ಸರ್ಕಾರಿ ಐಟಿಐ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಲು ಎಸ್‌ಎಫ್‌ಐ ಪ್ರತಿಭಟನೆ

ರಾಣೇಬೆನ್ನೂರು: ಹಾವೇರಿ ಜಿಲ್ಲೆಯಾಗಿ 25 ವರ್ಷಗಳು ಕಳೆದರೂ ಸಹ ಜಿಲ್ಲೆಯಲ್ಲಿ ಶೈಕ್ಷಣಿಕ ವಿಭಾಗದಲ್ಲಿನ ಸಮಸ್ಯೆಗಳು ಅತ್ಯಂತ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಇದರಿಂದಾಗಿ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ದೊರಕದೆ ಸಾವಿರಾರು ವಿದ್ಯಾರ್ಥಿಗಳು ವಂಚನೆಗೆ ಒಳಗಾಗಿದ್ದಾರೆ.

ಜಿಲ್ಲೆಯ ಶೈಕ್ಷಣಿಕ ಸಮಸ್ಯೆಗಳು ಸಹ ವ್ಯಾಪಕವಾಗಿದ್ದು, ರಾಜ್ಯದ ಶೈಕ್ಷಣಿಕ ಸಮಸ್ಯೆಗಳು ಸಹ ಅತ್ಯಂತ ಗಂಭೀರವಾಗಿದೆ. ಇವೆಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು  ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಸಂಘಟನೆಯ ವತಿಯಿಂದ ಪ್ರತಿಭಟನೆಯನ್ನು ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಣೇಬೆನ್ನೂರು ನಗರದ ತಹಶಿಲ್ದಾರ ಕಚೇರಿಯಿಂದ ಬಸ್ ನಿಲ್ದಾಣ ವರೆಗೆ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಬಸ್ ನಿಲ್ದಾಣದ ಮುಂದೆ ಮಾನವ ಸರಪಳಿ ನಿರ್ಮಿಸಿದರು. ಎಸ್‌ಎಫ್‌ಐ ಸಂಘಟನೆಯ ಮುಖಂಡರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ನಂತರ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಣೇಬೆನ್ನೂರ ನಗರಕ್ಕೆ ಸರ್ಕಾರಿ ಐಟಿಐ ಕಾಲೇಜಿಗೆ ಸ್ವಂತ ಕಟ್ಟಡ ಮಂಜೂರು ಮಾಡಬೇಕು ಎಂಬ ಆಗ್ರಹದೊಂದಿಗೆ, ರಾಣೇಬೆನ್ನೂರ ನಗರಕ್ಕೆ ಹೊಸ ಬಸ್ ನಿಲ್ದಾಣ ಮಂಜೂರು ಮಾಡಬೇಕು. ತಾಲ್ಲೂಕು ಕೇಂದ್ರಕ್ಕೆ ಅವಶ್ಯಕ ನಗರ ಸಾರಿಗೆ ಈ ಕೂಡಲೇ ಆರಂಭಿಸಬೇಕು. ಹಾಗೂ ಹೆಚ್ಚುವರಿ ಬಸ್ಸುಗಳನ್ನು ಮಂಜೂರು ಮಾಡಬೇಕೆಂದು ಇದೇ ಸಂದರ್ಭದಲ್ಲಿ ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಎಸ್ಎಫ್ಐ ಮುಖಂಡರಾದ ಗಂಗಾ ಮೊಟೆಬೆನ್ನೂರ, ಸಾಧನ ಹೇಳವಾರ್, ಆಂಜನೇಯ ಬಾರ್ಕಿ, ನೆಹಾಲ್ ಖಾನ್, ಹರ್ಷ ಹೊಂಗಲ್, ಕಿರ್ತಿ ಎಸ್ ಎ, ಶಿಲ್ಪಾ ಮಡಿವಾಳರ, ರಾಧಿಕಾ ಎಚ್, ಮಮತಾ ವಡ್ಡರ, ಅಭಿಶೇಕ ಕುಸುಗೂರು, ಅಹ್ಮದ್ ರಜಾಖಾಜಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *