ಸರ್ಕಾರದಿಂದಲೇ ಪಠ್ಯಪುಸ್ತಕಗಳಲ್ಲಿ ಕೋಮುವಾದಿ ವಿಷಬೀಜ ಬಿತ್ತುವ ಅಂಶಗಳ ಸೇರ್ಪಡೆ: ಎಸ್ಎಫ್ಐ ವಿರೋಧ

ಬೆಂಗಳೂರು: ರಾಜ್ಯದ ಬಿಜಿಪಿ ಸರ್ಕಾರ ನೂತನ ಶಿಕ್ಷಣ ನೀತಿಯ ಜಾರಿಗೆ ಮುಂದಾಗಿ ಪಠ್ಯ ಪುಸ್ತಕ ಪುನರ್ ಪರೀಕ್ಷರಣ ಸಮಿತಿಯ ರಚಿಸಿದ್ದು ಈ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತಿರ್ಥ  ಆರ್‌ಎಸ್‌ಎಸ್‌ ಸೈದ್ಧಾಂತಿಕ ನಿಷ್ಠೆ ಹಿನ್ನೆಲೆಯುಳ್ಳವರು ಇದರ ಪರಿಣಾಮವಾಗಿ ಈ ಸಮಿತಿ ಶಿಫಾರಸ್ಸು ಮಾಡಿರುವ ಪಠ್ಯ ಕ್ರಮದಲ್ಲಿ ಈ ಮೊದಲಿದ್ದ ಹತ್ತನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿ  ಸ್ವಾತಂತ್ಯ ಹೋರಾಟಗಾರ, ದೇಶಪ್ರೇಮಿ  ಭಗತ್ ಸಿಂಗ್ ಮತ್ತು ಸಮಾಜ ವಿಜ್ಞಾನದಲ್ಲಿ ಸಾಮಾಜಿಕ ಸುಧಾರಕ ಶ್ರೀ ನಾರಾಯಣ ಗುರು, ಪೆರಿಯಾರ್ ರವರ ಕುರಿತ ಪಾಠ ಹಾಗೂ ವಿದ್ಯಾರ್ಥಿಗಳಲ್ಲಿ ಪ್ರಗತಿಪರ, ವೈಚಾರಿಕತೆ, ಜಾತ್ಯಾತೀತ ಮೌಲ್ಯಗಳನ್ನು  ಬೆಳೆಸಲು ಪೂರಕವಾಗಿದ್ದ ಅನೇಕ  ಪಾಠಗಳನ್ನು ಕೈ ಬಿಡಲಾಗಿದೆ. ಬದಲಿಗೆ ಸಂಘಪರಿವಾರದ ಸಂಸ್ಥಾಪಕ ಹೆಗ್ಡೇವಾರ್ ಭಾಷಣ ಹಾಗೂ ಮತಾಂಧತೆ, ಮೌಡ್ಯ , ಲಿಂಗ ತಾರತಮ್ಯ ಬಿತ್ತುವ ಪಠ್ಯಗಳನ್ನು ಸೇರ್ಪಡೆ ಮಾಡಿ ನಾಡಿನ ಮಕ್ಕಳು ಓದುವ ಪಠ್ಯ ಪುಸ್ತಕಗಳ ಕೇಸರೀಕರಣಕ್ಕೆ ಮುಂದಾಗಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫಐ) ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.

ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪಾಠವನ್ನು 10ನೇ ತರಗತಿ ಪಠ್ಯದಿಂದ ಕೈ ಬಿಟ್ಟು ಸ್ವಾತಂತ್ರ್ಯ ಚಳುವಳಿಯಿಂದ ದೂರವಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೆ.ಬಿ. ಹೆಡಗೇವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದನ್ನು ದೇಶ ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿ ಮಾಡಿದ ದೊಡ್ಡ ಅವಮಾನವಾಗಿದೆ. ಇದನ್ನು  ಗಮನಿಸಿದರೆ ಆರ್‌ಎಸ್‌ಎಸ್‌ ಬಿಜೆಪಿಯ ಸೈದ್ದಾಂತಿಕ ನಾಯಕ ವಿ.ಡಿ‌. ಸಾವರ್ಕರ್ ಸ್ವಾತಂತ್ಯ ಹೋರಾಟದ ವೇಳೆ ಬ್ರಿಟಿಷರಿಗೆ ಕ್ಷಮಾಪನ ಪತ್ರ ಬರೆದು ಭಾರತದ ಸ್ವಾತಂತ್ಯ ಹೋರಾಟಕ್ಕೆ ದ್ರೋಹ ಬಗೆದಿದ್ದರು. ಈಗ ಈ  ಸಾವರ್ಕರ್ ಸಂತತಿಯ ಬಿಜೆಪಿ ಸರ್ಕಾರ ಬ್ರಿಟಿಷರ ವಿರುದ್ಧ ರಾಜಿರಹಿತವಾಗಿ ಹೋರಾಡಿ 23 ವರ್ಷಕ್ಕೆ ನೇಣುಗಂಬಕ್ಕೇರಿದ  ಅಪ್ಪಟ ದೇಶಪ್ರೇಮಿ ಭಗತ್ ಸಿಂಗ್ ಪಠ್ಯವನ್ನು ತೆಗೆದು ಹಾಕಿ ಮತ್ತೋಮ್ಮೆ ಬ್ರಿಟಿಷರ ಗುಲಾಮರು ತಾವು ಎಂಬುದನ್ನು ಬಿಜೆಪಿ ಸಾಬೀತುಪಡಿಸಿದೆ. ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎಂದು ಕರೆಯಲ್ಪಡುವ ರಾಜ್ಯದ ಗೌರಿಬಿದನೂರು ತಾಲ್ಲೂಕಿನಲ್ಲಿರುವ ವಿದುರಾಶ್ವತ್ಥ ಸ್ವಾತಂತ್ರ್ಯ ಹೋರಾಟಗಾರರ ಹುತಾತ್ಮ ಸ್ಮಾರಕದ ಪೋಟೋ ಗ್ಯಾಲರಿಯ ಮೇಲೆ ಬಜರಂಗದಳ, ಆರ್ಎಸ್ಎಸ್ ಕೋಮುವಾದಿ ಶಕ್ತಿಗಳು ದಾಳಿ ಮಾಡಿ ಸ್ವಾತಂತ್ರ್ಯದ ಚರಿತ್ರೆಯನ್ನು ನಾಶಗೊಳಿಸುವ ದೇಶದ್ರೋಹದ ಕೃತ್ಯಕ್ಕೆ ಮುಂದಾಗಿರುವುದು ಖಂಡನೀಯ ಎಂದಿದ್ದಾರೆ.

2022-23ರ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ  ಹೆಡ್ಗೆವಾರ್ ಅವರ “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಎಂಬ ಭಾಷಣವನ್ನು ಸೇರಿಸಲಾಗಿದೆ ಈ ಪಠ್ಯದಲ್ಲಿ ಆರ್ಎಸ್ಎಸ್ ಶಾಖೆಯ ಕಾರ್ಯವಿಧಾನ , ಭಗಧ್ವಜ ಗೌರವಿಸಬೇಕು ಎಂದೆಲ್ಲಾ ಹೇಳಲಾಗಿದೆ ಇದು ರಾಷ್ಟ್ರ ಧ್ವಜ ಮತ್ತು ಸಂವಿಧಾನಕ್ಕೆ ವಿರುದ್ದವಾದದ್ದು. ಇತ್ತಿಚ್ಚಿಗೆ ಬಿಜೆಪಿ ಈಶ್ವರಪ್ಪ ಹೇಳಿದ ಮಾತಿನಂತೆ ಬಿಜೆಪಿ ಕೇಸರಿ ಧ್ವಜವೇ ದೇಶದ ಧ್ವಜ ಎಂದು ಬಿಂಬಿಸುವ ರೀತಿಯಿದೆ.  ಈ ಮೂಲಕ ದೇಶಕ್ಕೆ ಆದರ್ಶರಾದ ಭಗತ್ ಸಿಂಗ್, ಮಹಾತ್ಮ ಗಾಂಧಿ,ಅಂಬೇಡ್ಕರ್ , ಬಸವಣ್ಣ, ನಾರಾಯಣಗುರು , ಪೆರಿಯಾರ್ ,ಕುವೆಂಪು ಮುಂತಾದವರು ವಿಚಾರಗಳನ್ನು ಮುಂದಿನ ಪೀಳಿಗೆಗೆ ಓದದಂತೆ ಮಾಡುವ ಹುನ್ನಾರ ನಡೆದಿದೆ ಇದು ದೇಶದ ಸಮಗ್ರತೆ, ಐಕ್ಯತೆಗೆ ದೊಡ್ಡ ಅಪಾಯಕಾರಿಯಾಗಿದೆ.

ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ.ಕೆ,  ನೂತನ ಶಿಕ್ಷಣ ನೀತಿಯ ಗುರಿಯೇ ಶಿಕ್ಷಣದ ಕೋಮುವಾದೀಕರಣ ಆಗಿರುವುದರಿಂದ ಎನ್ಇಪಿ ಜಾರಿ ಅಂದರೆ ರಾಜ್ಯದ ವಿದ್ಯಾರ್ಥಿಗಳು ಓದುವ ಪಠ್ಯಪುಸ್ತಕಗಳಲ್ಲಿ ಬಿಜೆಪಿ ಆರ್‌ಎಸ್‌ಎಸ್‌ ಕೋಮುವಾದಿ ವಿಚಾರಗಳನ್ನು  ತುಂಬುವುದಾಗಿದೆ ಎಂದಿದ್ದಾರೆ.

ಪ್ರಸ್ತುತ 10 ನೇ ತರಗತಿಯ ಕನ್ನಡ ಪಠ್ಯ ಕ್ರಮದಲ್ಲಿ ಪ್ರಗತಿಪರ ಸಾಹಿತಿಗಳಾದ  ಪಿ. ಲಂಕೇಶ್ ಅವರ “ಮೃಗ ಮಟ್ಟು ಸುಂದರಿ” ಮತ್ತು  ಜಿ. ರಾಮಕೃಷ್ಣ ಅವರ “ಭಗತ್ ಸಿಂಗ್”, ಸಾರಾ ಅಬೂಬಕ್ಕರ್ ಅವರ “ಯುದ್ಧ”, ಎ.ಎನ್. ಮೂರ್ತಿ ರಾವ್ ಅವರ “ವ್ಯಾಘ್ರ ಕಥೆ” ಮತ್ತು ಶಿವಕೋಟ್ಯಾಚಾರ್ಯರ “ಸುಕುಮಾರ ಸ್ವಾಮಿ ಕಥೆ”ಯನ್ನುಪಾಠಗಳನ್ನು ಕೈಬಿಡಲಾಗಿದೆ. ಬದಲಿಗೆ ಆರ್ಎಸ್ಎಸ್ ಚಿಂತನೆಯ ಬರಹಗಾರ ಶಿವಾನಂದ ಕಳವೆ ಅವರ “ಸ್ವದೇಶಿ ಸೂತ್ರದ ಸರಳ ಹಬ್ಬ” ಮತ್ತು ಎಂ. ಗೋವಿಂದ ಪೈ ಅವರ “ನಾನು ಪ್ರಾಸ ಬಿಟ್ಟ ಕಥೆ”.  ವೇದ ವಿದ್ವಾಂಸರಾದ ದಿವಂಗತ ಬನ್ನಂಜೆ ಗೋವಿಂದಾಚಾರ್ಯರ “ಶುಕನಾಶನ ಉಪದೇಶ” ಮತ್ತು ಶತಾವಧಾನಿ ಆರ್. ಗಣೇಶ್ ಅವರ “ಶ್ರೇಷ್ಠ ಭಾರತೀಯ ಚಿಂತನೆಗಳು” ಸೇರಿಸಲಾಗಿದೆ ಸೇರಿಸಲಾಗಿದೆ.

ಪಠ್ಯ ಪುಸ್ತಕ ಪುನಃ  ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದಂತೆ  ಹೆಡ್ಗೆವಾರ್ ಅವರನ್ನು ಬರಹಗಾರರಾಗಿ ಆಯ್ಕೆ ಮಾಡಿದ್ದೇವೆ ಹೊರತು ಅವರ ಸಿದ್ಧಾಂತ ಅಥವಾ ಸಂಘಟನೆಯ ಆಧಾರದ ಮೇಲೆ ಅಲ್ಲ ಎಂದು ತಿಳಿಸಿದ್ದಾರೆ. ಇದು ಒಂದು ಕಪಟಿಯಾಗಿ ಕೋಮುವಾದ ಹರಡಿಸುವ ಹೇಳಿಕೆ ಆಗಿದೆ. ಈ ಪಠ್ಯ ವಿಧ್ಯಾರ್ಥಿಗಳು ಓದಿದರೆ ನಾಡಿನ ಸೌಹಾರ್ದತೆ ನಾಶವಾಗಲಿದೆ. ಯಾವುದೇ ವ್ಯಕ್ತಿಯ ಬರಹ ಸೈದ್ದಾಂತಿಕ ನೆಲೆಯಲ್ಲಿಯೇ ಗುರುತಿಸಬೇಕೆ ವಿನಹಃ ಅವರ ಬರಹಗಾರ ಎಂಬ ಹಣೆ ಪಟ್ಟೆಯಲ್ಲಿ ಅಲ್ಲಾ ಎಂಬುದು ಸ್ಪಷ್ಟ.

ಅಷ್ಟಕ್ಕೂ ಈ  ಹೆಡ್ಗೆವಾರ್ ಯಾವ ಬರಹಗಾರ ಎಂಬ ಬಗ್ಗೆ ರೋಹಿತ ಚಕ್ರತಿರ್ಥ ಅವರೇ ಉತ್ತರಿಸಬೇಕು? ನಾಡಿನಲ್ಲಿ ಅನೇಕ ಬರಹಗಾರರ ಯೋಗ್ಯ ಪಠ್ಯಗಳಿದ್ದರು ಹೆಡಗೇವಾರ್ ಭಾಷಣ ಸೇರಿಸುವ ಅನಿವಾರ್ಯತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ಯಾವ ಸಾಮಾಜಿಕ ನೆಲೆಯಲ್ಲಿ ಅವರು ಸಾಹಿತ್ಯ ಕೃಷಿ ಮಾಡಿದ್ದಾರೆ ಎಂದು ತಿಳಿಸಬೇಕು ಎಂದು ಎಸ್ಎಫ್ಐ ಸವಾಲು ಹಾಕಿದೆ. ಕನ್ನಡ ನಾಡಿನ ಹಲವು ಬರಹಗಾರರ ಪಠ್ಯ ಹಿಡಬೇಕಿತ್ತು ಬದಲಿಗೆ ಸಂಘಪರಿವಾರದ ಸಂಸ್ಥಾಪಕ ನನ್ನು ಪರಿಚಯಿಸಿ ಶಿಕ್ಷಣದ ಕೇಸರೀಕರಣ, ಕೋಮುವಾದೀಕರಣ ಮೂಲಕ ವಿಷ ಬೀಜ ಬಿತ್ತುವ ಕೆಲಸಕ್ಕೆ ರಾಜ್ಯ ಬಿಜೆಪಿ ಸರ್ಕಾರ ಕೈ ಹಾಕಿರುವುದನ್ನು ನಾಡಿನ ಸಾಹಿತಿಗಳು,ಚಿಂತಕರು, ದೇಶಪ್ರೇಮಿಗಳು, ಶಿಕ್ಷಣ ಪ್ರೇಮಿಗಳು, ವಿಚಾರವಂತರು, ಸಂವಿಧಾನಾತ್ಮಕ ಎಲ್ಲಾ ಸಂಘಟನೆಗಳು, ವಿದ್ಯಾರ್ಥಿಗಳು, ಪಾಲಕರು ಪ್ರತಿರೋಧ ತೋರಿ ಈ ಕೇಸರಿ ಪಠ್ಯವನ್ನು  ಪ್ರಜ್ಞಾವಂತ ಜನರ ವಿರೋಧಿಸಬೇಕು ಎಂದು ಎಸ್ಎಫ್ಐ ಕೋರಿದೆ.

ಹೆಡ್ಗೆವಾರ್ ಸಂಘದ ಸಂಸ್ಥಾಪಕರಾಗಿ ರೋಹಿತ ಚಕ್ರತಿರ್ಥ ಅವರಿಗೆ ಆದರ್ಶ ಆಗಿರಬಹುದು ಆದರೆ ದೇಶದ ಜನತೆಗಲ್ಲಾ. ಹಾಗೇ ಹೆಡ್ಗೆವಾರ್ ಅವರ ಯಾರಾಗಬೇಕು ಆದರ್ಶ ಪುರುಷ ಭಾಷಣ ಸಂಘ ಪರಿವಾರಕ್ಕೆ ಆದರ್ಶ ಅನಿಸಬಹುದು ಆದರೆ ಈ ನಾಡಿನ ವಿದ್ಯಾರ್ಥಿಗಳಿಗಲ್ಲಾ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ ಎಫ್ ಐ) ರಾಜ್ಯ ಸಮಿತಿಯು ಸರ್ಕಾರಕ್ಕೆ ಎಚ್ಚರಿಸುತ್ತಾ ತಕ್ಷಣವೇ ಪಠ್ಯವನ್ನು ಮೊದಲಿನಂತೆ ಯತಾವತ್ತಾಗಿ ಜಾರಿ ಮಾಡಬೇಕು. ಹೆಡ್ಗೇವಾರ್ ಭಾಷಣ ಸೇರಿದಂತೆ ಅನೇಕ ಕೋಮುವಾದಿ ಪಠ್ಯಗಳನ್ನು ಈ ಕೂಡಲೇ ಬೇಷರತ್ತಾಗಿ ಕೈಬಿಡಬೇಕು ಎಸ್ಎಫ್ಐ ರಾಜ್ಯಾದ್ಯಂತ ಪ್ರತಿಭಟನೆಗಳ ಮೂಲಕ ರಾಜ್ಯ ಸರ್ಕಾರಕ್ಕೆ ಎಸ್‌ಎಫ್‌ಐ ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *