ಬೆಳಗಾವಿ : ನನ್ನ ಸಹೋದರ ಸಂತೋಷ್ ನ ಸಾವಿಗೆ ನೇರವಾಗಿ ಸಚಿವ ಕೆಎಸ್ ಈಶ್ವರಪ್ಪನೇ ಕಾರಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ನನ್ನ ಸಹೋದರನ ಮೃತದೇಹ ಎತ್ತಲ್ಲ ಎಂದು ಸಹೋದರ ಪ್ರಶಾಂತ್ ಪಾಟೀಲ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಕಣ್ಣೀರಿಡುತ್ತಲೇ ಮಾತನಾಡಿದ ಅವರು, ‘ಶೇ.40ರಷ್ಟು ಗುತ್ತಿಗೆ ಹಣದಲ್ಲಿ ಕಮೀಷನ್ ಆರೋಪವನ್ನು ನನ್ನ ತಮ್ಮ ಮಾಡಿದ್ದ ನಂತರ, ಆತನ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಕೇಸ್ ಹಾಕಿದ್ದರು. ‘ನನ್ನ ತಮ್ಮ ಸಂತೋಷ್ ನಿಯತ್ತಿನ ಮನುಷ್ಯನಾಗಿದ್ದಾನೆ. ಅಂತವನ ವಿರುದ್ಧವೇ ಸುಳ್ಳು ಕೇಸ್ ಹಾಕಿಸಿದ್ದರು. ನನ್ನ ತಮ್ಮನ ಸಾವಿಗೆ ಈಶ್ವರಪ್ಪನೇ ಕಾರಣ, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡೋವರೆಗೆ, ಸಂತೋಷ್ ಮೃತ ದೇಹವನ್ನು ಎತ್ತಲ್ಲ’ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಸಂತೋಷ್ ಸ್ನೇಹಿತ ಸುನೀಲ್ ಪವಾರ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಬೆಳಗಾವಿಯ ಹಿಂಡಲಗಾ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಕೋಟಿ ರೂ.ಗಳ 108 ರಸ್ತೆ ಕಾಮಗಾರಿಗೆ ನೇರವಾಗಿ ಈಶ್ವರಪ್ಪ ಅವರ ಅನುಮತಿ ಪಡೆದು ಚಾಲನೆ ನೀಡಿದ್ದೇನೆ ಎಂದು ಇತ್ತೀಚೆಗೆ ಸಂತೋಷ್ ಪಾಟೀಲ್ ಹೇಳಿದ್ದರು. ಅಂತಿಮವಾಗಿ ಆರ್‌ಡಿಪಿಆರ್ ಇಲಾಖೆ ಮತ್ತು ಈಶ್ವರಪ್ಪ ಅವರ ಸಂಗಡಿಗರು ವರ್ಕ್ ಆರ್ಡರ್ ಅಥವಾ ಬಿಲ್ ಪಡೆಯಲು ಸಹಾಯ ಮಾಡಲು ನಿರಾಕರಿಸಿದರು ಎಂದು ಆರೋಪಿಸಿದ್ದರು.
ಸಂತೋಷ್ ಪಾಟೀಲ್ ಅವರಿಗೆ ದೊಡ್ಡ ಮೊತ್ತದ ಸಾಲ ನೀಡಿದ ಹಣಕಾಸುದಾರರು ಸಾಲವನ್ನು ಹಿಂದಿರುಗಿಸುವಂತೆ ಒತ್ತಡ ಹೇರಲು ಪ್ರಾರಂಭಿಸಿದ ನಂತರ ಅವರು ಮಾರ್ಚ್ 11 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪತ್ರ ಬರೆದಿದ್ದರು ಮತ್ತು ಬಿಲ್ ಹಾಗೂ ವರ್ಕ್ ಆರ್ಡರ್‌ಗಳನ್ನು ಬಿಡುಗಡೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಬಿಟ್ಟು ಬೇರೆ ದಾರಿ ಇಲ್ಲ ಎಂದು ಹೇಳಿದ್ದರು. ಹಾಗಾಗಿ ಸಂತೋಷ್ ಸಾವಿನ ಸಮಗ್ರ ತನಿಖೆ ನಡೆಸಬೇಕು ಎಂದು ಸುನೀಲ್ ಪವಾರ್ ಆಗ್ರಹಿಸಿದ್ದಾರೆ.