ಅಮಿತ್ ಶಾ ಅವರು ಮಣಿಪುರದ ಬಗ್ಗೆ ಮಾತನಾಡುವಂತೆ ಬಿತ್ತಿಪತ್ರ ಪ್ರದರ್ಶಿಸಿ ಸದನದಲ್ಲಿ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದವು
ನವದೆಹಲಿ: ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಾತನಾಡುತ್ತಿರುವಾಗ ಅವರ ವಿರುದ್ಧ ವಿಪಕ್ಷಗಳು ನಡೆಸಿದ ಪ್ರತಿಭಟನೆಯ ದೃಶ್ಯ ಟಿವಿಯಲ್ಲಿ ಕಾಣದಂತೆ ಮಾಡಲು ‘ಸಂಸತ್ ಟಿವಿ’ ಪ್ರಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.ಅಮಿತ್ ಶಾ ಮಾತನಾಡುವಾಗ ವಿಪಕ್ಷಗಳು ನಡೆಸಿದ ಪ್ರತಿಭಟನೆಯ ಕಾರಣಕ್ಕೆ ಅವರು ಮುಜುಗರಕ್ಕೊಳಗಾಗುವುದನ್ನು ತಪ್ಪಿಸಲು ಸಂಸತ್ ಟಿವಿ ಹರಸಾಹಸಪಟ್ಟಿದ್ದು ಲೈವ್ ವಿಡಿಯೊದಲ್ಲಿ ದಾಖಲಾಗಿದೆ.
ಮಂಗಳವಾರ ಲೋಕಸಭೆಯಲ್ಲಿ ”ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಸರ್ಕಾರ (ತಿದ್ದುಪಡಿ) ಮಸೂದೆ-2023” ಯನ್ನು ಪರಿಚಯಿಸಲಾಯಿತು. ಈ ಮಸೂದೆಯನ್ನು ಸಮರ್ಥಿಸಿಕೊಂಡು ಮಾತನಾಡಲು ಗೃಹ ಸಚಿವ ಅಮಿತ್ ಶಾ ಪ್ರಾರಂಭಿಸಿದಾಗ ವಿಪಕ್ಷಗಳು ಮಣಿಪುರ ವಿಚಾರದ ಬಗ್ಗೆ ಮಾತನಾಡುವಂತೆ ಫೋಷಣೆ ಕೂಗಿವೆ. ಈ ವೇಳೆ ಘಟನೆ ನಡೆದಿದ್ದು ವಿಪಕ್ಷಗಳ ಪ್ರತಿಭಟನೆ ಟಿವಿ ಪ್ರೇಮ್‌ನಲ್ಲಿ ಕಾಣಿಸಿಕೊಳ್ಳದಂತೆ ಮಾಡಲು ಹರಸಾಹಸಪಟ್ಟಿದೆ.
ಇದನ್ನೂ ಓದಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ | ರಾಷ್ಟ್ರಪತಿಗೆ ವರದಿ ಸಲ್ಲಿಸಿದ ದೆಹಲಿ ಮಹಿಳಾ ಆಯೋಗ
ವಿಪಕ್ಷಗಳು ಕೇವಲ ಘೋಷಣೆ ಕೂಗಿದ್ದಲ್ಲದೆ, ಸಂಸತ್ ಟಿವಿಯ ಪ್ರೇಮ್‌ನಲ್ಲಿ ಕಾಣಿಸುವಂತೆ ”ಇಂಡಿಯಾ ಫಾರ್ ಮಣಿಪುರ್” ಎಂಬ ಬಿತ್ತಪತ್ರವನ್ನು ಪ್ರದರ್ಶಿಸಿದ್ದಾರೆ. ಅಷ್ಟಕ್ಕೆ ಸಂಸತ್ ಟಿವಿ ಅಲ್ಲಿನ ಆಂಗಲ್ ಅನ್ನು ಬದಲಿಸಿ ಬೇರೆ ಆಂಗಲ್‌ನಿಂದ ಸಂಸತ್ತಿನ ದೃಶ್ಯವನ್ನು ಬಿತ್ತರಿಸಿದೆ. ಬೇರೆ ಕಡೆಯ ಕ್ಯಾಮೆರಾ ಮುಂದೆ ಕೂಡಾ ವಿಪಕ್ಷಗಳು ತಮ್ಮ ಬಿತ್ತಪತ್ರವನ್ನು ಪ್ರದರ್ಶಿಸಿದಾಗ, ಅಲ್ಲಿನ ದೃಶ್ಯವನ್ನು ನಿಲ್ಲಿಸಿ ಬೇರೆ ಕಡೆಯ ದೃಶ್ಯವನ್ನು ಪ್ರಸಾರ ಮಾಡಿದೆ. ಅಲ್ಲಿಯೂ ಬಿತ್ತಿಪತ್ರ ಪ್ರತ್ಯಕ್ಷವಾಗುತ್ತಿದ್ದಂತೆ ಸಂಸದ್ ಟಿವಿ ಮತ್ತೆ ಬೇರೆ ಕಡೆಯ ಕ್ಯಾಮೆರಾ ಆಂಗಲ್‌ನ ದೃಶ್ಯವನ್ನು ಪ್ರಸಾರ ಮಾಡಿದೆ.
ಎಷ್ಟೆ ಪ್ರಯತ್ನ ಪಟ್ಟರೂ ಪಟ್ಟು ಬಿಡದ ವಿಪಕ್ಷಗಳು ಸ್ಪೀಕರ್ ಕಡೆಗಿದ್ದ ಕ್ಯಾಮರಾಗೂ ಬಿತ್ತಿಪತ್ರ ಹಿಡಿದು ಪ್ರತಿಭಟಿಸಿವೆ. ಒಂದು ಹಂತಕ್ಕೆ ಸಂಸತ್ತಿನ ಬಾಗಶಃ ಎಲ್ಲಾ ಕ್ಯಾಮೆರಾಗಳ ಮುಂದೆ ಬಿತ್ತಿ ಪತ್ರವನ್ನು ಹಿಡಿದಿದ್ದು, ಕೊನೆಗೆ ಸಂಸತ್ ಟಿವಿ ಆಡಳಿತ ಪಕ್ಷದ ಸಂಸದರ ಕಡೆಗಿದ್ದ ಕ್ಯಾಮರದ ದೃಶ್ಯಗಳನ್ನು ಮಾತ್ರವೆ ಪ್ರಸಾರ ಮಾಡಿದೆ. ಈ ಮೂಲಕ ವಿಪಕ್ಷಗಳು ಗೃಹ ಮಂತ್ರಿಯ ವಿರುದ್ಧ ನಡೆಸುವ ಪ್ರತಿಭಟನೆಯನ್ನು ಸರಿಯಾಗಿ ಬಿತ್ತರಿಸದೆ ಅವರನ್ನು ಮುಜುಗರದಿಂದ ಪಾರು ಮಾಡುವ ಎಲ್ಲಾ ಪ್ರಯತ್ನವನ್ನು ಮಾಡಿದ್ದು ವ್ಯಂಗ್ಯಕ್ಕೀಡಾಗಿದೆ.
01.08.2023ರ ಮಧ್ಯಾಹ್ನ 02:26 (14:26) ರಿಂದ ಗೃಹ ಸಚಿವ ಮಾತನಾಡಲು ಪ್ರಾರಂಭಿಸಿದ್ದು, ಮಧ್ಯಾಹ್ನ 02:29 (14:29) ವರೆಗೆ ಮಾತನಾಡಿದ್ದಾರೆ. ಒಟ್ಟು ಮೂರು ನಿಮಿಷಗಳ ಅವರ ಮಾತಿನ ವೇಳೆ ಸಂಸತ್ ಟಿವಿ ವಿಪಕ್ಷಗಳ ಪ್ರತಿಭಟನೆಯ ದೃಶ್ಯಗಳನ್ನು ಮರೆಮಾಚಲು ಪ್ರಯತ್ನಿಸಿದೆ. ವಿಡಿಯೊದನ್ನು ಕೆಳಗೆ ಗಮನಿಸಬಹುದು.
ಅಮಿತ್ ಶಾ ಮಾತನಾಡುವಾಗ ವಿಪಕ್ಷಗಳು ನಡೆಸಿದ ಪ್ರತಿಭಟನೆಯ ಕಾರಣಕ್ಕೆ ಅವರು ಮುಜುಗರಕ್ಕೊಳಗಾಗುವುದನ್ನು ತಪ್ಪಿಸಲು ಸಂಸತ್ ಟಿವಿ ಹರಸಾಹಸಪಟ್ಟಿದ್ದು ಲೈವ್ ವಿಡಿಯೊದಲ್ಲಿ ದಾಖಲಾಗಿದೆ.#IndiaForManipur #SamsadTV pic.twitter.com/udgMuK52IP
— Baapu Ammembala (@BaapuAmmembala) August 1, 2023
ಇದನ್ನೂ ಓದಿ: ಹರಿಯಾಣ | ಮಸೀದಿಗೆ ಬೆಂಕಿ ಹಚ್ಚಿ, ಇಮಾಂ ಅನ್ನು ಗುಂಡಿಕ್ಕಿ ಕೊಂದ ಹಿಂದುತ್ವ ಗುಂಪು
ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ (ತಿದ್ದುಪಡಿ) ಮಸೂದೆ-2023 ಅನ್ನು ಮಂಗಳವಾರ ಲೋಕಸಭೆಯಲ್ಲಿ ಗದ್ದಲದ ನಡುವೆ ಮಂಡಿಸಲಾಗಿದೆ. ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ ಕಾಯಿದೆ-1991 ಅನ್ನು ತಿದ್ದುಪಡಿ ಮಾಡುವುದು ಈ ಮಸೂದೆಯ ಉದ್ದೇಶವಾಗಿದೆ.
ಹೊಸ ಮಸೂದೆಯು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕಾರ್ಯಗಳು, ನಿಯಮಗಳು ಮತ್ತು ಅಧಿಕಾರಿಗಳ ಸೇವೆಯ ಇತರ ಷರತ್ತುಗಳನ್ನು ಒಳಗೊಂಡಂತೆ ನಿಯಮಗಳನ್ನು ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಈ ಸಂಬಂಧ ಒಕ್ಕೂಟ ಸರ್ಕಾರವು ಈ ವರ್ಷದ ಮೇನಲ್ಲಿ ಸುಗ್ರೀವಾಜ್ಞೆ ತಂದಿತ್ತು.
ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಮಸೂದೆಯನ್ನು ಮಂಡಿಸಿದರು. ಮಸೂದೆಯನ್ನು ಮಂಡಿಸುವುದನ್ನು ವಿರೋಧಿಸಿದ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ, ಈ ಶಾಸನವು ಸಂವಿಧಾನಕ್ಕೆ ವಿರುದ್ಧವಾಗಿದೆ ಮತ್ತು ರಾಷ್ಟ್ರೀಯ ರಾಜಧಾನಿಯಲ್ಲಿ ಅಧಿಕಾರಶಾಹಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ತೀರ್ಪನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದರು. ಆರ್‌ಎಸ್‌ಪಿಯ ಎನ್.ಕೆ. ಪ್ರೇಮಚಂದ್ರನ್ ಕೂಡ ಮಸೂದೆಯನ್ನು ಫೆಡರಲಿಸಂ ತತ್ವಕ್ಕೆ ವಿರುದ್ಧವಾಗಿದೆ ಎಂದು ವಿರೋಧಿಸಿದರು.
ಟಿಎಂಸಿಯ ಸೌಗತ ರಾಯ್, ಎಐಎಂಐಎಂನ ಅಸಾದುದ್ದೀನ್ ಓವೈಸಿ, ಡಿಎಂಕೆಯ ಟಿಆರ್ ಬಾಲು ಹಾಗೂ ಕಾಂಗ್ರೆಸ್ ಸದಸ್ಯರಾದ ಗೌರವ್ ಗೊಗೊಯ್, ಶಶಿ ತರೂರ್ ಕೂಡ ಮಸೂದೆ ಮಂಡನೆಯನ್ನು ವಿರೋಧಿಸಿದರು.
ವಿರೋಧ ಪಕ್ಷಗಳ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಅಂತಹ ಕಾನೂನನ್ನು ಅಂಗೀಕರಿಸಲು ಸಂಸತ್ತಿಗೆ ಸಂಪೂರ್ಣ ಸಾಮರ್ಥ್ಯವಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ದೆಹಲಿಗೆ ಸಂಬಂಧಿಸಿದ ವಿಷಯವನ್ನು ಕಾನೂನು ಮಾಡಲು ಭಾರತೀಯ ಸಂವಿಧಾನವು ಸಂಸತ್ತಿಗೆ ಸಂಪೂರ್ಣ ಅಧಿಕಾರವನ್ನು ನೀಡಿದೆ. ದೆಹಲಿಗೆ ಸಂಬಂಧಿಸಿದಂತೆ ಸಂಸತ್ತು ಯಾವುದೇ ಕಾನೂನನ್ನು ತರಬಹುದು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಮಸೂದೆ ಮೇಲಿನ ಆಕ್ಷೇಪಗಳು ರಾಜಕೀಯ ಎಂದು ಅವರು ಹೇಳಿದರು.
ಘಟನೆಯ ಸಂಪೂರ್ಣ ವಿಡಿಯೊ ನೋಡಿ: