ದಿಲ್ಲಿಯಲ್ಲಿ ಗಣತಂತ್ರದಿನದ ಘಟನೆಗಳ ನಿಷ್ಪಕ್ಷಪಾತ ತನಿಖೆ ನಡೆಯಲಿ-ಎಐಕೆಎಸ್ ಆಗ್ರಹ
ಗಣತಂತ್ರ ದಿನದಂದು ದಿಲ್ಲಿಯಲ್ಲಿ ನಡೆದಿರುವ ಘಟನೆಗಳು ಬಿಜೆಪಿ ಸರಕಾರ ಮತ್ತು ದಿಲ್ಲಿ ಪೋಲಿಸ್ ಛಿದ್ರಕಾರಿಗಳಿಗೆ ಪ್ರಚೋದನೆ ನೀಡುವಲ್ಲಿ ಶಾಮೀಲಾಗಿರುವುದರತ್ತ ಸ್ಪಷ್ಟವಾಗಿ ಬೊಟ್ಟು ಮಾಡಿ ತೋರಿಸುತ್ತವೆ ಎಂದು ಅಖಿಲ ಭಾರತ ಕಿಸಾನ್ ಸಭಾ ಹೇಳಿದೆ. ಬಿಜೆಪಿ ಸರಕಾರ ಮತ್ತು ದಿಲ್ಲಿ ಪೊಲಿಸ್ ಈ ಪ್ರಶ್ನೆಗಳಿಗೆ ಉತ್ತರಿಸಬೆಕಾಗಿದೆ ಎಂದು ಅದು ಹೇಳಿದೆ:
- ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿರದ ಕಿಸಾನ್ ಮಜ್ದೂರ್ ಸಂಘರ್ಷ ಕಮಿಟಿ(ಕೆ.ಎಂ.ಎಸ್.ಸಿ.) ಗೆ ಪ್ರತ್ಯೇಕವಾಗಿ ಅನುಮತಿ ನೀಡಿದ್ದೇಕೆ? ಸಂಯುಕ್ತ ಕಿಸಾನ್ ಮೋರ್ಚಾ ಅಣಿನೆರೆಸಿದ ರೈತರ ಸುತ್ತ ಭಾರೀ ಬ್ಯಾರಿಕೇಡ್‌ಗಳನ್ನು ಹಾಕಿರುವಾಗ ಕೆಎಂಎಸ್‌ಸಿ ಸುತ್ತ ಬ್ಯಾರಿಕೇಡ್‌ಗಳು ಇರಲಿಲ್ಲ ಏಕೆ? ಕೆಎಂಎಸ್‌ಸಿಯೊಂದಿಗೆ ಬಿಜೆಪಿ ಸರಕಾರ ಮತ್ತು ದಿಲ್ಲಿ ಪೋಲಿಸ್ ಸಂಬಂಧವೇನು?
- ಪೋಲೀಸರು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡತ್ವದೊಂದಿಗೆ ಒಪ್ಪಿಕೊಂಡಿದ್ದ ಮಾರ್ಗದ ಬದಲಾಗಿ ಕೆ.ಎಂ.ಎಸ್.ಸಿ.ಗೆ ಬೇರೆ ದಾರಿಯಲ್ಲಿ ಕೆಂಪುಕೋಟೆಯ ವರೆಗೆ ಹೋಗಲು ಬಿಟ್ಟಿದ್ದೇಕೆ?
- ಕೆಂಪು ಕೋಟೆಯಲ್ಲಿ ಬಾವುಟ ಹಾರಿಸಿದ ದೀಪ್ ಸಿಧು ಮತ್ತು ಇತರರೊಂದಿಗೆ ಪ್ರಧಾನ ಮಂತ್ರಿ ಮೋದಿ ಮತ್ತು ಬಿಜೆಪಿಯ ಸಂಬಂಧಗಳೇನು? ಅವರನ್ನು ಇನ್ನೂ ಏಕೆ ಬಂಧಿಸಿಲ್ಲ?
- ಕೆಂಪುಕೋಟೆಯಲ್ಲಿ ದಾಂಧಲೆ ನಡೆಸಿದ ಅಮ್ರೀಕ್ ಮಿಕಿ ಮತ್ತು ಬಿಜೆಪಿ ಹಾಗು ಅದರ ಸಂಸದ್ ಸದಸ್ಯರಾದ ಪರ್ವೆಶ್ ಸಾಹಿಬ್ ಸಿಂಗ್ ವರ್ಮ ಮತ್ತು ಮನೋಜ್ ತಿವಾರಿ ನಡುವಿನ ಸಂಬಂಧವೇನು?
- ಪಲ್ವಲ್ ನಿಂದ ಹೊರಟ ಪರೇಡ್‌ಗೆ 45 ಕಿ.ಮೀ.ವರೆಗಿನ ಮಾರ್ಗವನ್ನು ಒಪ್ಪಿದ್ದರೂ, ಅದು ಶಾಂತಿಯುತವಾಗಿ 15ಕಿ.ಮೀ. ದಾಟಿದ ಮೇಲೆ ಸಿಕರಿಯಲ್ಲಿ ಯಾವ ಪ್ರಚೋದನೆಯೂ ಇಲ್ಲದೆ ಅದರ ಮೇಲೆ ಅಮಾನುಷ ಲಾಠೀ ಪ್ರಹಾರ ಮಾಡಿದ್ದೇಕೆ? ಇಬ್ಬರು ಯುವಜನ ಸೇರಿದಂತೆ ಹಲವರನ್ನು ಗಾಯಗೊಳಿಸಿದ್ದೇಕೆ? ಸ್ವತಃ ಎಸ್.ಪಿ.ಯೇ 5-6 ಟ್ರಾಕ್ಟರುಗಳ ಟಯರುಗಳ ಗಾಳಿ ತೆಗೆಯಲು ಪ್ರಯತ್ನಿಸಿದ್ದೇಕೆ? ಪೋಲಿಸರ ಬಳಿಯಿಂದಲೇ ಕೆಲವರು ಪ್ರತಿಭಟನಾಕಾರರ ಮೇಲೆ ಕಲ್ಲು ತೂರುತ್ತಿದ್ದಾಗ ಪೋಲಿಸರು ಸುಮ್ಮನಿದ್ದುದೇಕೆ?
- ಪಲ್ವಲ್ ನಲ್ಲಿ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಅಮಾನಷ ಲಾಠೀ ಪ್ರಹಾರ ಮಾಡಿದ ಪೋಲೀಸರು ಕೆಂಪುಕೋಟೆಯತ್ತ ಹೊರಟ ಗುಂಪನ್ನು ತಡೆಯಲು ಪ್ರಯತ್ನಿಸಲಿಲ್ಲ ಏಕೆ?
- ರೈತರ ಮುಖಂಡರ ಮೇಲೆ ಗುಂಡು ಹಾರಿಸಲೆಂದೇ ಬಂದ ಸಮಾಜ ಘಾತುಕ ವ್ಯಕ್ತಿಗಳನ್ನು ಪೋಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಜನವರಿ 26ರಂದು ಕೂಡ ಪ್ರಚೋದಕ ಏಜೆಂಟರನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ ಹಲವು ಉದಾಹರಣೆಗಳಿವೆ. ಇವರಲ್ಲಿ ಕೆಲವರಂತೂ ತಮ್ಮನ್ನು ಪೋಲೀಸರೇ ಕಳಿಸಿದರು ಎಂದಿದ್ದರು. ಅವರ ಮೇಲೆ ಪೋಲಿಸ್ ಕೈಗೊಂಡಿರುವ ಕ್ರಮಗಳೇನು?
ಈ ಘಟನೆಗಳ ಹಿಂದಿರುವ ಸತ್ಯವನ್ನು ತಿಳಿಯಲು ಒಂದು ನಿಷ್ಪಕ್ಷಪಾತ ತನಿಖೆಯನ್ನು ನಡೆಸಬೇಕು ಎಂದು ಎಐಕೆಎಸ್ ಆಗ್ರಹಿಸಿದೆ. ರೈತಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಬಂಧಿಸಿದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತದೆ ಎಂದು ಅದು ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ನೀಡಿದೆ.