ಸಂತೋಷ್ ಆತ್ಮಹತ್ಯೆ ಪ್ರಕರಣ : ಕೆಎಸ್ ಈಶ್ವರಪ್ಪ ವಿರುದ್ಧ ಕೇಸ್ ದಾಖಲು, ಎಫ್‌ಐಆರ್‌ನಲ್ಲಿ ಏನಿದೆ?

ಉಡುಪಿ : ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ದ ಮಧ್ಯರಾತ್ರಿ ಪ್ರಕರಣ ದಾಖಲು ಮಾಡಲಾಗಿದೆ. ಈ​ ಕೇಸ್​ನಲ್ಲಿ ಈಶ್ವರಪ್ಪ A-1 ಆರೋಪಿ, ಬಸವರಾಜ್​​ A-2, ರಮೇಶ್​ A-3 ಆರೋಪಿಗಳಾಗಿದ್ದಾರೆ.

ಗುತ್ತಿಗೆದಾರ​​​​​ ಸಂತೋಷ್​ ಪಾಟೀಲ್​​​ ಆತ್ಮಹತ್ಯೆ ಕೇಸ್​​ನಲ್ಲಿ ಸಂತೋಷ್​ ಸೋದರ ಪ್ರಶಾಂತ್​​ ಉಡುಪಿ ನಗರ ಠಾಣೆಗೆ ಮಧ್ಯರಾತ್ರಿ ನನ್ನ ತಮ್ಮನ ಸಾವಿಗೆ ಈಶ್ವರಪ್ಪ ಕಾರಣ ದೂರು ನೀಡಿದ್ದಾರೆ. ದೂರಿನ ಮೇಲೆ IPC-306, 34ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸಾವಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಕೇಸ್​ ನಲ್ಲಿ ಈಶ್ವರಪ್ಪ ಆಪ್ತರಾಗಿರುವ ಬಸವರಾಜ್​​, ರಮೇಶ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಎಫ್ಐಆರ್ ನಲ್ಲಿ ಏನಿದೆ ? ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೆನೇಂದರೆ, ಸನ್ 2020-21ನೇ ಸಾಲಿನಲ್ಲಿ ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಶ್ರೀ ಲಕ್ಷ್ಮೀ ದೇವಿ ಜಾತ್ರೆ ಜರುಗುವ ಹಿನ್ನಲೆ ಊರಿನ ಪ್ರಮುಖರು ಮತ್ತು ಸ್ವಾಮಿಗಳು ಸೇರಿಕೊಂಡು ಗ್ರಾಮೀಣ ಅಭಿವೃದ್ಧಿ ಸಚಿವರಾದ ಕೆ.ಎಸ್ ಈಶ್ವರಪ್ಪನವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಜಾತ್ರೆಯ ವಿಷಯ ತಿಳಿಸಿ ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿ, ಪೆವರ್ಸ್ ಜೋಡಣೆ ಇತ್ಯಾದಿ ಕಾಮಗಾರಿಗಳನ್ನು ಮಾನ್ಯರು ಮಾಡಿಕೊಡಬೇಕೆಂದು ಗ್ರಾಮಸ್ಥರು ಸಚಿವರಲ್ಲಿ ವಿನಂತಿಸಿಕೊಂಡಿರುತ್ತಾರೆ. ಆಗ ಸಚಿವ ಕೆ.ಎಸ್ ಈಶ್ವರಪ್ಪ, ನೀವು ನಮ್ಮ ಕಾರ್ಯಕರ್ತರು ಇದ್ದಿರಿ, ನೀವು ಕೆಲಸ ಶುರು ಮಾಡಿ, ನಾನು ಕಾಮಗಾರಿಗಳಿಗೆ ಎಷ್ಟೇ ಹಣ ಆದರೂ ಪರವಾಗಿಲ್ಲಾ ಕೆಲಸ ಶುರು ಮಾಡಿ ಎಂದು ತಿಳಿಸಿದ್ದರು.

ಇದನ್ನೂ ಓದಿ : ಈಶ್ವರಪ್ಪ ರಾಜೀನಾಮೆ ನೀಡುವವರೆಗೂ ಸಹೋದರನ ಮೃತದೇಹ ಎತ್ತಲ್ಲ – ಪ್ರಶಾಂತ್ ಪಾಟೀಲ್

ಊರಿಗೆ ಹಿಂದಿರುಗಿದ ಪ್ರಮುಖರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು, ಹಿಂಡಲಗಾ ಇವರು ಸಂತೋಷ ಕ ಪಾಟೀಲ್ ಈತನಿಗೆ ಕೆಲಸ ಪ್ರಾರಂಭಿಸಲು ತಿಳಿಸಿರುತ್ತಾರೆ. ಅದರಂತೆ ಸಂತೋಷ್ ಪಾಟೀಲ್ ಮತ್ತು ಉಳಿದ ಗುತ್ತಿಗೆದಾರರು ಸೇರಿಕೊಂಡು ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 4 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಯನ್ನು ಸ್ವಂತ ಹಣದಿಂದ ಹಾಗೂ ಇತರರ ಸಹಾಯದಿಂದ ಸರ್ಕಾರದ ಹಣವಿಲ್ಲದೇ ಪೂರ್ಣಗೊಳಿಸಿರುತ್ತಾರೆ. ಸದ್ರಿ ಕಾಮಗಾರಿಗಳ ಬಿಲ್ ಗಾಗಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತು ಅವರ ಆಪ್ತರಾದ ಬಸವರಾಜ್ ಮತ್ತು ರಮೇಶ್ ಅನ್ನು ಹಲವು ಸಾರಿ ಭೇಟಿಯಾಗಿ ಕೆಲಸ ಪೂರ್ಣಗೊಳಿಸಿದ್ದೇವೆ ಬಿಲ್ಲನ್ನು ಮಂಜೂರು ಮಾಡಲು ವಿನಂತಿಸಿಕೊಂಡಿರುತ್ತಾರೆ. ಆದರೆ ಅವರೆಲ್ಲರೂ ಹಾಗೆ ಕೆಲಸ ಆಗುವುದಿಲ್ಲಾ 40 ಪರ್ಸೆಂಟ್ ಕಮೀಷನ್ ನೀಡಿದರೆ ಬಿಲ್ ಪಾಸ್ ಮಾಡಿಸುವುದಾಗಿ ಹೇಳಿದ್ದರು.

ಈ ಕಮಿಷನ್ ವಿಷಯ ಕುರಿತು ಬೆಳಗಾವಿ ಗುತ್ತಿಗೆದಾರರ ಸಂಘದವರು ಸರಕಾರಕ್ಕೆ ದೂರು ಸಲ್ಲಿಸಿರುತ್ತಾರೆ. ಅದೇ ರೀತಿ ಗುತ್ತಿಗೆದಾರರಾದ ಸಂತೋಷ ಕ ಪಾಟೀಲ್ ಅವರು ಮಾದ್ಯಮಗಳ ಮುಖೇನ ಮಾರ್ಚ್​ ತಿಂಗಳಿನಲ್ಲಿ ಸಚಿವರಾದ ಕೆ.ಎಸ್ ಈಶ್ವರಪ್ಪ ವಿರುದ್ಧ ಮಾಧ್ಯಮಗಳಲ್ಲಿ ಆರೋಪಿಸಿದ್ದರು. ಇದಕ್ಕೆ ಮುಂಚಿತವಾಗಿ ಸಂತೋಷನು ತನ್ನ ಹೆಂಡತಿ ಜಯಾ ಹಾಗೂ ಫಿರ್ಯಾದುದಾರರ ಬಳಿ ಈ ವಿಷಯ ತಿಳಿಸಿರುತ್ತಾರೆ. ಸಂತೋಷರವರಿಗೆ ಪದೇಪದೇ ಏಕೆ ಬೆಂಗಳೂರಿಗೆ ಹೋಗುವುದು ಎಂದು ಪ್ರಶ್ನಿಸಿದಾಗ ಅವರು ಈ ಕಾಮಗಾರಿಗಳ ಬಿಲ್ ವಿಷಯವಾಗಿ ಕೆ.ಎಸ್ ಈಶ್ವರಪ್ಪ ಸಚಿವರು ಅವರನ್ನು ಭೇಟಿಯಾಗಿ ಬಿಲ್ ಪಾಸ್ ಮಾಡಿಸಲು ಹೋಗುತ್ತಿದ್ದೇನೆಂದು ತಿಳಿಸುತ್ತಿದ್ದರು.

ಬಿಲ್ ಪಾಸ್ ಆಗದ ಕಾರಣ ಆರ್.ಡಿ.ಪಿ.ಆರ್ ಸಚಿವರಾದ ಕೆ.ಎಸ್ ಈಶ್ವರಪ್ಪ ಮತ್ತು ಅವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ಅವರ ವಿರುದ್ಧ ವಿಡಿಯೊ ಫೂಟೇಜ್ ಮುಖೇನ 4 ಕೋಟಿ ಕಾಮಗಾರಿ ಹಣದ ಬಿಲ್ ಪಾಸ್ ಮಾಡದ ಕಾರಣ ಮುಂದೆ ಆಗುವ ಅನಾಹುತಕ್ಕೆ ನೀವೇ ಕಾರಣರಾಗಿರುತ್ತೀರಿ ಎಂದು ಮಾದ್ಯಮಗಳ ಮುಖೇನ ವಿಷಯ ಪ್ರಸ್ತಾಪಿಸಿದ್ದರು. ಈ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿಯಾದ ಅರುಣ ಸಿಂಗ್ ಹಾಗೂ ದೆಹಲಿ ಮಟ್ಟದ ಬಿಜೆಪಿ ವರಿಷ್ಠರಿಗೆ ಪ್ರಧಾನ ಮಂತ್ರಿಗಳ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದರು. ಆದರೂ ಸಹ ಬಿಲ್ ಪಾಸ್ ಆಗಿರುವುದಿಲ್ಲ.

ಅದೇ ವಿಷಯದಲ್ಲಿ ಮನನೊಂದು ತನ್ನ ಮೊಬೈಲಿನಿಂದ ವಾಟ್ಸ್ ಅಫ್ ಮುಖೇನ ಡೆತ್ ನೋಟ್ ಸಂದೇಶವನ್ನು ಮಾದ್ಯಮಗಳಿಗೆ ಮತ್ತು ಆಪ್ತರಿಗೆ ಕಳುಹಿಸಿ ಏಪ್ರಿಲ್ 11ರ ರಾತ್ರಿ 11 ಗಂಟೆಯಿಂದ 12ರ ಬೆಳಿಗ್ಗೆ 10 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿಯ ಶಾಂಭವಿ ಲಾರ್ಡ್​ನ ರೂಂ ನಂಬರ್ 207 ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಈ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ, ಬಸವರಾಜ್, ರಮೇಶ್ ಹಾಗೂ ಇತರರು ಕಾರಣ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರುತ್ತೇನೆ ಎಂದು ಸಂತೋಷ್ ಸಹೋದರ  ಪ್ರಶಾಂತ ಗೌಡಪ್ಪ ಪಾಟೀಲ ದೂರು ಸಲ್ಲಿಸಿದ್ದಾರೆ. ಈ ದೂರಿನ‌ ಅನ್ವಯ ಪ್ರಕರ ದಾಖಲಾಗಿದ್ದು. ಈ ಸಾವಿಗೆ ಕಾರಣರಾದ ಕೆ.ಎಸ್ ಈಶ್ವರಪ್ಪ, ಬಸವರಾಜ್, ರಮೇಶ್ ರವರ ಬಂಧನವಾಗುವ ಸಾಧ್ಯತೆ ಇದೆ.

 

Donate Janashakthi Media

Leave a Reply

Your email address will not be published. Required fields are marked *