ಮುಂಬೈ: ಪದ್ಮವಿಭೂಷಣ ಪ್ರಶಸ್ತಿ ವಿಜೇತ ಪಂಡಿತ್ ಶಿವಕುಮಾರ್ ಶರ್ಮ ನಿಧನರಾಗಿದ್ದಾರೆ. 6 ತಿಂಗಳಿನಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು(ಮೇ 10) ಹೃದಯಾಘಾತದಿಂದ ನಿಧನರಾಗಿದ್ದಾರೆ.
ದೇಶದ ಸಾಂಸ್ಕೃತಿಕ ಲೋಕಕ್ಕೆ ಖ್ಯಾತ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮ ಅವರ ಕೊಡುಗೆ ಅಪಾರ. ಜಮ್ಮುವಿನಲ್ಲಿ ಜನಿಸಿದ ಪಂಡಿತ್ ಶಿವಕುಮಾರ್ ಶರ್ಮಾ ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ಸಂತೂರ್ ನುಡಿಸುವುದನ್ನು ಕಲಿಯಲು ಪ್ರಾರಂಭಿಸಿದರು. 1955ರಲ್ಲಿ ಮೊದಲ ಬಾರಿಗೆ ಮುಂಬೈನಲ್ಲಿ ಸಾರ್ವಜನಿಕವಾಗಿ ಸಂತೂರ್ ಪ್ರದರ್ಶನ ನೀಡುವ ಮೂಲಕ ಸಂತೂರ್ ಅನ್ನು ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಶಿವಕುಮಾರ್ ಶರ್ಮಾ 1967 ರಲ್ಲಿ ಫ್ಲೌಟಿಸ್ಟ್ ಹರಿಪ್ರಸಾದ್ ಚೌರಾಸಿಯಾ ಮತ್ತು ಗಿಟಾರ್ ವಾದಕ ಬ್ರಿಜ್ ಭೂಷಣ್ ಕಾಬ್ರಾ ಅವರೊಂದಿಗೆ ಜನಪ್ರಿಯತೆ ಪಡೆದುಕೊಂಡ ಕಾನ್ಸೆಪ್ಟ್ ಆಲ್ಬಂ ಕಾಲ್ ಆಫ್ ದಿ ವ್ಯಾಲಿಯನ್ನು ನಿರ್ಮಿಸಿದರು.
ಹರಿಪ್ರಸಾದ್ ಚೌರಾಸಿಯಾ ಅವರೊಂದಿಗೆ, ಪಂಡಿತ್ ಶಿವಕುಮಾರ್ ಶರ್ಮಾ ಸಿಲ್ಸಿಲಾ, ಚಾಂದಿನಿ ಮತ್ತು ಡರ್ ಸೇರಿದಂತೆ ಹಲವಾರು ಹಿಂದಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. 1991ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಮತ್ತು 2001ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪಂಡಿತ್ ಶಿವಕುಮಾರ್ ಶರ್ಮಾ ಮುಡಿಗೇರಿಸಿಕೊಂಡಿದ್ದರು.
ಶಿವಕುಮಾರ್ ಶರ್ಮಾ ನಿಧನದಿಂದ ನಮ್ಮ ಸಾಂಸ್ಕೃತಿಕ ಜಗತ್ತು ಬಡವಾಗಿದೆ. ಅವರು ಜಾಗತಿಕ ಮಟ್ಟದಲ್ಲಿ ಸಂತೂರ್ ಅನ್ನು ಜನಪ್ರಿಯಗೊಳಿಸಿದರು. ಅವರ ಸಂಗೀತ ಮುಂದಿನ ಪೀಳಿಗೆಯನ್ನು ಆಕರ್ಷಿಸುತ್ತಲೇ ಇರುತ್ತದೆ. ಅವರೊಂದಿಗಿನ ನನ್ನ ಸಂವಹನವನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಪಂಡಿತ್ ಶಿವಕುಮಾರ್ ಶರ್ಮಾಜೀ ನಿಧನವು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಅವರು ಸಂತೂರ್ ನ ಪ್ರವರ್ತಕರಾಗಿದ್ದರು ಮತ್ತು ಅವರ ಕೊಡುಗೆ ಅಪ್ರತಿಮವಾಗಿದೆ. ನನಗೆ, ಇದು ವೈಯಕ್ತಿಕ ನಷ್ಟ ಮತ್ತು ನಾನು ಅವನನ್ನು ಕಳೆದುಕೊಳ್ಳುತ್ತೇನೆ ಎಂದು ಅಮ್ಜದ್ ಅಲಿ ಖಾನ್ ಹೇಳಿದ್ದಾರೆ.