ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ದಿನಾಂಕಗಳು ನಿಗದಿಯಾಗಿದ್ದು, ಜುಲೈ 19 ಮತ್ತು 22 ರಂದು ಎರಡು ದಿನ ಪರೀಕ್ಷೆಯನ್ನು ನಡೆಸಲು ಸರಕಾರ ನಿರ್ಧರಿಸಿದೆ. ಆದರೆ, ಪರೀಕ್ಷೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರಗಳನ್ನು ನೀಡಲು ನಿರಾಕರಿಸುತ್ತಿರುವುದು ತಿಳಿದು ಬಂದಿದೆ.
ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಗೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿವೆ. ಕಳೆದ ವರ್ಷದ ಕನಿಷ್ಠ ಶೇಕಡಾ 50ರಷ್ಟು ಶುಲ್ಕ ಕಟ್ಟುವಂತೆ ಒತ್ತಾಯಿಸುತ್ತಿವೆ. ಶೇಕಡಾ 50ರಷ್ಟು ಕಳೆದ ವರ್ಷದ ಶೈಕ್ಷಣಿಕ ಶುಲ್ಕವನ್ನು ಕಟ್ಟಿದರೆ ಮಾತ್ರ ಪ್ರವೇಶ ಪತ್ರ ನೀಡುವುದಾಗಿ ಖಾಸಗಿ ಶಾಲೆಗಳು ಪಟ್ಟು ಹಿಡಿದಿವೆ.
ಇದನ್ನು ಓದಿ: ಜುಲೈ 19 ಹಾಗೂ 22ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಸಚಿವ ಎಸ್ ಸುರೇಶ್ ಕುಮಾರ್
ಶುಲ್ಕ ಕಡಿತಗೊಳಿಸಿದ ಆದೇಶ ಮಾಡಿದ ಶಿಕ್ಷಣ ಸಚಿವರನ್ನೇ ಕರೆದುಕೊಂಡು ಬಂದರೂ ಪೂರ್ಣ ಶುಲ್ಕ ಕಟ್ಟದಿದ್ದರೆ ಹಾಲ್‌ಟಿಕೆಟ್ ಕೊಡಲ್ಲ. ನಾವು ನಿಗದಿಪಡಿಸಿರುವ ಶುಲ್ಕದಲ್ಲಿ ನಯಾ ಪೈಸೆ ಕಡಿಮೆ ಮಾಡಲ್ಲವೆಂದು ಷರತ್ತು ಹಾಕಿದ್ದಾರೆ
ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪ್ರವೇಶ ಪತ್ರ ಸಿಗದಿದ್ದರೆ, ತಕ್ಷಣ ವಿತರಣೆ ಮಾಡಲು ಕ್ರಮವಹಿಸಬೇಕೆಂದು ಎಲ್ಲ ಡಿಡಿಪಿಐ ಹಾಗೂ ಬಿಇಒಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧ್ಯಕ್ಷರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ. ಅನ್ಬುಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.
ಇದನ್ನು ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಕರ್ನಾಟಕ ಸರ್ಕಾರದ ನಿರ್ಧಾರ ಎತ್ತಿ ಹಿಡಿದ ಹೈಕೋರ್ಟ್
ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಾಲೆಗಳ ನಡುವಿನ ಗುದ್ದಾಟ ತಾರಕಕ್ಕೇರಿದೆ ಎಂದು ತಿಳಿದು ಬಂದಿದೆ. ಖಾಸಗಿ ಶಾಲೆಗಳ ಈ ನಡೆಯಿಂದಾಗಿ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.
ಪೂರ್ಣ ಶುಲ್ಕ ಪಾವತಿಸದೇ ಇರುವುದರ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಯಾವುದೇ ರೀತಿಯಲ್ಲೂ ಮಕ್ಕಳಿಗೆ ತೊಂದರೆ ಆಗದಂತೆ ಬಿಇಒಗಳು ಕ್ರಮ ವಹಿಸಲಿದ್ದಾರೆ ಎಂದು ಹೇಳಿದ್ದಾರೆ.