗಿದ್ದ ಅನುದಾನವನ್ನು ಕಡಿತ ಮಾಡಿ ಆ ಹಣವನ್ನು ಎಲ್ಲಿಗೆ ಬಳಸಲಾಗಿದೆ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಕರ್ನಾಟಕ ರಾಜ್ಯದಲ್ಲಿ 49,067 ಸರಕಾರಿ ಶಾಲೆಗಳು ಇವೆ ಇದರಲ್ಲಿ 27,318 ಶಾಲೆಗಳು ದುರಸ್ಥಿಯಲ್ಲಿವೆ. 2800 ಕ್ಕೂ ಹೆಚ್ಚ ಶಾಲೆಗಳಿಗೆ ಶೌಚಾಲಯ ಇಲ್ಲ.  ಕಳೆದ ಬಾರಿ ಸುರಿದ ಅತಿವೃಷ್ಟಿ ಮಳೆಯಿಂದಾಗಿ 7577 ಸರಕಾರಿ ಶಾಲೆಗಳು ಸಂಪೂರ್ಣವಾಗಿ ನಾಶಗೊಂಡಿದ್ದವು. ಅವುಗಳ ಅಭಿವೃದ್ಧಿ 334 ಕೋಟಿ ರೂ ಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಆ ಹಣವೂ ಕೂಡ ಸಂಪೂರ್ಣವಾಗಿ ಶಾಲೆಗಳಿಗೆ ತಲುಪಿಲ್ಲ.

ಮಕ್ಕಳ ಬಜೆಟ್ ಏನಾಯ್ತು?! : ಕಳೆದ ಸಾಲಿನ ಬಜೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು, ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು “ಮಕ್ಕಳ’ ಆಯವ್ಯಯ ಮಂಡಿಸಿದ್ದ ಖ್ಯಾತಿಯನ್ನು ಪಡೆದಿದ್ದರು. ಆ ಸಂದರ್ಭದಲ್ಲಿ ರಾಜ್ಯದಲ್ಲಿರುವ 18 ವರ್ಷದ ಕೆಳಗಿರುವ ಎಲ್ಲಾ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿ ಬಜೆಟ್‌ನಲ್ಲಿ 36,340 ಕೋಟಿ ರೂ.ಗಳ 279 ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದ್ದರು. ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಮಕ್ಕಳ ಬಜೆಟ್‌ ಮಂಡಿಸಲಾಗಿದೆ ಎಂದು ಯಡಿಯೂರಪ್ಪ ಎದೆ ತಟ್ಟಿಕೊಂಡಿದ್ದರು.  ಬಜೆಟ್ ಮಂಡಿಸಿದ 15 ದಿನಕ್ಕೆ ಕೊರೊನಾ ದಿಂದಾಗಿ ಲಾಕ್ಡೌನ್ ಹೇರಲಾಯಿತು. ಬರೋಬ್ಬರಿ 11 ತಿಂಗಳಿಂದ  ಇನ್ನೂ ಶಾಲೆಗಳು ಸರಿಯಾಗಿ ಆರಂಭವಾಗಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಅನೇಕ ಮಕ್ಕಳು ಊಟವಿಲ್ಲದೆ ಪರದಾಡಿದರು, ಉತ್ತರ ಕರ್ನಾಟಕ ಭಾಗದಲ್ಲಿ 29,861 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.  ಮಕ್ಕಳಿಗಾಗಿ ಮೀಸಲಿರಿಸಿದ್ದ ಬಜೆಟ್ ಎಲ್ಲಿ ಹೋಯಿತು ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರೆ ಉತ್ತರಿಸಬೇಕಿದೆ?

ಪ್ರತಿ ಭಾರಿ ಶಾಲೆಗಳ ದುರಸ್ತಿಯನ್ನು ಮಾಡಬೇಕು ಎಂಬ ಪ್ರಸ್ಥಾಪಗಳು ಬರುತ್ತವೆ, ಆದರೆ ಅವುಗಳು ಜಾರಿಯಾಗುತ್ತಿಲ್ಲ. ಇಲಾಖೆಯ ದಾಖಲಾತಿಯಲ್ಲಿ ನಮೂದಾಗಿರುತ್ತದೆ, ಆದರೆ ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರು ಆ ಹಣವನ್ನು ಗುಳಂ ಮಾಡಿರುತ್ತಾರೆ, ಸರಕಾರಿ ಶಾಲೆಗಳನ್ನು ಬಲಪಡಿಸಲು ಸರಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ ಎಂಬುದು ಪೋಷಕರ ಸಂಘಟನೆಯ ಕುಮಾರ್ ಶೃಂಗೇರಿಯವರ ಅಭಿಪ್ರಯಾಯವಾಗಿದೆ. ಆರ್.ಐ.ಡಿ.ಎಫ್  ಯೋಜನೆಯಲ್ಲಿ ಸರಕಾರಿ ಶಾಲೆಗಳ ಕೊಠಡಿ ದುರಸ್ಥಿಗಾಗಿ 2018 ರಿಂದ ಇಲ್ಲಿಯವರೆಗೆ ಹಣವನ್ನು ನೀಡಿಲ್ಲ, ಸರಕಾರದ ಅಂಕಿ ಅಂಶಗಳಲ್ಲಿ ಮಾತ್ರ ಬಿಡುಗಡೆಯಾದ ಬಗ್ಗೆ ದಾಖಲೆ ಇದೆ. ಆದರೆ ಶಾಲೆಗಳ ದುರಸ್ಥಿ ಮಾತ್ರ ಆಗಿಲ್ಲ ಎಂಬದು ಹಿರಿಯ ಪತ್ರಕರ್ತರಾದ ಜಿ. ಮಹಾಂತೇಶ್ ರವರ ಪ್ರಶ್ನೆಯಾಗಿದೆ.  ಸರಕಾರಿ ಶಾಲೆಗಳನ್ನು ಬಲಪಡಿಸುವಂತೆ ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಸರಕಾರ ಮಠ, ಮಂದಿರ, ಮಸೀದಿ, ಚರ್ಚುಗಳಿಗೆ ಅನುದಾನವನ್ನು ನೀಡುತ್ತದೆ. ಆದರೆ ಸರಕಾರಿ ಶಾಲೆಗಳಿಗೆ ಅನುದಾನವನ್ನು ಕಡಿತ ಮಾಡುತ್ತದೆ.  ಸರಕಾರ ಶಾಲೆಗಳಿಗೆ ಕೊಟ್ಟಿರುವ ಅನುದಾನವನ್ನು ಲೆಕ್ಕ ಹಾಕಿದರೂ ಒಂದು ಮಗುವಿಗೆ ವರ್ಷಕ್ಕೆ 9 ರೂ ಮಾತ್ರ ಸಿಗುತ್ತದೆ. ಸರಕಾರದ ನಿರ್ಲಕ್ಷ್ಯದಿಂದಾಗಿಯೇ ಸರಕಾರಿ ಶಾಲೆಗಳು ಕುಂಠಿತವಾಗುತ್ತಿವೆ ಎಂಬುದು ಎಸ್.ಎಫ್. ಐ ರಾಜ್ಯ ಉಪಾಧ್ಯಕ್ಷ ದಿಲಿಪ್ ಶೆಟ್ಟಿಯವರ ಅಬಿಪ್ರಾಯವಾಗಿದೆ.

ಸರಕಾರ ಇಂತಹ ನಿರ್ಲಕ್ಷ್ಯ ಬುದ್ಧಿಯನ್ನು ಬಿಟ್ಟು ಶಿಕ್ಷಣದ ಅಡಿಪಾಯವಾಗಿರುವ ಪ್ರಾಥಮಿಕ ಪ್ರೌಢಶಾಲಾ ಶಿಕ್ಷಣವನ್ನು ಬಲಗೊಳಿಸಬೇಕಿದೆ. ಅನೇಕ ಕಡೆಗಳಲ್ಲಿ ಶಿಕ್ಷಕರು ಗ್ರಾಮಸ್ಥರ ಸಹಕಾರದಿಂದ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಸರಕಾರ ಇದನ್ನಾದರೂ ನೋಡಿ ನಿಲ್ಲಿಸದ ಅನುದಾನವನ್ನು ಬಿಡುಗಡೆ ಮಾಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *