ಬೆಂಗಳೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆ ಸೌಹಾರ್ದ ಕರ್ನಾಟಕ ಜಯನಗರ ವಲಯ ಆಯೋಜಿಸಿದ್ದ ‘ಸೌಹಾರ್ದ ಸಂಕ್ರಾಂತಿ’ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಬೇಧಭಾವ ಇಲ್ಲದೆ ಜನರು ಸೇರಿ ಒಟ್ಟಿಗೇ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಕಾರ್ಯಕ್ರಮವು ನಗರದ ಬನಶಂಕರಿ ವಾರ್ಡ್‌ನ ಯಾರಬ್ ನಗರದಲ್ಲಿ ಸೋಮವಾರ ನಡೆದಿದ್ದು, ಜನರು ಎಳ್ಳು ಬೆಲ್ಲ ಹಂಚಿ ಸೌಹಾರ್ದ ಸಂಕ್ರಾಂತಿ ಆಚರಿಸಿದರು.
ಸೌಹಾರ್ದ ಕರ್ನಾಟಕದ ಕೆ.ಎಸ್. ಲಕ್ಷ್ಮಿ ಅವರು, ಭಾವೈಕ್ಯ ಭಾರತದ ಸಂದೇಶ ಸಾರುವ ”ಎಲೆಗಳು ನೂರಾರು” ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೌಹಾರ್ದ ಕರ್ನಾಟಕ ಬೆಂಗಳೂರು ದಕ್ಷಿಣ ಸಂಚಾಲಕಿ ವಿಮಲಾ ಕೆ.ಎಸ್. ಅವರು ಮಾತನಾಡಿ, ಸಂಕ್ರಾಂತಿಯ ಮಹತ್ವ, ಸೌಹಾರ್ದ ಬದುಕಿಗೊಂದು ಉತ್ತಮ ಉದಾಹರಣೆಯಾಗಿರುವ ಯಾರಬ್ ನಗರ ಎಂದಿಗೂ ಹೀಗೇ ಕೂಡಿಬಾಳುವ ಜನರ ತಾಣವಾಗಿ ಬಹುತ್ವ ಭಾರತದ ಸಾಕ್ಷಿಯಾಗಿ ಇರಲೆಂದು ಹಾರೈಸಿ, ಹಬ್ಬದ ಶುಭಾಶಯ ಕೋರಿದರು.
ಇದನ್ನೂ ಓದಿ: ಎನ್‌ಡಿಟಿವಿ ತೊರೆದ ವರ್ಷದ ನಂತರ ‘ಡಿಕೋಡರ್’ ಮೂಲಕ ಹಿಂತಿರುಗಿದ ಪ್ರಣಯ್ ರಾಯ್!
“ಜನರ ಕೂಡಿ ಬಾಳುವ ಸಂಸ್ಕ್ರತಿಗೆ ಧಕ್ಕೆ ಆಗುತ್ತಿರುವಾಗ, ಗಾಂಧಿಯನ್ನು ಕೊಂದ ಗೋಡ್ಸೆ ಸಿದ್ದಾಂತ ಮೆರೆಯುತ್ತಿರುವಾಗ ನಾವು ಮನುಷ್ಯರಾಗಿ ಬಾಳುವ ಅಗತ್ಯವನ್ನು ಒತ್ತಿ ಹೇಳಬೇಕು. ಅದನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಜನವರಿ 30 ಗಾಂಧಿ ಹತ್ಯೆಯಾದ ದಿನ ಹತ್ಯಾಕೋರತನಕ್ಕೆ ಬದಲು ಮನುಷ್ಯರಾಗಿ ಬದುಕುವ ನೆಲೆಯಲ್ಲಿ ರಚಿಸಲಾಗುವ ಮಾನವ ಸರಪಳಿ ಕಾರ್ಯಕ್ರಮ ದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಿ” ಎಂದು ವಿಮಲಾ ಅವರು ಕರೆ ನೀಡಿದರು.
ಟಿ. ಸುರೇಂದ್ರ ರಾವ್ ಮಾತನಾಡಿ, “ನಮ್ಮ ನೆಲದ ಸಂಸ್ಕೃತಿಯ ಭಾಗವಾಗಿರುವ ಸೌಹಾರ್ದತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಗಾಂಧಿ ಪ್ರತಿಪಾದಿಸಿದ ಈಶ್ವರ ಅಲ್ಲಾ ತೇರೇ ನಾಮ್ ಎಂಬ ಸರ್ವಧರ್ಮ ಸಮನ್ವಯ ತೆಯನ್ನು ಸಾಧಿಸೋಣ” ಎಂದರು.
ಇದನ್ನೂ ಓದಿ: 2024ರ ಚುನಾವಣೆ ಏಕಾಂಗಿ ಹೋರಾಟ | ಇಂಡಿಯಾ ಅಥವಾ ಎನ್‌ಡಿಎ ಜೊತೆ ಮೈತ್ರಿ ಇಲ್ಲ – ಮಾಯಾವತಿ
ಸಿ.ಜಿ. ಶ್ರೀಪತಿ ಮಾತನಾಡಿ ಸುಗ್ಗಿಯ ಸಂಕ್ರಾಂತಿಯು ಎಲ್ಲರಲ್ಲಿ ಸಮನ್ವಯತೆ ತರಲೆಂದು ಹಾರೈಸಿದರು. ಶ್ರಮ ಜೀವಿಗಳು, ತಮ್ಮ ದುಡಿಮೆಯ ಆಧಾರದಲ್ಲಿಯೇ ಬದುಕು ನಡೆಸುವವರು, ಬೆವರಿನ ಬೆಲೆ ಅರಿತವರ ಮಧ್ಯೆ ಜಾತಿ ಧರ್ಮ ಪಂಥಗಳ ಬೇಧ ಎಂದಿಗೂ ಕಾಡುವುದಿಲ್ಲ ಎಂದು ಅವರು ಹೇಳಿದರು.
ಆಟೋ ಚಾಲಕರ ಸಂಘದ ಮುಂದಾಳು ಬಸವರಾಜ್ ಅವರು, ಜನರ ಕಷ್ಟ ಕಾರ್ಪಣ್ಯಗಳ ನಿವಾರಣೆಗೆ ಸಂಘಟಿತ ಹೋರಾಟದ ಅಗತ್ಯವನ್ನು ಹೇಳುತ್ತಾ, ಬೆಲೆ ಏರಿಕೆ, ನಿರುದ್ಯೋಗ, ಬಡತನಗಳನ್ನು ಹೇರುತ್ತಿರುವ ಅಧಿಕಾರ ವರ್ಗಕ್ಕೆ ಎಚ್ಚರಿಸಲು ಕಾರ್ಮಿಕ ಸಂಘಟನೆ ನಡೆಸುತ್ತಿರುವ ಸಹಿ ಸಂಗ್ರಹ ಚಳವಳಿಯಲ್ಲಿ ಭಾಗಿಗಳಾಗಲು ಕೋರಿದರು.
ಕಾರ್ಯಕ್ರಮದಲ್ಲಿ ಕೀರ್ತನಾ ಅವರು ಜಾನಪದ ಗೀತೆ ಹಾಡಿದರು. ಕೆ. ಶ್ರೀಮತಿ ಕಾರ್ಯಕ್ರಮ ನಿರೂಪಿಸಿದರು. ಭಾರತದ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವ ಹಾಡಿನ ಮೂಲಕ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.
ವಿಡಿಯೊ ನೋಡಿ: ಸುಗ್ಗಿ ಹಬ್ಬ. ಸಂಕ್ರಾಂತಿಯ ಸೊಬಗು..ಜನಪದ ಹಾಡು… Janashakthi Media