ಬೆಂಗಳೂರು: ಉಕ್ರೇನ್-ರಷ್ಯಾ ನಡುವಿನ ಯುದ್ಧದಿಂದಾಗಿ ಬಲಿಯಾಗಿರುವ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಕುಟುಂಬಸ್ಥರಲ್ಲಿ ರಾಜ್ಯ ಕೇಂದ್ರ ಸರ್ಕಾರ ಕ್ಷಮೆಯಾಚಿಸಬೇಕು. ಭಾರತದಲ್ಲಿ ಶಿಕ್ಷಣ ಬಹಳ ಚೆನ್ನಾಗಿದೆ. ಆದರೆ ಹಣ ಬಹಳ ದುಬಾರಿ ಇದೆ. ಈ ಕಾರಣಕ್ಕಾಗಿ ಬೇರೆ ದೇಶಕ್ಕೆ ಹೋಗಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ವಿದ್ಯಾರ್ಥಿಗಳ ಸ್ವಾಭಿಮಾನಕ್ಕೆ ಇಂದು ಧಕ್ಕೆಯಾಗಿದೆ. ಒಬ್ಬ ವಿದ್ಯಾರ್ಥಿ ತನ್ನ ಪ್ರಾಣವನ್ನೇ ತೆತ್ತಿದ್ದಾನೆ. ಆದರೆ ನಮ್ಮ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು, ‘ಈ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದು ವ್ಯಾಸಂಗ ಮಾಡಲು ವಿದೇಶಕ್ಕೆ ಹೋಗಿದ್ದಾರೆ’ ಎಂದು ಆರೋಪಿಸುತ್ತಿದ್ದಾರೆ. ಆ ಸಚಿವರು ಒಂದು ಮಾತನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ದೇಶದ ಪ್ರತಿಭಾವಂತ ಯುವ ಸಮೂಹ ಯೂರೋಪ್, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದೆ. ಅಲ್ಲದೆ ಪ್ರತಿಷ್ಠಿತ ಐನೂರು ಕಂಪನಿಗಳಲ್ಲಿ ಬಹುತೇಕರು ಭಾರತದವರೇ ಮುನ್ನಡೆಸುತ್ತಿದ್ದಾರೆ ಎಂದರು.
ತಮ್ಮ ಮಕ್ಕಳನ್ನು ವೈದ್ಯರನ್ನಾಗಿ ಮಾಡಬೇಕು ಎಂದು ಪೋಷಕರು ಆಸೆ ಇಟ್ಟುಕೊಂಡಿರುತ್ತಾರೆ. ಇಲ್ಲಿನ ವೈದ್ಯಕೀಯ ಶಿಕ್ಷಣ ಎಷ್ಟು ದುಬಾರಿಯಾಗಿದೆ ಎಂದರೆ, 30 ಲಕ್ಷ, 1 ಕೋಟಿ, 2 ಕೋಟಿ ಕೊಟ್ಟು ಶಿಕ್ಷಣ ಕೊಡಿಸಲು ಜನರಿಗೆ ಸಾಧ್ಯವಿಲ್ಲ. ಎಲ್ಲರಿಗೂ ಆ ಆರ್ಥಿಕ ಶಕ್ತಿ ಇರುವುದಿಲ್ಲ. ಹೀಗಾಗಿ ವಿದೇಶಗಳಲ್ಲಿ ಕಡಿಮೆ ಶುಲ್ಕದಲ್ಲಿ ವ್ಯಾಸಂಗ ಮಾಡಿ ವೈದ್ಯಕೀಯ ಪದವಿ ಪಡೆಯಲು ಹೋಗಿರುತ್ತಾರೆ. ಅಮೆರಿಕ, ಲಂಡನ್ ನಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದ ಸಾವಿರಾರು ಮಂದಿ ನಮ್ಮ ದೇಶ ಹಾಗೂ ರಾಜ್ಯಕ್ಕೆ ಬಂದು ಓದುತ್ತಿದ್ದಾರೆ. ಬೇರೆ ಕಡೆಗಳಲ್ಲಿ ಹೃದಯ ಶಸ್ತ್ರಚಿಕಿತ್ಸೆ ದುಬಾರಿ ಎಂದು ಹಲವಾರು ಕಡೆಗಳಿಂದ ನಮ್ಮ ಜಯದೇವ ಹಾಗೂ ಇತರೆ ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ ಎಂದು ಹೇಳಿದರು.
ನಮ್ಮದು ಜಾಗತಿಕ ನಗರ. ನಮ್ಮ ಯುವಕರು ಬೇರೆ ದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಿದರೆ ತಪ್ಪಿಲ್ಲ. ವಿಶ್ವದಲ್ಲೇ ಅತ್ಯುತ್ತಮ ಮಾನವ ಸಂಪನ್ಮೂಲ ಹೊಂದಿರುವ ದೇಶ ಭಾರತ. ರಾಜ್ಯದಲ್ಲಿ 63 ಮೆಡಿಕಲ್ ಕಾಲೇಜು ಇದ್ದು, ಹೊರಗಿನಿಂದ ಬಂದು ಸಾಕಷ್ಟು ಜನ ಓದುತ್ತಿದ್ದಾರೆ. ಈ ಹಿಂದೆ ಉತ್ತರ ಭಾರತದ ಯಾವುದೇ ರಾಜ್ಯಗಳಲ್ಲಿ ಇಂಜಿನಿಯರಿಂಗ್ ಕಾಲೇಜುಗಳು ಇರಲಿಲ್ಲ. ನಾವು ಓದುತ್ತಿದ್ದಾಗ ಕರ್ನಾಟಕದಲ್ಲಿ ಮಾತ್ರ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳಿದ್ದವು. ಹೀಗಾಗಿ ಇಂದಿನ ಯುವಸಮೂಹ ಉತ್ತಮ ಶಿಕ್ಷಣ ಸಿಗಬೇಕು, ಉತ್ತಮ ನಾಗರೀಕರಾಗಬೇಕು ಎಂಬ ಉದ್ದೇಶದಿಂದ ವಿದೇಶಕ್ಕೆ ಹೋಗಿ ಓದುತ್ತಿದ್ದಾರೆʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಉಕ್ರೇನಿನಲ್ಲಿ ಯುದ್ಧಕ್ಕೆ ಬಲಿಯಾಗಿರುವ ನವೀನ್, ಎಸ್ಎಸ್ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದಿದ್ದಾನೆ. ಕಡಿಮೆ ದರದಲ್ಲಿ ವಿದ್ಯಾಭ್ಯಾಸ ಮಾಡಲು ಆತ ವಿದೇಶಕ್ಕೆ ತೆರಳಿದ್ದ. ಎಲ್ಲರಿಗೂ ಒಂದೇ ಸಮನಾಗಿ ಆರ್ಥಿಕ ಶಕ್ತಿ ಇರುವುದಿಲ್ಲ. ನಮಗಿರುವ ಶಕ್ತಿ ನಿಮಗಿರುವುದಿಲ್ಲ, ನಿಮಗಿರುವ ಶಕ್ತಿ ಬೇರೊಬ್ಬರಿಗೆ ಇರುವುದಿಲ್ಲ. ಚಾಲಕರಿಂದ, ರೈತ, ತರಕಾರಿ ಮಾರುವವರವರೆಗೂ ಎಲ್ಲರೂ ತಮ್ಮ ಮಕ್ಕಳು ಉತ್ತಮ ಪ್ರಜೆ ಆಗಬೇಕು ಎಂದು ಅಪೇಕ್ಷಿಸುತ್ತಾರೆ. ಆದರೆ, ಕೇಂದ್ರ ಸರ್ಕಾರದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು, ‘ಕಡಿಮೆ ಅಂಕ ಬಂದಿದೆ. ಹೀಗಾಗಿ ವಿದೇಶಕ್ಕೆ ಹೋಗಿ ಓದುತ್ತಿದ್ದಾರೆ’ ಹೇಳಿದ್ದು. ಅದನ್ನು ಪ್ರಧಾನ ಮಂತ್ರಿಗಳು ಅನುಮೋದನೆ ನೀಡುತ್ತಾರೆ ಎಂದರೆ ಇದಕ್ಕಿಂತ ನಾಚಿಕೆಗೇಡಿನ ವಿಚಾರ ಮತ್ತೊಂದಿಲ್ಲ. ಹೀಗಾಗಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ಕೂಡಲೇ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಉಕ್ರೇನ್ ನಲ್ಲಿ ನಮ್ಮ ವಿದ್ಯಾರ್ಥಿಗಳ ಪರದಾಟ ಮುಂದುವರಿದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೇಂದ್ರ ಸರ್ಕಾರ ಕೂಡಲೇ ಅಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು. ಬಿಜೆಪಿ ಸರ್ಕಾರಕ್ಕೆ ವಿದ್ಯಾರ್ಥಿಗಳ ತಂದೆ, ತಾಯಂದಿರ ನೋವು ಅರ್ಥವಾಗುತ್ತಿಲ್ಲ. ವಿದ್ಯಾರ್ಥಿಗಳ ಭಾವನೆ ತಿಳಿಯುತ್ತಿಲ್ಲ. ನಮ್ಮ ಪಾದಯಾತ್ರೆ ಮುಕ್ತಾಯವಾದ ಕೂಡಲೇ ನಾನು ಹಾಗೂ ನಮ್ಮ ನಾಯಕರು ಮೃತ ವಿದ್ಯಾರ್ಥಿ ಕುಟುಂಬವನ್ನು ಭೇಟಿ ಮಾಡುತ್ತೇವೆ ಎಂದರು.
ನಾಳೆ ಪಾದಯಾತ್ರೆಯ ಅಂತಿಮ ದಿನ
ನಾಳೆ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ನಡೆಯುತ್ತಿರುವ ಪಾದಯಾತ್ರೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದೊಂದಿಗೆ ಸಮಾರೋಪಗೊಳ್ಳಲಿದೆ. ನಾಳೆ ಬೆಳಗ್ಗೆ 9 ಗಂಟೆಗೆ ಮೇಕ್ರಿ ಸರ್ಕಲ್ ನಿಂದ ಯಾತ್ರೆ ಆರಂಭವಾಗಿ ನ್ಯಾಷನಲ್ ಕಾಲೇಜಿನತ್ತ ಹೊರಡಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ರಾಜ್ಯದ ಎಲ್ಲ ಸಂಘಟನೆಗಳು, ರಾಜಕಿಯೇತರ ಸಂಘಟನೆ, ಕನ್ನಡಪರ, ರೈತ, ಕಲಾವಿದರ, ಹೊಟೇಲ್ ಮಾಲೀಕರು, ಅಪಾರ್ಟ್‌ಮೆಂಟ್ ಸಂಘಟನೆಗಳು ಸೇರಿದಂತೆ ಎಲ್ಲರನ್ನು ಆಹ್ವಾನಿಸುತ್ತಿದ್ದೇನೆ. ನಾಳಿನ ಕಾರ್ಯಕ್ರಮಕ್ಕೆ ಸುಮಾರು 12 ರಾಜ್ಯಗಳ ಯುವ ಕಾಂಗ್ರೆಸ್ ಅಧ್ಯಕ್ಷರುಗಳು ಆಗಮಿಸುತ್ತಿದ್ದಾರೆ. ನಾನು ಅವರಿಗೆ ಆಹ್ವಾನ ನೀಡಿರಲಿಲ್ಲ. ಆದರೆ ರಾಜ್ಯದಲ್ಲಿ ಹೇಗೆ ಹೋರಾಟವನ್ನು ಸಂಘಟನೆ ಮಾಡಲಾಗುತ್ತಿದೆ ಎಂದು ನೋಡಲು ಆಗಮಿಸುತ್ತಿದ್ದಾರೆ. ನಾನು ಕೆಲವು ರಾಷ್ಟ್ರ ನಾಯಕರಿಗೆ ಆಹ್ವಾನ ನೀಡಿದ್ದೇವೆ ಎಂದರು.