ಕಾರವಾರ: ‘ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ವಿಡಿಯೊವೊಂದು ಕಾರಣ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಂತೋಷ್ ಯಾರದ್ದೋ ವೈಯಕ್ತಿಕ ವಿಡಿಯೊವನ್ನು ವಿಧಾನಪರಿಷತ್ ಸದಸ್ಯರಿಗೆ ಹಾಗೂ ಸಚಿವರಿಗೆ ಕೊಟ್ಟ ಮಾಹಿತಿ ಎರಡು ಮೂರು ತಿಂಗಳ ಹಿಂದೆ ಬಂದಿತ್ತು. ಅದನ್ನು ಮುಂದೆ ಇಟ್ಟುಕೊಂಡು ವಿಧಾನಪರಿಷತ್ ಸದಸ್ಯರು, ಸಚಿವರು ಇಬ್ಬರೂ ಸೇರಿ ಮುಖ್ಯಮಂತ್ರಿ ಹಾಗೂ ಸಂತೋಷ್‌ಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಬಗ್ಗೆ ಕೇಳಿದ್ದೇನೆ. ಅದರ ಸಂತ್ಯಾಂಶವೇನೆಂದು ಗೊತ್ತಿಲ್ಲ’ ಎಂದು ಹೇಳಿದರು.
ಇದನ್ನೂ ಓದಿ: ಸಿಎಂ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ
ಇದರಲ್ಲಿ ಗುಪ್ತವಾದ ಸಂಗತಿಯೇನೋ ಅಡಗಿದೆ. ಸರ್ಕಾರವೇ ತನಿಖೆ ಮಾಡುವುದರಲ್ಲಿ ಅರ್ಥವಿಲ್ಲ’ ಎಂದು ಅಭಿಪ್ರಾಯಪಟ್ಟರು. ವಿಧಾನಪರಿಷತ್ ಸದಸ್ಯ ಮತ್ತು ಸಚಿವರು ಯಾರು ಎಂದು ಕೇಳಿದಾಗ ಶಿವಕುಮಾರ್ ಸ್ಪಷ್ಟಪಡಿಸಲಿಲ್ಲ.
ಡಿಕೆಶಿ ವಿಡಿಯೊ ಕೊಡಲಿ, ಆ ಬಗ್ಗೆ ತನಿಖೆ ನಡೆಸಲಾಗುವುದು: ಬಸವರಾಜ ಬೊಮ್ಮಾಯಿ
ಡಿಕೆಶಿ ಹೇಳಿಕೆಗೆ ರಾಯಚೂರಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿ.ಕೆ.ಶಿವಕುಮಾರ್ ವಿಡಿಯೊ ಕೊಟ್ಟರೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
‘ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಸಂತೋಷ್ ಆತ್ಮಹತ್ಯೆಗೆ ವಿಡಿಯೊ ಕಾರಣ ಎಂದು ಡಿ.ಕೆ. ಶಿವಕುಮಾರ್ ಹೇಳಿರುವಂತೆ, ಆ ವಿಡಿಯೊ ಒದಗಿಸುವ ಕೆಲಸ ಮಾಡಲಿ. ಆ ಬಗ್ಗೆಯೂ ತನಿಖೆ ನಡೆಸಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
‘ಆತ್ಮಹತ್ಯೆಗೆ ಯತ್ನಿಸಿದ್ದ ಸಂತೋಷ್ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಸದಾಶಿವ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಘಟನೆ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಲಾಗುವುದು’ ಎಂದು ತಿಳಿಸಿದರು.