ಬೆಳಗಾವಿ: ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತದೇಹವನ್ನು ಬೆಳಗಾವಿ ತಾಲೂಕಿನ ಸ್ವಗ್ರಾಮ ಬಡಸ ಗ್ರಾಮಕ್ಕೆ ತರಲಾಗಿದೆ.
ಸಂತೋಷ್ ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಮಾಡಿ ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದರು.
ಉಡುಪಿಯಲ್ಲಿರುವ ಖಾಸಗಿ ಲಾಡ್ಜ್ನಲ್ಲಿ ಸಂತೋಷ್ ಪಾಟೀಲ್ ಮೃತದೇಹ ಪತ್ತೆಯಾಗಿತ್ತು. ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಮೂಲಕ ಬಡಸ ಗ್ರಾಮಕ್ಕೆ ಮೃತದೇಹ ತರಲಾಗಿದೆ. ಅಲ್ಲಿದ್ದ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ ಕುಟುಂಬಸ್ಥರು, ಆರೋಪಿಗಳನ್ನು ಬಂಧಿಸಲು ಅಗತ್ಯವಾದ ದಾಖಲೆಗಳು ನಮ್ಮ ಬಳಿಯೂ ಸಾಕಷ್ಟಿವೆ. ಅವುಗಳನ್ನು ಕೊಡಲಾಗುವುದು. ಆರೋಪಿಗಳನ್ನು ಬಂಧಿಸುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲಿಯವರು ತನಿಖಾ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಮೃತದೇಹವನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ತರಲಾಗಿದೆ. ಗ್ರಾಮದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೇ ಆತ್ಮಹತ್ಯೆ ಸಂಬಂಧ ಸಚಿವ ಈಶ್ವರಪ್ಪ ಮತ್ತು ಅವರ ಇಬ್ಬರು ಆಪ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ಲದೆ, ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು, ಗುತ್ತಿಗೆದಾರರ ಸಂಘಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಮಾದರಿ, ಸಾಕ್ಷ್ಯಗಳ ಸಂಗ್ರಹ : ಎ.12 ರಂದೇ ಉಡುಪಿಗೆ ಆಗಮಿಸಿ ಮೊಕ್ಕಾಂ ಹೂಡಿದ್ದ ಮಂಗಳೂರು ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ, ಎ.೧೩ರಂದು ಬೆಳಗ್ಗೆ ೮ಗಂಟೆ ಸುಮಾರಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ಫಾರೆನ್ಸಿಕ್ ವಿಭಾಗದ ಜೊತೆ ಸೇರಿ ಹೊಟೇಲಿನ ರೂಮ್, ಮೃತದೇಹ ಹಾಗೂ ಮೊಬೈಲ್‌ಗಳ ಪಂಚನಾಮೆ ಪ್ರಕ್ರಿಯೆ ನಡೆಸಿತು. ಈ ಎಲ್ಲ ಪ್ರಕ್ರಿಯೆಯನ್ನು ಕುಟುಂಬಸ್ಥರ ಸಮ್ಮುಖದಲ್ಲೇ ನಡೆಸಲಾಯಿತು.
ಸುಮಾರು ಐದು ತಾಸುಗಳ ಕಾಲ ಈ ಪ್ರಕ್ರಿಯೆ ನಡೆಸಿದ ತಂಡವು ವಿಷದ ಬಾಟಲಿ, ಬೆರಳಚ್ಚು, ಹಲವು ಮಾದರಿ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿತು. ಸಂತೋಷ್ ಪಾಟೀಲ್ ಹಾಗೂ ಗೆಳೆಯರು ಬಂದಿದ್ದ ಹೊಟೇಲ್ ಹೊರಗಡೆ ನಿಲ್ಲಿಸಿದ ಕಾರಿನ ಪಂಚ ನಾಮೆಯನ್ನು ನಡೆಸಲಾಯಿತು. ಕಾರಿನಲ್ಲಿ ದೊರೆತ ಬೆರಳಚ್ಚು, ಐಡಿ, ಬಟ್ಟೆ ಹಾಗೂ ವಿವಿಧ ಮಾದರಿ ಹಾಗೂ ಹಲವು ಸೊತ್ತುಗಳನ್ನು ತಂಡ ವಶಪಡಿಸಿಕೊಂಡಿದೆ.
ಸ್ಥಳದಲ್ಲಿ ಮಂಗಳೂರು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಉಡುಪಿ ಎಸ್ಪಿ ಎನ್.ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ಧಲಿಂಗಪ್ಪ, ಡಿವೈಎಸ್ಪಿ ಸುಧಾಕರ್ ನಾಯಕ್, ತನಿಖಾಧಿಕಾರಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಹಾಜರಿದ್ದರು.