ಬೆಂಗಳೂರು: ಆರ್‌ಎಸ್‌ಎಸ್ ಅಣತಿಯಂತೆ ಸರ್ಕಾರ ನಡೆಯುತ್ತಿದ್ದು, ಜನರ ಮೇಲೆ ಧರ್ಮದ ರಾಜಕಾರಣ ಮಾಡಲಾಗುತ್ತಿದ್ದು, ಜನರನ್ನು ಬೀದಿಗೆ ಹಾಕುತ್ತಿದೆ. ಜನರ ಆದಾಯ ಕಡಿಮೆಯಾಗುತ್ತಿದೆ. ಈ ಸರ್ಕಾರಕ್ಕೆ ಮಾತಿನ ಮೂಲಕ ಹೇಳಿದರೆ ತಿಳಿಯಲ್ಲ. ಹೋರಾಟದ ಮೂಲಕ ಅವರನ್ನು ಎಬ್ಬಿಸಬೇಕು ಎಂದು ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಕರೆ ನೀಡಿದರು.
ಜನವರಿ 18ರಿಂದ 22ರವರೆಗೆ ಹಮ್ಮಿಕೊಳ್ಳಲಾದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನದ ಬಹಿರಂಗ ಸಭೆಯನ್ನು ಬಸವನಗುಡಿ ನ್ಯಾಷನ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಭೆ ಉದ್ದೇಶಿಸಿ ಮಾತನಾಡಿದ ತಪನ್ ಸೇನ್ ಅವರು ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷೆ ಎಸ್. ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಪದಾಧಿಕಾರಿಗಳ ಸಾಮೂಹಿಕ ನಾಯಕತ್ವ ಮತ್ತು ಕಾರ್ಮಿಕರ ಸಹಾಯದಿಂದಲೇ ಸಮ್ಮೇಳನ ಯಶಸ್ವಿಯಾಗಿದೆ ಎಂದು ಅಭಿನಂದನೆ ಸಲ್ಲಿಸಿ ತಮ್ಮ ಭಾಷಣ ಆರಂಭಿಸಿದರು.
ಮುಂದುವರೆದು ಮಾತನಾಡಿದ ಅವರು, ಕಾರ್ಮಿಕರ ಹೋರಾಟಗಳಲ್ಲಿ ಸಿಐಟಿಯು ಜಂಟಿಯಾಗಿ ಕೆಲಸ ಮಾಡುತ್ತಿದೆ. ಎಲ್ಲಾ ಅಡೆತಡೆಗಳನ್ನು ಮೀರಿ ಸಮ್ಮೇಳನ ಯಶಸ್ವಿಯಾಗಿದೆ. ಈ ಸಮ್ಮೇಳನದಲ್ಲಿ ನಮ್ಮ ಮುಂದಿನ ಯೋಜನೆಗಳ ಬಗ್ಗೆ ರೂಪುರೇಷೆಗಳನ್ನು ತಯಾರಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ನೀತಿಗಳಿಂದಾಗಿ ಜನರು ಬೀದಿಗೆ ಬಿದ್ದಿದ್ದಾರೆ. ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ಒಂದೆಡೆ ದೊಡ್ಡ ಪ್ರಮಾಣದ ಹುದ್ದೆಗಳು ಖಾಲಿ ಇವೆ. ಮತ್ತೊಂದೆಡೆ ಹುದ್ದೆಗಳನ್ನು ಖಾಯಂ ಮಾಡಲು ಸರ್ಕಾರ ಮುಂದಾಗುತ್ತಿಲ್ಲ. ಕಾರ್ಮಿಕರು, ಯುವಕರು ಉದ್ಯೋಗವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಎಲ್ಲವನ್ನು ಖಾಸಗೀಕರಣ ಮಾಡುವ ಮೂಲಕ ಬಂಡವಾಳದಾರರ ಪರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಅಂಗನವಾಡಿ ನೌಕರರ ಹೋರಾಟ ನಡೆಯುತ್ತಿದೆ. ಸರ್ಕಾರ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಎಲ್ಲಿಯವರೆಗೂ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ನಾಲ್ಕು ದಿನ ನಡೆದ ಅಖಿಲ ಭಾರತ ಸಮ್ಮೇಳನದಲ್ಲಿ ಕಾರ್ಮಿಕರು, ರೈತರ ಪ್ರಮುಖ ವಿಚಾರಗಳು ಮತ್ತು ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆದಿದೆ. ಈ ಎಲ್ಲಾ ಅಂಶಗಳ ಮೂಲಕ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ರೈತ-ಕಾರ್ಮಿಕರ ಹಕ್ಕುಗಳಿಗಾಗಿ ಮುಂದಿನ ಹೋರಾಟದ ಪೂರ್ವಭಾವಿಯಾಗಿ ಗಾಂಧೀಜಿ ಅವರ ಹುತಾತ್ಮ ದಿನ(ಜನವರಿ 30)ದಂದು ಬೃಹತ್ ಸಮಾವೇಶ ದೆಹಲಿಯಲ್ಲಿ ಏರ್ಪಡಿಸಲಾಗಿದೆ. ಎಲ್ಲರೂ ಮುಂಬರುವ ಪ್ರತಿಭಟನೆಗೆ ಸಹಕರ ನೀಡಬೇಕು ಎಂದು ಹೇಳಿದ ತಪನ್ ಸೇನ್ ಅವರು, ಸರ್ಕಾರದ ವಿರುದ್ಧ ಜಂಟಿ ಕಾರ್ಮಿಕ ಸಂಘಟನೆಗಳು ಒಟ್ಟಾಗಿ ಚಳವಳಿಗೆ ಮುಂದಾಗಬೇಕೆಂದು ಕರೆ ನೀಡಿದರು.
ಕೋಮುವಾದಿಗಳು ಜನರ ಮಧ್ಯೆ ವಿಷಬೀಜ ಬಿತ್ತುತ್ತಿದ್ದಾರೆ. ರಾಜಕೀಯ ಇಚ್ಚಾಶಕ್ತಿ ಮೂಲಕ ಜನರನ್ನು ವಿಭಜಿಸಲಾಗುತ್ತಿದೆ. ಇದರ ವಿರುದ್ಧ ಮನೆ ಮನೆಗೆ ತೆರಳಿ ಜನರನ್ನು ಜಾಗೃತಿ ಮೂಡಿಸುವ ಕೆಲಸ ಸಿಐಟಿಯು ಕೆಲಸ ಮಾಡಬೇಕಿದೆ. ಈ ಕೋಮುವಾದಿಗಳನ್ನು ಸೋಲಿಸಿ ಮನೆಗೆ ಕಳುಹಿಸಬೇಕು. ಸ್ವತಂತ್ರ್ಯದ ಅಮೃತ ಮಹೋತ್ಸವ ಆಚರಣೆಯಲ್ಲಿರುವ ನಮ್ಮನ್ನು ಸ್ವಾತಂತ್ರ್ಯ ಚಳುವಳಿಯ ಆಶಯಗಳನ್ನು ನಿರ್ನಾಮ ಮಾಡುವ ಮೂಲಕ ಜನರನ್ನು ಬೀದಿಗೆ ತರುತ್ತಿದ್ದಾರೆ. ಕಾರ್ಮಿಕರು-ರೈತರು ನಾವು ಒಟ್ಟಾಗಿ ಚಳುವಳಿಯನ್ನು ಬಲಿಷ್ಟಗೊಳಿಸಬೇಕೆಂದು ಕರೆ ನೀಡಿದರು.