ಅರಕಲಗೂಡು: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಗಂಡು ಮಗುವೊಂದು ಅಪಹರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಏಳು ಗಂಟೆ ಸುಮಾರಿಗೆ ಆಸ್ಪತ್ರೆಗೆ ಬಂದ ನಾಲ್ವರು ಕಳ್ಳರು ಹೊಂಚು ಹಾಕಿ ತಡರಾತ್ರಿ 12 ಗಂಟೆ ವೇಳೆಗೆ ಹೆರಿಗೆ ವಾರ್ಡಿಗೆ ತೆರಳಿ ಹಸುಗೂಸು ಹೊತ್ತೊಯ್ದಿದ್ದಾರೆ.
ಅಸ್ಸಾಂನ ಕೂಲಿ ಕಾರ್ಮಿಕ ಮಹಿಳೆ ಸಂಜೆ ಏಳು ಗಂಟೆ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಅಪಹರಿಸಲು ಬಂದ ನಾಲ್ವರು ಕಳ್ಳರಲ್ಲಿ ಒಬ್ಬರು ದಾಯಿಯ ಸಮವಸ್ತ್ರ ಧರಿಸಿದ್ದರು.
ಆಸ್ಪತ್ರೆ ಹಿಂಭಾಗದ ಬಾಗಿಲಲ್ಲಿ ಮಗು ಅಪಹರಿಸಿ ಪರಾರಿಯಾಗಿದ್ದಾರೆ, ಇದು ಆಸ್ಪತ್ರೆ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪಟ್ಟಣ ಠಾಣೆಗೆ ದೂರು ನೀಡಲಾಗಿದೆ ಎಂದು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ದೀಪಕ್ ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ ಎಂದರು.
ಹೊರ ರಾಜ್ಯದಿಂದ ಕೂಲಿ ಕೆಲಸಕ್ಕೆ ಬಂದು ಕಂದಮ್ಮನ ಕಳೆದುಕೊಂಡ ಬಾಣಂತಿತಾಯಿ ಯಾಸ್ಮಿನ್ ರೋಧನೆ ನೋಡುವವರ ಮನಸ್ಸನ್ನು ಕಲಕುವಂತೆ ಇತ್ತು.