ಸಂಶೋಧನಾ ವಿದ್ಯಾರ್ಥಿಯ ನೊಂದಣಿ ರದ್ದು ಪ್ರಕರಣ : ಕುಲಸಚಿವರೊಂದಿಗೆ ಎಸ್‌ಎಫ್‌ಐ ಸಭೆ

ಬಳ್ಳಾರಿ: ಸಂಶೋಧನಾ ವಿದ್ಯಾರ್ಥಿ ಎ.ಕೆ ದೊಡ್ಡಬಸವರಾಜ ರವರ ಪಿಎಚ್‌ಡಿ ನೋಂದಣಿಯನ್ನು ರದ್ದು ಮಾಡಲು ಮುಂದಾಗಿರುವ ಕ್ರಮವನ್ನು ವಾಪಸ್‌ ಪಡೆಯಬೇಕು ಎಂದು ಎಸ್‌ಎಫ್‌ಐ ನಿಯೋಗ ಇಂದು ಕನ್ನಡ ವಿವಿಯ ಕುಲಸಚಿವರನ್ನು ಭೇಟಿ ಮಾಡಿ ಮನವಿ ನೀಡಿದೆ.

ಮುಖ್ಯಮಂತ್ರಿಗಳ ಭಾಷಣಕ್ಕೆ ದೊಡ್ಡಬಸವರಾಜ ಅಡ್ಡಿಪಡಿಸಿಲ್ಲ. ಆದರೆ, ಇದನ್ನು ನೆಪವಾಗಿಟ್ಟುಕೊಂಡು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಎ.ಕೆ. ದೊಡ್ಡ ಬಸ್ಸಪ್ಪರವರ ಪಿಎಚ್.ಡಿ.ಯ ಖಾಯಂ ನೊಂದಣಿ ರದ್ದುಗೊಳಿಸುವ ಕುರಿತು ಇಲ್ಲ ಸಲ್ಲದ ಕುಂಟು ನೆಪವನ್ನು ಇಟ್ಟುಕೊಂಡು ನೋಟೀಸ್ ನೀಡಿರುವುದು ಅತ್ಯಂತ ಖಂಡನೀಯ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್‌ಎಫ್‌ಐ) ನಿಯೋಗವು ಕುಲಸಚಿವರಾದ ಡಾ: ಸುಬ್ಬಣ್ಣ ರೈ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಇತ್ತೀಚಿಗೆ ರಾಜ್ಯದ ಮುಖ್ಯಮಂತ್ರಿ ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಕಾರ್ಯಕ್ರಮ ನಿಮಿತ್ತ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸುಮಾರು 223, ಎಸ್‌ಸಿ/ಎಸ್‌ಟಿ ಸಂಶೋಧನಾ ವಿದ್ಯಾರ್ಥಿಗಳಿಗೆ  40 ತಿಂಗಳಿಂದ ವಿದ್ಯಾರ್ಥಿ ವೇತನ ಬಾರದ ಕಾರಣ ಅವರ ಗಮನಕ್ಕೆ ತರಲು ಸಂಶೋಧನಾ ವಿದ್ಯಾರ್ಥಿ ಎ.ಕೆ ದೊಡ್ಡಬಸಪ್ಪ ನೇತೃತ್ವದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸೇರಿಕೊಂಡು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಕೊಟ್ಟಿದ್ದಾರೆ. ಬೇರ‍್ಯಾವುದೇ ದುರುದ್ದೇಶವನ್ನು ಹೊಂದಿರಲಿಲ್ಲ, ಮತ್ತು ಮುಖ್ಯಮಂತ್ರಿಗಳ ಭಾಷಣಕ್ಕೆ ಅಡ್ಡಿಪಡಿಸುವ ಕಾರಣ ಇರಲಿಲ್ಲ. ಅಂದು, ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ ಬಳಿಕ ಕನ್ನಡ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂಪಾಯಿ ಬಿಡುಗಡೆ ಮಾಡಲು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅಲ್ಲದೆ ಅದರಲ್ಲಿ 8 ಕೋಟಿ ರೂಪಾಯಿ ಹಣವನ್ನು ವಿದ್ಯಾರ್ಥಿಗಳಿಗೆ ಮಾಸಿಕ ಆರ್ಥಿಕ ಸಹಾಯಕ್ಕೆ ಬಳಕೆ ಮಾಡಿಕೊಳ್ಳಲು ಸೂಚನೆ ನೀಡಿದರು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿದ್ಯಾರ್ಥಿಗಳು ಮನವಿ ನೀಡುವ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಯಾವುದೇ ನಿಯಮಗಳ ಉಲ್ಲಂಘನೆ ಆಗಿರುವುದಿಲ್ಲ. ಅಲ್ಲದೆ ವಿದ್ಯಾರ್ಥಿಗಳು ಒಂದು ವೇಳೆ ಮುಖ್ಯಮಂತ್ರಿಗಳ ಬಳಿ ತಮ್ಮ ನೋವನ್ನು (ಅಳಲು) ಹೇಳಿಕೊಳ್ಳದಿದ್ದರೆ ಇವತ್ತು ವಿಶ್ವವಿದ್ಯಾಲಯಕ್ಕೆ ದೊಡ್ಡ ಮಟ್ಟದ ಹಣ 20 ಕೋಟಿ ರೂಪಾಯಿ ಬರಲು ಸಾಧ್ಯವಿತ್ತೆ? ಉನ್ನತ ಸ್ಥಾನದಲ್ಲಿರುವ ತಾವುಗಳು ಒಂದು ಸಾರಿ ಮಾನವೀಯತೆ ದೃಷ್ಟಿಯಿಂದ ಯೋಚನೆ ಮಾಡಿ ಎಂದು ಎಸ್‌ಎಫ್‌ಐ ಖಾರವಾಗಿ ಎಚ್ಚರಿಸಿದೆ.

ವಿಶ್ವವಿದ್ಯಾಲಯದ ಅನುದಾನಕ್ಕಾಗಿ ಕುಲಪತಿಗಳಾದ ತಾವೂ ಸಹ ಎಷ್ಟು ಬಾರಿ ಸರಕಾರಕ್ಕೆ ಮನವಿ ಪತ್ರಗಳನ್ನು ಕೊಟ್ಟಿದ್ದಿರಿ, ಆದರೂ ಇಷ್ಟು ಮಟ್ಟದ ಅನುದಾನ ಬರಲು ಸಾಧ್ಯವಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರವೇ ವಿಶ್ವವಿದ್ಯಾಲಯದ ಒಳಗಡೆ ಬಂದಾಗ ಅವರಲ್ಲಿ ಮನವಿ ಮಾಡಲಾರದೆ ಮತ್ತೆ ಯಾರನ್ನು ಕೇಳಬೇಕು ಯಾರಲ್ಲಿ ಮನವಿ ಮಾಡಬೇಕು? ನೀವೇ ಹೇಳಿ ಎಂದು ತಿಳಿಸಿದರು.

ದಲಿತ ಸಮುದಾಯದ ವಿದ್ಯಾರ್ಥಿಯ ಉನ್ನತ ಶಿಕ್ಷಣವನ್ನು ರದ್ದು ಮಾಡಲು ಹೊರಟಿರುವ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನಡೆಯನ್ನು ಎಸ್‌ಎಫ್‌ಐ ರಾಜ್ಯ ಸಮಿತಿ ಖಂಡಿಸುತ್ತದೆ ಎಂದಿದ್ದಾರೆ.

ವಿದ್ಯಾರ್ಥಿಗೆ ನೀಡಲಾಗಿರುವ ನೋಟೀಸ್‌ ನಲ್ಲಿ, ಸಂಶೋಧನಾ ವಿದ್ಯಾರ್ಥಿಗಳು ಯಾವ ರೀತಿ ಭಯದ ವಾತಾವರಣದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ವಿಶ್ವವಿದ್ಯಾಲಯದಲ್ಲಿ ದೇಶ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ಮತ್ತು ಉತ್ತಮ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಂಶೋಧನೆಗಳು, ಚರ್ಚೆಗಳು ಆಗಬೇಕಾಗಿದೆ. ಆದರೆ ಅಂತಹ ಸಂಶೋಧನೆ ಮತ್ತು ಚರ್ಚೆ ಮಾಡುವ ಹಲವಾರು ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಸುಮಾರು 40 ತಿಂಗಳನಿಂದ ವಿದ್ಯಾರ್ಥಿ ವೇತನ ಬಾರದಿರುವ ಕಾರಣ ವಿದ್ಯಾರ್ಥಿಗಳು ಸಾಲ ಮಾಡಿ ಅಧ್ಯಯನ ಮಾಡುತ್ತಿದ್ದಾರೆ. ಇನ್ನು ಕೆಲ ವಿದ್ಯಾರ್ಥಿಗಳಿಗೆ ಸಾಲ ಸಿಗದ ಕಾರಣ ಸಂಶೋಧನೆ ಮಾಡುವುದನ್ನು ಅರ್ಧಕ್ಕೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಅತ್ಯಂತ ಶೋಚನೀಯ ಸ್ಥಿತಿ. ಇಂತಹ ಗಂಭೀರ ಪರಿಸ್ಥಿತಿ ಇರುವ ಸಂದರ್ಭದಲ್ಲಿ ನಾಡಿನ ಮುಖ್ಯಮಂತ್ರಿಗಳು ವಿಶ್ವವಿದ್ಯಾಲಯಕ್ಕೆ ಬಂದಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪರವಾಗಿ ದೊಡ್ಡಬಸಪ್ಪ ಅವರ ಮನವಿ ಮಾಡಿದ್ದು ಸಮಯೋಚಿತ ಹಾಗೂ ನ್ಯಾಯೋಚಿತವಾದ ನಡೆಯಾಗಿದೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವವಿದ್ಯಾಲಯದ ಸರ್ವಾಧಿಕಾರಿ ಧೋರಣೆಯನ್ನು ವಿದ್ಯಾರ್ಥಿ ಸಮುದಾಯ ಸಹಿಸುವುದಿಲ್ಲ ಎಂದಿದ್ದಾರೆ.

ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಸತಿನಿಲಯ ಪಾಲಕರು ನೀಡಿದ ದೂರಿನ ಕುರಿತು ಮಾತ್ರ ಉಲ್ಲೇಖ ಮಾಡಿದ್ದೀರಿ ಈ ವಿದ್ಯಾರ್ಥಿಗೆ ವಸತಿನಿಲಯದ ನಿಲಯ ಪಾಲಕರು ಬಹಿರಂಗವಾಗಿ ಜೀವ ಬೆದರಿಕೆ ಹಾಕಿರುವ ವಸತಿ ನಿಲಯ ಪಾಲಕರ ಮೇಲೆ ಅದೇ ಪೊಲೀಸ್ ಠಾಣೆಯಲ್ಲಿ ಪ್ರತಿದೂರ ದಾಖಲು ಆಗಿದೆ ಅದು ಕೂಡ ನಿವು ಗಮನಿಸಿರಬಹುದು.

ಈ ದೇಶದಲ್ಲಿ ಉತ್ತಮ ವಾತವಾರಣ ನಿರ್ಮಾಣ ಮಾಡಲು ಎಲ್ಲಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕೊಡುಗೆ ಇದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಕನ್ನಡ ಭಾಷೆ ಉಳಿವಿಗಾಗಿ, ಅಭಿವೃದ್ಧಿಗಾಗಿ ಇರುವಂತ ಏಕೈಕ ವಿಶ್ವವಿದ್ಯಾಲಯ ನಮ್ಮ ಹಂಪಿ ವಿ.ವಿ ಎಂದು ನಮಗೆ  ಹೆಮ್ಮೆ ಇದೆ. ಈ ವಿಶ್ವವಿದ್ಯಾಲಯದಲ್ಲಿ ನಾಡಿನ ಹೆಸರಾಂತ ಗಣ್ಯರು ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಕೊಡುಗೆ ತುಂಬಾ ಇದೆ. ಇಂತಹ ಘನತೆಯುಳ್ಳ ವಿವಿಯಲ್ಲಿ ಇಲ್ಲಸಲ್ಲದ ಕುಂಟುನೆಪಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳ ಹಕ್ಕುಗಳನ್ನು ದಮನ ಮಾಡುವುದು ನಿಲ್ಲಬೇಕಿದೆ.

ಇದು ವಿದ್ಯಾರ್ಥಿಯ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುವ ಸೇಡಿನ ಕ್ರಮವಾಗಿದ್ದು, ಇದು ಸಂವಿಧಾನ ನೀಡಿರುವ ಶಿಕ್ಷಣದ ಹಕ್ಕು ಮತ್ತು ಹೋರಾಟದ ಹಕ್ಕಿನ ಮೇಲಿನ ದಾಳಿಯಾಗಿದೆ. ಹಾಗೂ ತಳ ಸಮುದಾಯಕ್ಕೆ ಸೇರಿದ ಇವರ ಉನ್ನತ ಶಿಕ್ಷಣವನ್ನು ಕಿತ್ತುಕೊಳ್ಳುವ ಷಡ್ಯಂತ್ರ ಆಗಿದೆ. ಕೂಡಲೇ ಈ ನೋಟಿಸ್ ವಾಪಸ್ ಪಡೆಯಲು ಎಸ್ಎಫ್ಐ ಒತ್ತಾಯಿಸಿದೆ.

ಸಂಶೋಧನಾ ವಿದ್ಯಾರ್ಥಿ ದೊಡ್ಡ ಬಸ್ಸಪ್ಪ ವಿದ್ಯಾರ್ಥಿ ಮುಖಂಡನಾಗಿ ಕಾನೂನು ಮತ್ತು ಸಂವಿಧಾನಿಕ ಚೌಕ್ಕಟ್ಟಿನಲ್ಲೆ  ವಿದ್ಯಾರ್ಥಿಗಳಿಗೆ ಧಕ್ಕಬೇಕಾದ 40 ತಿಂಗಳ ಬಾಕಿ  ಫೆಲೋಶಿಪ್ ಗಾಗಿ ಕಳೆದ ಮೂರು ನಾಲ್ಕು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿತ್ತಿದ್ದು, ಯಾವ ಪ್ರಮಾದವು ಅಲ್ಲ ಈ ಬೇಡಿಕೆಗೆ ಸ್ಪಂದಿಸಬೇಕಾದ ನೀವು ಈ ರೀತಿಯಲ್ಲಿ ಆ ವಿದ್ಯಾರ್ಥಿ ಮೇಲೆ ವೈಯಕ್ತಿಕವಾಗಿ ಸೇಡು ತೀರಿಸಿಕೊಳ್ಳುವುದು ನಿಮ್ಮ ವಿಶ್ವವಿದ್ಯಾಲಯ ಮತ್ತು ತಮ್ಮ ಹುದ್ದೆಗೆ ಶೋಭೆತರುವಂತದಲ್ಲ. ಅಲ್ಲದೆ ವಿಶ್ವವಿದ್ಯಾಲಯದ ಕನ್ನಡ ಭಾಷೆ, ನುಡಿ,ನಾಟಕ ಇತ್ಯಾದಿ ಹಿತಾಸಕ್ತಿಗೆ ಯಾವುದೇ ಧಕ್ಕೆಯನ್ನುಂಟು ಮಾಡಿರುವುದಿಲ್ಲ. ಆದ್ದರಿಂದ ಈ ಆದೇಶವನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಎಸ್ಎಫ್ಐ ಮನವಿ ಮಾಡಿದೆ.

ಇಲ್ಲವಾದಲ್ಲಿ ಅನಿವಾರ್ಯವಾಗಿ ಈ ದಲಿತ ಸಂಶೋದನಾ ವಿದ್ಯಾರ್ಥಿಯ ಉನ್ನತ ಶಿಕ್ಷಣ ಮುಂದುವರಿಕೆಗಾಗಿ, ವಿದ್ಯಾರ್ಥಿಗಳು ಮತ್ತು ಜನಪರ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಈ ನೋಟಿಸ್ ವಿರುದ್ದ ರಾಜ್ಯಾದ್ಯಂತ  ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದಿದ್ದಾರೆ.

ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ನೇತೃತ್ವದಲ್ಲಿನ ನಿಯೋಗದಲ್ಲಿ ಎಸ್‌ಎಫ್‌ಐ ಮುಖಂಡ ಹಾಗು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ವಸಂತ ಕಲಾಲ್, ಎಸ್ಎಫ್ಐ ಹೊಸಪೇಟೆ ತಾಲೂಕ ಉಪಾಧ್ಯಕ್ಷ ಪವನ ಕುಮಾರ, ಅಲ್ತಾಫ್ ಇತರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *