ಮೈಸೂರು : ರಾಜ್ಯದಲ್ಲಿ ಸರಕಾರ ನಡೆಸುವ ಯಜಮಾನ ತನ್ನ ಆಡಳಿತದಲ್ಲಿ ಹಿಡಿತವನ್ನೇ ಕಳೆದುಕೊಂಡಿದ್ದಾರೆ, ಎಲ್ಲಾ ಹಂತದಲ್ಲೂ ವೈಫಲ್ಯತೆ ಎದ್ದು ಕಾಣುತ್ತಿದ್ದು, ಆಡಳಿತದಲ್ಲಿ ಭದ್ರತೆ ಇಲ್ಲದಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮುಖ್ಯಮಂತ್ರಿಗಳ ಹೆಸರು ಹೇಳದೆ ಪರೋಕ್ಷವಾಗಿ ಟೀಕಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವನಾಥ್, ಗ್ರಾಮೀಣ ಪ್ರದೇಶದ ಆಸ್ಪತ್ರೆಯನ್ನು ಸಜ್ಜುಗೊಳಿಸುವ ತವಕ ಆರೋಗ್ಯ ಮಂತ್ರಿಗಳಿಗಿದ್ದರೂ ವೈದ್ಯರ ನೇಮಕಾತಿ ನಡೆಯುತ್ತಿಲ್ಲ, ಅನುದಾನವೂ ಬಿಡುಗಡೆಯಾಗುತ್ತಿಲ್ಲ, ಪ್ರತಿಯೊಂದಕ್ಕೂ ಹಣಕಾಸು ಮಂತ್ರಿಯ ಹಸಿರು ನಿಶಾನೆ ತೋರಬೇಕಿದ್ದು, ಹಣಕಾಸು ಇಲಾಖೆಯೇ ಮುಖ್ಯಮಂತ್ರಿ ಹಿಡಿತದಲ್ಲಿದ್ದು, ಹತ್ತು ರೂಪಾಯಿಗೂ ಕೈಚಾಚಬೇಕಿದೆ.
ಇದನ್ನೂ ಓದಿ : ರೆಮ್ಡೆಸಿವಿರ್ ವಿತರಣೆಗೆ ಯಾಕೆ ವಿಳಂಬ : ಡಿಸ್ಟ್ರಿಬ್ಯೂಟರ್ ಸುಳ್ಳೆ? ಅಥವಾ ಸರಕಾರದ ಅಂಕಿಅಂಶ ಸುಳ್ಳೆ??
ಮುಖ್ಯಮಂತ್ರಿಗಳು ಸಹ ಆರೋಗ್ಯ ಸಚಿವರ ವೇಗಕ್ಕೆ ತಕ್ಕಂತೆ ಸ್ಪಂದಿಸುತ್ತಿಲ್ಲ, ಕೊರೋನಾದ 480 ಕೋಟಿ ಬಿಲ್‌ನ್ನು ಆಡಿಟ್ ನಡೆಸಿದ ವೇಳೆ ಎಲ್ಲವೂ ಬಹಿರಂಗವಾಗಿದೆ ಎಂದು ತಮ್ಮದೇ ಸರಕಾರವನ್ನು ಟೀಕಿಸಿದರು.
ಕೇಂದ್ರ ಸರಕಾರದಿಂದ ಕಳೆದ ಸಾಲಿನ ಬಜೆಟ್‌ನಲ್ಲಿ ಗ್ರಾಮೀಣ ಆಸ್ಪತ್ರೆಗಳಲ್ಲೇ ಎಲ್ಲ ರೀತಿಯ ಚಿಕಿತ್ಸೆಗೆ ಸಜ್ಜುಗೊಳಿಸಲು ಅನುದಾನ ಮೀಸಲಿಟ್ಟಿದ್ದು. ಇನ್ನೂ ಸಹ ಬಳಕೆಯಾಗಬೇಕಿದೆ ಎಂದರು.
ಹುಣಸೂರು ತಾಲೂಕಿನ ನಿಲುವಾಗಿಲು ಏತ ನೀರಾವರಿ ಯೋಜನೆಗೆ 19 ಕೋಟಿ ರೂ ಅನುದಾನ ಮಂಜೂರಾಗಿ, ಟೆಂಡರ್ ಮುಗಿದು ಗುತ್ತಿಗೆದಾರ ನೇಮಕವಾದ ಬಳಿಕವೂ ಹಣಕಾಸು ಸಚಿವಾಲಯ ಹಿಂಪಡೆದಿದೆ, ಪ್ರಶ್ನಿಸಿದರೆ ಸಿ.ಎಂ.ಕಚೇರಿ ಆದೇಶವೆನ್ನುತ್ತಾರೆ. ಈಬಗ್ಗೆ ಕಟುವಾಗಿಯೂ ಮಾತನಾಡಿದ್ದೇನೆ. ಸಣ್ಣ ನೀರಾವರಿ ಸಚಿವರು ಸಹ ಪ್ರಶ್ನಿಸಿದ್ದು, ಶೀಘ್ರವೇ ಯೋಜನೆ ಜಾರಿಗೊಳ್ಳುವ ವಿಶ್ವಾಸವಿದೆ ಎಂದರು.
ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿರುವ ರೈತರ ಭತ್ತ-ರಾಗಿಯ 700 ಕೋಟಿ ರೂ ಬಾಕಿ ಉಳಿಸಿಕೊಂಡಿದ್ದು, ಈವರೆಗೂ ಪಾವತಿಸಿಲ್ಲ. ಯಾಕೆಂದರೆ ರೈತರು ಕಮಿಷನ್ ಕೊಡಲು ಅಶಕ್ತರು, ಆದರೆ ಗುತ್ತಿಗೆದಾರರ ಬಿಲ್‌ಗಳು ಮಾತ್ರ ವಾರಕ್ಕೊಮ್ಮೆ ಪಾವತಿಯಾಗುತ್ತಿದ್ದು, ಶೇ.20ರಷ್ಟು ಕಮಿಷನ್ ಕಿಕ್ ಬ್ಯಾಕ್ ಪಡೆಯುವ ಸಂಪ್ರದಾಯ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಆರೋಪಿಸಿದರು.