ಚಿಕ್ಕಬಳ್ಳಾಪುರ : ತಂದೆ ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದ ಯುವತಿಯೊಬ್ಬಳು, ಕಾಲೇಜು ಶಿಕ್ಷಣ ಮೊಟಕುಗೊಳಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಆಶ್ರಯ ಪಡೆದು,ಇನ್ನೂ ನನಗ್ಯಾರು ದಿಕ್ಕು ಎಂದು ದಿನ ದೂಡುತ್ತಿದ್ದಳು. ಈಗ ಈಕೆಯ ಬದುಕಲ್ಲಿ ಸಂತಸ ಮೂಡಿದೆ. ಆ ಸಂತಸಕ್ಕೆ ಕಾರಣ ಎಸ್ಎಫ್ಐ ಮುಖಂಡರೊಬ್ಬರು ತೆಗೆದುಕೊಂಡ ನಿರ್ಧಾರ.
ಹೌದು, ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯ, ಕಾನೂನು ವಿದ್ಯಾರ್ಥಿ, ಸೋಮಶೇಖರ್ ಸಾಂತ್ವನ ಕೇಂದ್ರದಲ್ಲಿದ್ದ ಮಮತಾ ಬಾಳಿಗೆ ಬೆಳಕಾಗುತ್ತಿದ್ದಾರೆ. ನವೆಂಬರ್ 03 ರಂದು ಅವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಮಮತಾಳ ಕಥೆ ಕಣ್ಣೀರು ತರಿಸುತ್ತೆ, ಹೃದಯ ಕರಗಿ ಕರಗಿ ನೀರಾಗುತ್ತೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಪುಟ್ಟಪರ್ತಿ ನಿವಾಸಿಯಾಗಿದ್ದ 23 ವರ್ಷದ ಮಮತಾ ಬೆಂಗಳೂರಿನ ಬಿ.ಎಂ.ಎಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಳು.
ಆದ್ರೆ ಮೂರು ವರ್ಷಗಳ ಹಿಂದೆ, ಟೈಲರ್ ಆಗಿದ್ದ ತಂದೆ ಅನಾರೋಗ್ಯದಿಂದ ಮೃತಪಟ್ಟರು. ಒಂದು ವರ್ಷದ ಹಿಂದೆ ತಾಯಿಯೂ ಸಹ ಅನಾರೋಗ್ಯದಿಂದ ಮೃತಪಟ್ಟರು. ಇದರಿಂದ ಮಮತಾಳ ಅಣ್ಣ ಮಾನಸಿಕ ಅಸ್ವಸ್ಥನಂತಾಗಿ ಹಾಸಿಗೆ ಹಿಡಿದುಬಿಟ್ಟ. ಇದ್ರಿಂದ ಕುಗ್ಗಿ ಹೋಗಿದ್ದ ಮಮತಾ ದಿಕ್ಕು ಕಾಣದೆ ಕಂಗಾಲಾಗಿದ್ದರು.
ಚಿಕ್ಕಬಳ್ಳಾಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಂತ್ವನ ಕೇಂದ್ರಕ್ಕೆ ಮಮತಾಳ ದೂರದ ಸಂಬಂಧಿ ಸೇರಿಸಿದ್ದರು. ‘ಸ್ವಾಧಾರ’ ಕೇಂದ್ರದಲ್ಲಿ ಆಶ್ರಯ ಪಡೆದು ದಿನ ದೂಡುತ್ತಿದ್ದಳು. ಜೀವನ ಇಲ್ಲಿಗೆ ಮುಗಿಯಿತು… ಎನ್ನುವಷ್ಟರಲ್ಲಿ ಆಕೆಯ ಬಾಳಲ್ಲಿ ಮತ್ತೆ ಸಂತಸ ಮೂಡಿ ಬಂದಿದೆ!
ಇತ್ತೀಚೆಗೆ ಮಮತಾಳ ದೂರದ ಸಂಬಂಧಿಯೊಬ್ಬರು ಮಮತಾ ಕಥೆಯನ್ನು ಎಸ್ಎಫ್ಐ ಮುಖಂಡ, ಕಾನೂನು ವಿದ್ಯಾರ್ಥಿ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗುರಾಲದಿನ್ನೆ ನಿವಾಸಿ ಸೋಮಶೇಖರ್ ಎನ್ನುವವರ ಗಮನಕ್ಕೆ ತಂದಿದ್ದಾರೆ. ಇದನ್ನರಿತ ಸೋಮಶೇಖರ್ ಮಮತಾಳ ಕತೆ ಕೇಳಿ, ತಾನೇ ಮದುವೆ ಆಗ್ತೀನಿ ಎಂದು ಮುಂದೆ ಬಂದು ಮನೆಯವರನ್ನು ಒಪ್ಪಿಸಿ, ವಿವಾಹಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ನವೆಂಬರ್ ನಾಲ್ಕರಂದು (04) ಮದುವೆ ನಿಗದಿಯಾಗಿದೆ.
“ನನ್ನ ವಿದ್ಯಾಬ್ಯಾಸ ಮುಗಿಯುತ್ತಾ ಬಂದಿತ್ತು, ನನಗೆ ಮದುವೆ ಮಾಡಿಕೊಳ್ಳಲು ನಮ್ಮ ಕುಟುಂಬ ಮತ್ತು ಹಿತೈಷಿಗಳು ಸಲಹೆ ನೀಡುತ್ತಿದ್ದರು”, ಚಳುವಳಿಯ ಭಾಗವಾಗಿದ್ದ ಕಾರಣ ಮದುವೆಯ ನಿರ್ಧಾರವನ್ನು ನಾನು ಮಾಡಿರಲಿಲ್ಲ. ಈ ವೇಳೆ ಹಿತೈಷಿಗಳೊಬ್ಬರು ಮಮತಾ ಬಗ್ಗೆ ವಿವರಿಸಿದಾಗ ಮದುವೆಯಾಗುವ ನಿರ್ಧಾರಕ್ಕೆ ಬಂದೆ ಎಂದೆನ್ನುತ್ತಾರೆ ಸೋಮಶೇಖರ್.
ಮಮತಾ, ನಾನು ಪರಸ್ಪರ ಕುಳಿತು ಚರ್ಚೆಮಾಡಿಕೊಂಡೆವು. ಚಳುವಳಿಯ ಕೆಲಸಗಳಿಗೆ ಬೆಂಬಲವಾಗಿ ನಿಲ್ಲುವುದಾಗಿ ಹೇಳಿದರು. ಮದುವೆಗೆ ನಾನು ಮುಂದಾದಾಗ ಬಹಳಷ್ಟು ಜನ ವಿರೋಧ ಮಾಡಿದರು ಆ ಹುಡುಗಿಯ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿ ತಡೆಯಲು ಪ್ರಯತ್ನಿಸಿದರು. ಇದಕ್ಕೆಲ್ಲ ಕಿವಿಗೊಡದೆ ಮದುವೆಯ ದಿನಾಂಕ ನಿಗದೆ ಮಾಡಿದ್ದೇವೆ. ನನಂಗಂತೂ ನಿಜಕ್ಕೂ ಖುಷಿಯಾಗುತ್ತಿದೆ. ಮಮತಾ ಕೂಡಾ ಖುಷಿ ಪಟ್ಟು ಸಂಭ್ರಮಿಸಿದ್ದಾರೆ. ಮನುಷ್ಯನಿಗೆ ಇದಕ್ಕಿಂತ ದೊಡ್ಡದು ಏನಿದೆ? ವಿದ್ಯಾರ್ಥಿ ಚಳುವಳಿಯ ನಾಯಕರು ಹೇಳಿದ ಮಾತು ಪಾಠಗಳಿಂದ ಎಡಪಂಥೀಯ ಚಿಂತನೆಗಳಿಂದ ಈ ರೀತಿ ಆಲೋಚನೆ ಮಾಡಲು ಸಾಧ್ಯವಾಯಿತು ಇಂತಹ ಸಮಾಜಮುಖಿ ಆಲೋಚನೆಗಳು ಬರಲು SFI ನಿಂದ ಮಾತ್ರ ಸಾಧ್ಯ ಎಂದೆನ್ನುತ್ತಾರೆ ಸೋಮಶೇಖರ್,
ಸೋಮಶೇಖರ್ ಹಾಗೂ ಮಮತಾ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಬಹಳಷ್ಟು ಜನ ಸೋಮಶೇಖರ್ ನಿರ್ಧಾರವನ್ನು ಶ್ಲಾಘಿಸುತ್ತಿದ್ದಾರೆ.
ತುಂಬಾ ಹೆಮ್ಮೆ ಮತ್ತು ಅಭಿನಂದನೆಗಳು.