2017 ರಡಿಸೆಂಬರ್ 6 ರಂದು ಕಾಣೆಯಾಗಿ, 8 ರಂದು ನೀರಿನ ಕೊಳದಲ್ಲಿ ಶವವಾಗಿ ಪತ್ತೆಯಾದ ಪರೇಶ ಮೇಸ್ತಾ ಪ್ರಕರಣದಲ್ಲಿ ಕೆಂದ್ರ ತನಿಖಾ ಸಂಸ್ಥೆ-ಸಿಬಿಐ ವರದಿ ಹಲವಾರು ಮುಚ್ಚಿಟ್ಟ ಧಾರುಣ ಸತ್ಯಗಳನ್ನು ತೆರೆದಿಟ್ಟಿದೆ. ಈ ಯುವಕನಿಗೆ ಚಿತ್ರಹಿಂಸೆ ನೀಡಿ ಕಗ್ಗೊಲೆ ಮಾಡಲಾಗಿದೆಯೆಂಬ ಆರೋಪದ ಅಂಶಗಳ ಬಗ್ಗೆ ಆಳವಾದ ತನಿಖೆ ನಡೆಸಿದ ಸಿ.ಬಿ.ಐ. ಅಂತಹ ಯಾವುದೇ ಕುರುಹುಗಳು ಇಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಈ ಆರೋಪಗಳನ್ನು ಹಬ್ಬಿಸಿ ವಾತಾವರಣವನ್ನು ಉದ್ವಿಗ್ನಗೊಳಿಸಿ ಹಲವಾರು ದಿನಗಳು ವ್ಯಾಪಕ ಕೋಮು ಗಲಭೆ, ಹಿಂಸಾತ್ಮಕ ಧಾಳಿಗಳಿಗೆ ಕಾರಣವಾಗಿದ್ದ ಘಟನೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆದ ಈ ತನಿಖಾ ವರದಿ ಆರ್.ಎಸ್.ಎಸ್. ಪರಿವಾರ ಮತ್ತು ಬಿ.ಜೆ.ಪಿ. ಪಕ್ಷಕ್ಕೆ ಕಪಾಳ ಮೋಕ್ಷ ಮಾಡಿದೆ.
ಹೊನ್ನಾವರದ ಬಂದರು ಪ್ರದೇಶದಲ್ಲಿನ ರಸ್ತೆಯ ನೆಪದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಗೊಂಡ ಸಂದರ್ಭದಲ್ಲಿಯೇ ಮೀನುಗಾರ ಕುಟುಂಬಕ್ಕೆ ಸೇರಿದ 18 ವರ್ಷಗಳ ಪರೇಶ್ ಕಾಣೆಯಾಗಿದ್ದ. ‘ಹಿಂದೂ ಕಾರ್ಯಕರ್ತನಾಗಿದ್ದ ಆತನನ್ನು ‘ಜಿಹಾದಿ’ ಗಳು ಅಪಹರಣ ಮಾಡಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ’ ಎಂಬ ವದಂತಿಯನ್ನು ಹಾಗೂ ಪುಂಖಾನುಪುಂಖ ಹಸಿ ಸುಳ್ಳುಗಳನ್ನು ‘ಹಿಂದುತ್ವವಾದಿ’ ಸಂಘಟನೆಗಳು ಹಬ್ಬಿಸಿದ್ದರು. ಹೊನ್ನಾವರದ ಶೆಟ್ಟಿಕೇರಿ ಪ್ರದೇಶದ ಕೌನ್ಸಿಲರ್ ಅಜಾದ್ ಅಣ್ಣಿಗೇರಿಯವರ ಹೋಟೆಲ್ ಮುಂದಿನಿಂದಲೇ ಪರೇಶನನ್ನು ಅಪಹರಿಸಲಾಗಿದೆ ಎಂದೂ, ಅದರಲ್ಲಿ ಅವರದ್ದೇ ಪಾತ್ರವಿದೆ ಎಂದೂ ದೂರಲಾಗಿತ್ತು.ಅಂದಿನ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ ಮತ್ತು ಬಿಜೆಪಿ ನಾಯಕರು ಇದಕ್ಕೆ ಮುಸ್ಲಿಂರನ್ನು ಹೊಣೆ ಮಾಡಿ ತ್ವೇಷದ ಮಾತುಗಳನ್ನಾಡಿ ಪರಿಸ್ಥಿತಿಯನ್ನು ಮತ್ತಷ್ಟು ಉದ್ರಿಕ್ತಗೊಳಿಸಿ ಜನರನ್ನು ಮತೀಯ ಆಧಾರದಲ್ಲಿ ಎತ್ತಿಕಟ್ಟಿದ್ದರು. ಸಾಮಾಜಿಕ ಮಾಧ್ಯಮದ ಮೂಲಕ ವಿದ್ವೇಷದ ವಿವಾದಕ್ಕೆ ತಿದಿಯೂದಲಾಗಿತ್ತು.
ಶೋಭಾ ಕರಂದ್ಲಾಜೆಯವರು’ ಇದು ಐ.ಎಸ್.ಐ.ಎಸ್. ನ ರೀತಿಯಲ್ಲಿ ಜಿಹಾದಿಗಳು ನಡೆಸಿದ ಕಗ್ಗೊಲೆ’ ಎಂದು, ರಾಜ್ಯ ಸರ್ಕಾರ ಕೊಲೆಗಾರರಿಗೆ ರಕ್ಷಣೆ ಮಾಡುತ್ತಿದೆ ಎಂದೂ ಆರೋಪಿಸಿ ಟ್ವಿಟ್ಟರ್ ಹಾಗೂ ಮಾಧ್ಯಮಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಉರಿವ ಬೆಂಕಿಗೆ ತಿದಿಯೂದುವ, ಕಪೋಲಕಲ್ಪಿತ ವದಂತಿಗಳಿಂದ ಎಲ್ಲೆಡೆ ಪ್ರತಿಭಟನೆಗಳು, ಧಾಳಿಗಳು, ಬೆಂಕಿ ಹಚ್ಚುವ, ಹಿಂಸಾತ್ಮಕ ಘಟನೆಗಳು ನಡೆದಿದ್ದವು. ಅನಂತಕುಮಾರ ಹೆಗಡೆಯಂತಹವರು ನಿರಂತರವಾಗಿ ಅಲ್ಪಸಂಖ್ಯಾತ ಮುಸ್ಲಿಂರ ವಿರುದ್ದ ದ್ವೇಷ ಕಾರುವ ಭಾಷಣಗಳನ್ನು ಮಾಡುತ್ತಾ, ವಿವಾದ ವಿದ್ವೇಷದ ಕಿಡಿ ಹೊತ್ತಿಸುತ್ತಲೇ ಇದ್ದ ಸರಣಿ ಸನ್ನಿವೇಶವನ್ನು ಗಮನಿಸಬೇಕು.ಇಂತಹ ಆಧಾರ ರಹಿತ, ಕಪೋಲಪಲ್ಪಿತ ಆರೋಪ ಧಾಳಿಗಳ ಮೂಲಕ ಶಾಂತಿ, ಸೌಹಾರ್ದತೆಯನ್ನು ಕದಡಿ, ದ್ವೇಷ, ವಿಭಜನೆ ಸೃಷ್ಟಿಸುವ ಮೂಲಕ ಬಿಜೆಪಿ ಮತ್ತು ಸಂಘಪರಿವಾರ ನಿಕಟದಲ್ಲಿಯೇ ಇದ್ದ ಚುನಾವಣೆಯಲ್ಲಿ ಉತ್ತರ ಕನ್ನಡ, ವಿಶೇಷವಾಗಿ ಕರಾವಳಿಯಲ್ಲಿ ಮೀನುಗಾರರ ನಡುವೆ ಮತ್ತು ರಾಜ್ಯದಾದ್ಯಂತ ಮತೀಯ ಕ್ರೋಢೀಕರಣದ ರಾಜಕೀಯ ದುರ್ಲಾಭ ಪಡೆಯಲು ಮುಂದಾಗಿತ್ತು. ಕಾಂಗ್ರೆಸ್ ಆಡಳಿತದ 2013 ರಿಂದ 2017 ರ ಅವಧಿಯಲ್ಲೇ ನಡೆದ ಕೋಮು ಗಲಭೆಗಳಲ್ಲಿ 11 ಹಿಂದುಗಳು, 6 ಮುಸ್ಲಿಮರು ಒಟ್ಟು 17 ಜನ ಪ್ರಾಣ ಕಳೆದುಕೊಂಡಿದ್ದರು. ಈ ದುರ್ಘಟನೆಗಳು ಬಹುತೇಕ ಕರಾವಳಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಡೆದವೆಂಬುದು ಗಮನಾರ್ಹ.
ಪರೇಶ ಮೇಸ್ತಾ ಪ್ರಕರಣದಲ್ಲಿ ಆತ ನೀರಿನಲ್ಲಿ ಮುಳುಗಿ ಸತ್ತಿದ್ದಾನೆ ಎಂದು ಪೊಲೀಸರು ಅಂದು ಹೇಳಿದ್ದನ್ನು ಬಿಜೆಪಿ ನಾಯಕರು, ಪರೇಶನ ತಂದೆ ಒಪ್ಪಿರಲಿಲ್ಲ. ‘ಮಗನನ್ನು ಚಿತ್ರಹಿಂಸೆ ಮಾಡಿ ಕೊಂದಿದ್ದಾರೆ ಎಂದು ನಂಬುವುದಾಗಿ, ಸರಕಾರ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದೂ’ ತಂದೆ ಹೇಳಿದ ಹೇಳಿಕೆಯ ಹಿಂದೆ ಸಂಘಪರಿವಾರದ ನಾಯಕರ ಒತ್ತಡ ಇರುವುದನ್ನು ಆರೋಪಿಸಲಾಗಿತ್ತು. ವಿವಾದ ವಿಪರೀತಕ್ಕೆ ಹೋದಾಗ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯನವರು ಬಿಜೆಪಿಯವರ ಆಗ್ರಹದಂತೆ ಸಿ.ಬಿ.ಐ. ತನಿಖೆಗೆ ಒಪ್ಪಿಸಿದ್ದರು. ಆಗ ಮತ್ತು ಈಗಲೂ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಬಿಜೆಪಿ ಸರಕಾರವೇ ಅಧಿಕಾರದಲ್ಲಿದೆ. ಸಿಬಿಐ ಅದರ ಅಡಿಯಲ್ಲೇ ಕೆಲಸ ಮಾಡುತ್ತಿದೆ. ಅಂದಿನಿಂದ ಸುಮಾರು ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರಕರಣದ ಎಲ್ಲಾ ಅಂಶಗಳನ್ನು ಆಳವಾಗಿ ತನಿಖೆ ಮಾಡಿದೆ. `ಎಫ್.ಐ.ಆರ್.ನಲ್ಲಿ ಆರೋಪಿಸಿದಂತೆ ದೇಹದ ಮೇಲೆ ಯಾವುದೇ ಗಾಯಗಳು ಅಥವಾ ಹೊಡೆದ ಗುರುತುಗಳು ಇಲ್ಲ. ಹೀಗಾಗಿ ಹಿಂಸಿಸಿ ಕೊಲ್ಲಲಾಗಿದೆನ್ನಲು ಕುರುಹುಗಳಿಲ್ಲ’ ಎಂದು ಸಿಬಿಐ ಹೇಳಿದೆ. ಆ ವರದಿಯ ಪೂರ್ಣ ಪಾಠ ಸಾರ್ವಜನಿಕರಿಗೆ ಇನ್ನು ಲಭ್ಯವಾಗಬೇಕಿದೆ. ಆದರೆ ಬಿಜೆಪಿ ಪಡೆದಿರಲು ತಡೆಗಳೇನೂ ಇಲ್ಲ. ಸಿಬಿಐ ನ ವರದಿಯನ್ನು ತಿರಸ್ಕರಿಸುವುದಾಗಿ, ಅಂದೇ ಸಾಕ್ಷ್ಯಗಳನ್ಮು ನಾಶ ಪಡಿಸಲಾಗಿದೆ ಎಂದೂ ಬಿಜೆಪಿಯ ನಾಯಕರು ಮರು ಆರೋಪ ಮಾಡಿದ್ದಾರೆ. ಮಾತ್ರವಲ್ಲ, ಕೇಂದ್ರ ಸರಕಾರ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ರವರು ಸಿಬಿಐ ವರದಿಯನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದ್ದಾರೆ. ಸಿಬಿಐ ಬಹಿರಂಗ ಪಡಿಸಿದ ಸತ್ಯದಿಂದ ಸಂಘ ಪರಿವಾರ ತೀವ್ರ ಮುಖಭಂಗಕ್ಕೆ ಒಳಗಾಗಿದೆ ಮಾತ್ರವಲ್ಲ ಇವರ ಅಧಿಕಾರದ ಗದ್ದುಗೆಗೆ ಇಂತಹ ಎಷ್ಟು ಜನರ ರಕ್ತ ಮೆತ್ತಿದೆ ಎನ್ನುವಂತಹ ಪ್ರಶ್ನೆಯನ್ನೂ ಹುಟ್ಟು ಹಾಕಿದೆ. ಈಗಲೂ ಪರೇಶನ ಸಾವು ಹೇಗೆ ಸಂಭವಿಸಿತು ಎನ್ನುವುದರತ್ತ ಗಮನ ಹರಿಸಿ ನಿಜ ಸತ್ಯಗಳನ್ನು ಬಹಿರಂಗ ಪಡಿಸಬೇಕಾದ ಅಗತ್ಯವಿದೆ. ಚುನಾವಣಾ ದುರ್ಲಾಭದ ದುಷ್ಟ ಹಿತಾಸಕ್ತಿಗಳು ಇದಕ್ಕೆ ಅಂಟಿರುವುದರಿಂದ ಅಡಗಿಸಲಾದ ಅಂತಹ ಧಾರುಣ ಸತ್ಯಗಳು ಅನಾವರಣಗೊಳ್ಳುವುದು ಅತ್ಯಗತ್ಯ.
ಈ ಪ್ರಕರಣ ಮಾತ್ರವಲ್ಲ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕದಡುವ ಪ್ರಸಂಗದಲ್ಲಿ ಅದನ್ನು ತಿಳಿಗೊಳಿಸುವ ಪ್ರಯತ್ನದ ಬದಲು ಅದನ್ನು ಮತ್ತಷ್ಟು ಹದಗೆಡಿಸುವ, ಕದಡಿದ ನೀರಿನಲ್ಲಿ ಮೀನು ಹಿಡಿಯುವ ಕೃತ್ಯಗಳೇ ಅಧಿಕ. ಈ ಹಿಂದೆ 2017 ಡಿಸೆಂಬ್ 14ರಂದು ಶೋಬಾ ಕರಂದ್ಲಾಜೆ ಮಾಡಿದ್ದ ಟ್ವೀಟ್ ಆಧರಿಸಿ ಪೊಲೀಸರು ಸ್ವಯಂಪ್ರೇರಣೆಯಿAದ ಸೆಕ್ಷನ್ 153, 153 ಎ, (ಗಲಭೆ ಸೃಷ್ಟಿಸಲೆಂದೇ ಪ್ರಚೋದನೆ), 503 (2)-(ಶತೃತ್ವ, ದ್ವೇಷ ಸೃಷ್ಟಿಸಲು, ವಿವಿಧ ವರ್ಗಗಳ ನಡುವೆ ಅಪನಂಬಿಕೆ ಬೆಳೆಸಲು ಯತ್ನ) ರನ್ವಯ ಕ್ರಿಮಿನಲ್‌ಮೊದ್ದಮೆಯನ್ನು ಹೂಡಿದ್ದರು. ಹೊನ್ನಾವರದ ಮೊಗಡುಹಳ್ಳಿಯಲ್ಲಿ ಯುವನೊಬ್ಬನ ಒಡ್ಡಿದ ಬೆದರಿಕೆಯಿಂದ ಹೆದರಿ 9ನೆಯ ತಗತಿಯಲ್ಲಿ ಓದುತ್ತಿದ್ದ ಬಾಲಕಿ ಮೈಮೇಲೆ ತಾನೇ ಗಾಯ ಮಾಡಿಕೊಂಡ ಘಟನೆಯನ್ನು ಜಿಹಾದಿಗಳು ರೇಪ್ ಮಾಡಲು ಯತ್ನಿಸಿ ಗಾಯಗಳನ್ನು ಮಾಡಿದ್ದಾರೆ ಎಂದು ಕರಂದ್ಲಾಜೆ ಸುದ್ದಿ ಮಾಡಿದ್ದರು. ವೈದ್ಯರಿಗೆ ನಿಜ ಸಂಗತಿಯನ್ನು ಬಾಲಕಿಯು ಹೇಳಿದ್ದನ್ನು ತಿರುಚಿ ಪೊಲೀಸರು ಅವಳ ಬಾಯಿ ಮುಚ್ಚಿಸಿದ್ದಾರೆ ಎಂದೂ ಹೇಳಿದ್ದರು. ಕರಂದ್ಲಾಜೆಯವರನ್ಮೂ ಒಳಗೊಂಡು ಇಂತಹ ತಿರುಚುವಿಕೆ, ದ್ವೇಷ ಹುಟ್ಟಿಸುವ ನಾಯಕರ ಸಂಖ್ಯೆಗೇನೂ ಕಡಿಮೆ ಇಲ್ಲ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಕಾನೂನು ಜಾರಿಗೊಳಿಸಿ ದಾಖಲಿಸಿದ ಮೊಕದ್ದಮೆಗಳನ್ನು ಬೊಮ್ಮಾಯಿ ಸರಕಾರ ಹಿಂಪಡೆದಿರುವುದು ಏನನ್ನು ಸೂಚಿಸುತ್ತದೆ.
ಈಗಲೂ ಪರೇಶ ಪ್ರಕರಣದ ಸಂಗತಿಗಳನ್ನು ತಿರುಚಿ ಗಲಭೆಗಳನ್ನು ಸೃಷ್ಟಿಸಲು, ಶಾಂತಿ, ಸೌಹಾರ್ದತೆ ಕದಡಲು ಕಾರಣರಾದ ಎಲ್ಲರ ಮೇಲೆ ಕಠಿಣ ಕಾನೂನು ಕ್ರಮವನ್ನು ಜರುಗಿಸಬೇಕು. ಸಾವಿನ ಹಿಂದೆ ಅಡಗಿರುವ ರಹಸ್ಯವನ್ನು ಭೇಧಿಸಬೇಕು.