ಬೆಂಗಳೂರು: ‘ಬಿಜೆಪಿ ಸರ್ಕಾರ ದಿನಬೆಳಗಾದರೆ ಜನರ ಜೇಬಿಗೆ ಕನ್ನ ಹಾಕುತ್ತಿದೆ. ಇದು ಪಿಕ್‌ಪ್ಯಾಕೆಟ್ ಸರ್ಕಾರ. ಇದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸೇರಿದಂತೆ ದಿನಬಳಕೆಯ ಎಲ್ಲ ವಸ್ತುಗಳ ಬೆಲೆ ಇಳಿಕೆ ಮಾಡುವವರೆಗೂ ನಾವು ನಿರಂತರವಾಗಿ ಹೋರಾಟ ಮುಂದುವರಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕೇಂದ್ರದ ಬಿಜೆಪಿ ಸರಕಾರ ನಿರಂತರವಾಗಿ ಇಂಧನ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಡಿ.ಕೆ.ಶಿವಕುಮಾರ್ ಸದಾಶಿವನಗರದ ತಮ್ಮ ನಿವಾಸದಿಂದ ವಿಧಾನಸೌಧಕ್ಕೆ ಎತ್ತಿನಗಾಡಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ʻʻದೇಶದ ಇತಿಹಾಸದಲ್ಲಿ ಈ ಸರ್ಕಾರ ಬೆಲೆ ಏರಿಕೆ ಮಾಡಿದಂತೆ ಬೇರೆ ಯಾವುದೇ ಸರ್ಕಾರ ಮಾಡಿರಲಿಲ್ಲ. ಭಾರತಕ್ಕಿಂತ ಹಿಂದುಳಿದಿರುವ ನೆರೆ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಭೂತಾನ್ ಹಾಗೂ ಪಾಕಿಸ್ತಾನಕ್ಕಿಂತ ನಮ್ಮ ದೇಶದಲ್ಲಿ ಇಂಧನ ಬೆಲೆ ಹೆಚ್ಚಾಗಿದೆ. ವಿಶ್ವದಲ್ಲೇ ಈ ಇಂಧನಗಳ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುತ್ತಿರುವ ದೇಶ ಭಾರತವಾಗಿದೆ. ಇದು ಜನ ಸಾಮಾನ್ಯರ ಬದುಕನ್ನು ದುಸ್ಥಿತಿಗೆ ಕೊಂಡೊಯ್ಯುತ್ತಿದ್ದು, ಇದರ ವಿರುದ್ಧ ವಿಧಾನಸೌಧದ ಒಳಗೆ ಹಾಗೂ ಹೊರಗೆ ಪ್ರತಿಭಟನೆ ಮುಂದುವರೆಸುತ್ತೇವೆʼʼ ಎಂದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡಿದ್ದಾಗ ಅದನ್ನು ಮಾಜಿ ಪ್ರಧಾನಿ ವಾಜಪೇಯಿ ಅವರು ಕ್ರಿಮಿನಲ್ ಆಕ್ಟ್ ಎಂದು ಹೇಳಿದ್ದರು. ಪೆಟ್ರೋಲ್ ಬೆಲೆ 105 ರೂ. ಆಗಿದೆ, ಗ್ಯಾಸ್ ಬೆಲೆ 880 ರೂ. ಆಗಿದೆ. ಇದರ ಪರಿಣಾಮವಾಗಿ ಎಲ್ಲ ದಿನಬಳಕೆ ಪದಾರ್ಥಗಳು, ವಸ್ತುಗಳು ಹಾಗೂ ಯಂತ್ರೋಪಕರಣಗಳ ಬೆಲೆಯೂ ಹೆಚ್ಚಾಗಿದೆ. ಸರ್ಕಾರ ಯಾರಿಗಾದರೂ ಸಂಬಳ ಹೆಚ್ಚಿಸಿದೆಯಾ? ಆದಾಯ ಹೆಚ್ಚಿಸಿದೆಯಾ? ಜನ ಉದ್ಯೋಗ ಕಳೆದುಕೊಳ್ಳುತ್ತಿರುವಾಗ ಈ ಬೆಲೆ ಏರಿಕೆ ಮಾಡಲಾಗುತ್ತಿದೆ. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವೇ ಇಲ್ಲ. ಯಾರಿಗೂ ಸಹಾಯ ಮಾಡಿಲ್ಲ.
ನಾವು ಹೋರಾಟ ಮಾಡಿ ಸರ್ಕಾರದ ಮೇಲೆ ಒತ್ತಡ ತರಲೇಬೇಕಾಗಿದೆ. ನಮ್ಮ ಬಳಿ ಬೇರೆ ದಾರಿ ಇಲ್ಲವಾಗಿದೆ. ಪ್ರಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಈಗಲಾದರೂ ಬೆಲೆ ಏರಿಕೆಯನ್ನು ತಡೆಗಟ್ಟುತ್ತಾರೆಂಬ ನಿರೀಕ್ಷೆಯಿದೆ. ಪೆಟ್ರೋಲ್ ಬೆಲೆಯನ್ನು 75 ರೂ.ಗೆ ಇಳಿಸಲೇಬೇಕಾಗಿದೆ. ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಈ ಹೋರಾಟ ಮುಂದುವರಿಸುತ್ತೇವೆ. ಈ ಹೋರಾಟದ ಬಿಸಿಯನ್ನು ಬಿಜೆಪಿ ಹಾಗೂ ಸರ್ಕಾರಕ್ಕೆ ಎರಡಕ್ಕೂ ಮುಟ್ಟಿಸುತ್ತೇವೆ.
ಶ್ರೀಮಂತ ಪಾಟೀಲ್ ಮೇಲೆ ಸುಮೋಟೋ ಪ್ರಕರಣ ದಾಖಲಿಸಿ
ಶ್ರೀಮಂತ ಪಾಟೀಲ್ ಅವರು ಮಾಜಿ ಸಚಿವರಾಗಿದ್ದವರು, ಈಗ ಬಿಜೆಪಿ ಶಾಸಕರಾಗಿದ್ದಾರೆ. ಅವರು ತಮ್ಮ ಕಾರ್ಯಕರ್ತರು ಹಾಗೂ ಮಾಧ್ಯಮಗಳ ಮುಂದೆ ಮಾತನಾಡುವಾಗ ಬಿಜೆಪಿಯಿಂದ ಅವರಿಗೆ ಹಣದ ಆಮಿಷ ಬಂದಿತ್ತು ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಂದ ಕೂಡಲೇ ಎಸಿಬಿ ಹಾಗೂ ಇಡಿ ಇಲಾಖೆಗಳು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕಾಗಿತ್ತು. ಯಾರು ಈ ಆಮೀಷ ಒಡ್ಡಿದ್ದರು? ಎಷ್ಟು ಹಣದ ಆಮಿಷ ಕೊಟ್ಟಿದ್ದರು? ಎಂಬ ಬಗ್ಗೆ ತನಿಖೆ ನಡೆಸಬೇಕು. ಇದರಲ್ಲಿ ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಇದು ಬಹಿರಂಗ ಸತ್ಯ. ನಾನು ಈ ಹಿಂದೆಯೂ ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದೆ.
ಈ ಹಿಂದೆ ರಮೇಶ್ ಜಾರಕಿಹೊಳಿ ಅವರು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರು ಬಿಜೆಪಿ ಸರ್ಕಾರ ರಚಿಸಲು ಮನೆ ಮಾರಿ ಹಣ ವೆಚ್ಚ ಮಾಡಿದ್ದರು ಎಂದು ಹೇಳಿದ್ದರು. ಆ ಹಣದಲ್ಲಿ ಯಾರನ್ನು ಖರೀದಿ ಮಾಡಲಾಗಿತ್ತು? ಇನ್ನು ಶ್ರೀನಿವಾಸಗೌಡ ಅವರಿಗೆ ಡಾ. ಅಶ್ವಥ್ ನಾರಾಯಣ ಅವರು ಹಣದ ಆಮಿಷ ನೀಡಿದ್ದರು ಎಂದು ಹೇಳಿದ್ದರು. ಅದೇ ರೀತಿ ಈಗಲೂ ಈ ವಿಚಾರ ಮತ್ತೆ ಪ್ರಸ್ತಾಪವಾಗಿದೆ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.