ಬೆಂಗಳೂರು: ನಾವು ಸರ್ಕಾರದ ಕ್ರಮಗಳ ಬಗ್ಗೆ ಹಸ್ತಕ್ಷೇಪ ಮಾಡಲ್ಲ. ಕಾನೂನು ತನ್ನ ಕೆಲಸ ಮಾಡಲಿ. ಆದರೆ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು. ಸರ್ಕಾರವೇ ನೈತಿಕ ಪೊಲೀಸ್‌ಗಿರಿಗೆ ಪ್ರೋತ್ಸಾಹ ನೀಡುತ್ತಿದ್ದು, ಆ ಮೂಲಕ ಪರಿಸ್ಥಿತಿ ಹದಗೆಡಲು ಕಾರಣವಾಗಿದೆ. ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪ್ರವೀಣ್ ಕೊಲೆಯಾಗಿದ್ದು ಬಹಳ ಅನ್ಯಾಯ. ನಾವು ಇದನ್ನು ಖಂಡಿಸುತ್ತೇವೆ. ರಾಜ್ಯದಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಯಾರಿಗೂ ರಕ್ಷಣೆ ಇಲ್ಲ ಎಂದು ಹೇಳಿದರು.
ಜನರ ಆಕ್ರೋಶ ಮೊದಲಿನಿಂದಲೇ ಇತ್ತು. ಆದರೆ, ಸರ್ಕಾರ ಆರಂಭದಿಂದಲೇ ಪರಿಸ್ಥಿತಿ ನಿಯಂತ್ರಣ ಮಾಡಿದ್ದರೆ ಈ ದುಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ರಾಜ್ಯದ ಕರಾವಳಿ ಭಾಗದಲ್ಲಿ ಶಾಂತಿ ಸ್ಥಾಪಿಸುವ ಕೆಲಸ ಮಾಡಲಿ. ಎಲ್ಲರೂ ತಮ್ಮ, ತಮ್ಮ ಧರ್ಮ ರಕ್ಷಣೆ ಮಾಡಿಕೊಳ್ಳುತ್ತಾರೆ. ಪೊಲೀಸರು ಸ್ವಾತಂತ್ರ್ಯವಾಗಿ ತನಿಖೆ ಮಾಡಲು ಬಿಡಿ. ಪೊಲೀಸ್ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣ ದಾರಿ ತಪ್ಪಿಸಬಾರದು ಎಂದರು.
ಬಿಜೆಪಿ ನಾಯಕರು ಅನಗತ್ಯವಾಗಿ ಕಾಂಗ್ರೆಸ್ ನಾಯಕರನ್ನು ಎಳೆದು ತರುತ್ತಿದ್ದು, ಎಲ್ಲದರಲ್ಲೂ ರಾಜಕಾರಣ ಮಾಡುತ್ತಿದೆ. ಕಾರ್ಯಕರ್ತರು ಯಾವುದೇ ಪಕ್ಷದವರಾದರೂ ಅವರ ಭಾವನೆಗೆ ಗೌರವ ನೀಡಲೇಬೇಕು. ಅವರು ಒಂದು ಸಿದ್ಧಾಂತದ ಮೇಲೆ ಕೆಲಸ ಮಾಡುತ್ತಾರೆ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಅವರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ. ಈ ಸಂದರ್ಭದಲ್ಲಿ ನಾನು ರಾಜಕಾರಣ ಮಾಡಲು ಇಚ್ಛಿಸುವುದಿಲ್ಲ. ಆ ಬಗ್ಗೆ ಬೇರೆ ಸಮಯದಲ್ಲಿ ಮಾತನಾಡುತ್ತೇನೆ ಎಂದು ಉತ್ತರಿಸಿದರು.
ಎಲ್ಲರಿಗೂ ರಕ್ಷಣೆ ಅಸಾಧ್ಯ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ಹಾಗಿದ್ದರೆ ಸರ್ಕಾರ ಏಕೆ ಇರಬೇಕು? ಮೈಸೂರಿನಲ್ಲಿ ಅತ್ಯಾಚಾರ ಆದ ಸಂದರ್ಭದಲ್ಲಿ ಸ್ವತಃ ಗೃಹ ಸಚಿವರೇ, ಅಷ್ಟು ಹೊತ್ತಲ್ಲಿ ಆಕೆ ಹೊರಗೆ ಯಾಕೆ ಹೋಗಬೇಕಿತ್ತು? ಎಂದು ಕೇಳಿದ್ದರು. ನಾಲ್ಕೈದು ದಿನಗಳ ಹಿಂದೆಯೂ ಆ ಭಾಗದಲ್ಲಿ ಕೊಲೆಯಾಗಿದೆ. ಇವರು ಯಾವ ಕ್ರಮ ಕೈಗೊಂಡಿದ್ದಾರೆ? ನಾನು ನಿನ್ನೆ ರಾತ್ರಿ ಡಿಐಜಿ ಜತೆ ಮಾತನಾಡಿರುವೆ. ಈ ಪ್ರಕರಣದಲ್ಲಿ ಮುಕ್ತ ತನಿಖೆ ಆಗಬೇಕು. ಇಲ್ಲಿ ರಾಜಕಾರಣಕ್ಕಿಂತ ಪೊಲೀಸರು ಕೆಲಸ ಮಾಡಬೇಕು ಎಂದರು.
ಆರೋಪ ಸಾಬೀತುಪಡಿಸಲಿ
ಕಾಂಗ್ರೆಸ್ ಕಾಲದಲ್ಲಿ 22 ಕೊಲೆಯಾಗಿತ್ತು ಎಂಬ ಬಿಜೆಪಿ ಟೀಕೆಯ ಬಗ್ಗೆ, ನಮ್ಮ ಕಾಲದಲ್ಲಿ 25 ಆಗಿತ್ತೋ, ಇವರ ಕಾಲದಲ್ಲಿ 35 ಆಗಿದೆಯೋ, 100 ಆಗಿದೆಯೋ ಎಂಬ ಬಗ್ಗೆ ಮಾಧ್ಯಮಗಳೇ ಪಟ್ಟಿ ಪ್ರಕಟಿಸಿವೆ. ಕಾಂಗ್ರೆಸ್ ಬೆಂಬಲಿತ ಮತಾಂಧ ಶಕ್ತಿಗಳು ಈ ಕೃತ್ಯದ ಹಿಂದೆ ಇವೆ ಎಂಬ ಆರೋಪ ಸಂಬಂಧ ಅವರು ಕೇವಲ ರಾಜಕೀಯ ಆರೋಪ ಮಾಡುತ್ತಾರೆ. ಆ ರೀತಿ ಇದ್ದರೆ ಅದನ್ನು ಸಾಬೀತುಪಡಿಸಿ, ಶಿಕ್ಷೆ ನೀಡಲಿ. ಯಾರು ಬೇಡ ಎಂದವರು? ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದರು.