ನಿತ್ಯಾನಂದಸ್ವಾಮಿ
ವಿಶೇಷ ವರದಿಯೊಂದರ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕು ವ್ಯಾಪ್ತಿಯಲ್ಲಿರುವ ಹೆಸರಗಟ್ಟ ಬಳಿ ಇರುವ 24.8 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನ ಪೈಕಿ ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ರಾಷ್ಟ್ರೋತ್ಥಾನ ಪರಿಷತ್‌ಗೆ ಬಹುಕೋಟಿ ಮೌಲ್ಯದ 9.32 ಎಕರೆ ಜಾಗವನ್ನು ಮಂಜೂರು ಮಾಡಲು ಕರ್ನಾಟಕ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆ 76 ಎಕರೆ ಜಮೀನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೇ ರಾಷ್ಟ್ರೋತ್ಥಾನ ಪರಿಷತ್ತಿಗೆ ಮಂಜೂರು ಮಾಡಿದನ್ನು ಸಿಎಜಿ ವರದಿಯಲ್ಲಿ ಆಕ್ಷೇಪಿಸಲಾಗಿತ್ತು.
ಈ ಕುರಿತು ಸಚಿವ ಸಂಪುಟವು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಬದಲಿಗೆ ಮಂಜೂರಾತಿ ವಿಚಾರವನ್ನು ಕಂದಾಯ ಇಲಾಖೆಯೇ ನೇರವಾಗಿ ಮುಖ್ಯ ಮಂತ್ರಿಯೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಸದರಿ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡಲು ಕಂದಾಯ ಸಚಿವರು ಆಸಕ್ತಿ ವಹಿಸಿದ್ದಾರೆ ಎಂದು ಗೊತ್ತಾಗಿದೆ.
ಯಲಹಂಕ ತಾಲೂಕು ಹೆಸರಘಟ್ಟ ಹೋಬಳಿಯ ಹುರಳಿಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್‌ನಲ್ಲಿ ಒಟ್ಟು 24.8 ವಿಸ್ತೀರ್ಣದ ಗೋಮಾಳ ಇದೆ. ಈ ಜಮೀನು 2012-22 ರವರೆಗೂ ಗೋಮಾಳ ಎಂದೇ ನಮೂದಾಗಿತ್ತು. ಹುರಳಿ ಚಿಕ್ಕನಹಳ್ಳಿಯಲ್ಲಿ ಖುಷ್ಕಿ ಜಮೀನಿಗೆ ತಲಾ ಎಕರೆಯೊಂದಕ್ಕೆ 61.00 ಲಕ್ಷ ರೂ. ಬೆಲೆ ಇದೆ. ಇದರ ಪ್ರಕಾರ 9.32 ಎಕರೆಗೆ 5.49 ಕೋಟಿ ರೂ. ಗೂ ಹೆಚ್ಚು ಬೆಲೆ ಬಾಳಲಿದೆ. ಮುಕ್ತ ಮಾರುಕಟ್ಟೆಯಲ್ಲಿನ ಲೆಕ್ಕಾಚಾರದ ಪ್ರಕಾರ ಅಂದರೆ ಸರ್ಕಾರಿ ಮಾರ್ಗಸೂಚಿ ದರಕ್ಕಿಂತ 3 ಪಟ್ಟು ದರದಲ್ಲಿ ಎಕರೆಗೆ 1.81 ಕೋಟಿ ರೂ. ಆಗಲಿದೆ. ಇದರ ಪ್ರಕಾರ 9.32 ಎಕರೆಗೆ ಅಂದಾಜು 16.86 ಕೋಟಿ ರೂ. ಬೆಲೆ ಆಗಲಿದೆ.
2009 ಅಕ್ಟೋಬರ್ ಮತ್ತು 2011 ರಲ್ಲಿಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 76 ಎಕರೆ ಜಾಗವನ್ನು ಇದೇ ರಾಷ್ಟ್ರೋತ್ಥಾನ ಪರಿಷತ್‌ಗೆ ನೀಡಲಾಗಿತ್ತು. ಫಲಾನುಭವಿಗಳು ಯಾವುದೇ ಅರ್ಜಿಯನ್ನು ಸಲ್ಲಿಸದಿದ್ದರೂ ಸರ್ಕಾರ ಸ್ವಯಂ ಪ್ರೇರಿತವಾಗಿ ರಿಯಾಯಿತು ನೀಡಿತ್ತು. ಕರ್ನಾಟಕ ಭೂ ಮಂಜೂರಾತಿ ನಿಯಮಗಳ 27 ರ ಅಡಿಯಲ್ಲಿ ಅಗತ್ಯವಿರುವ ಯಾವುದೇ ಕಾರಣಗಳನ್ನು ದಾಖಲಿಸಿರಲಿಲ್ಲ.
ಅದೇ ರೀತಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಚನ್ನೇನಹಳ್ಳಿಯಲ್ಲಿ 2009 ರಲ್ಲಿ ಜನಸೇವಾ ವಿಶ್ವಸ್ಥ ಮಂಡಳಿಗೆ 6 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಶೇಕಡಾ 50 ರಷ್ಟು ರಿಯಾಯಿತಿ ನೀಡಲಾಗಿತ್ತು. ಆ ನಂತರ ರಿಯಾಯತಿಯನ್ನು ಶೇಕಡಾ 75 ಕ್ಕೆ ಮಾರ್ಪಾಡು ಮಾಡಲಾಗಿತ್ತು. ಒಬ್ಬ ಭೂರಹಿತ ಬಡವ ಅಲ್ಪಸ್ವಲ್ಪ ಸರ್ಕಾರಿ ಗೋಮಾಳ ಭೂಮಿಯನ್ನು ಬಗರ್ ಹುಕುಂ ಸಾಗುವಳಿ ಮಾಡಿ ಜೀವನ ಸಾಗಿಸಲು ಪ್ರಯತ್ನ ಪಟ್ಟರೆ ಕಾನೂನು ದೃಢವಾದ ಕ್ರಮ ಜರುಗಿಸುತ್ತದೆ. ಆತನನ್ನು ಒಕ್ಕಲೆಬ್ಬಿಸುತ್ತದೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಆತನನ್ನು ಬಂಧಿಸಿ ಕ್ರಮಕೈಗೊಳ್ಳಲಾಗುತ್ತದೆ. ಆದರೆ ತಮ್ಮ ಸಂಘ ಪರಿವಾರದವರಿಗೆ ರಿಯಾಯಿತಿ ಸಹಿತ ಭೂಮಿಯನ್ನು ಮಂಜೂರು ಮಾಡಲಾಗುತ್ತದೆ. ಬಡವರಿಗೊಂದು ನ್ಯಾಯ! ಸಂಘ ಪರಿವಾರದವರಿಗೊಂದು ನ್ಯಾಯ! ಯಾವ ಕಾರಣವನ್ನೂ ಕೇಳದೆ, ಯಾವ ಸಮರ್ಥನೆಯೂ ಇಲ್ಲದೆ ಸರ್ಕಾರಿ ಜಮೀನು ರಿಯಾಯ್ತಿಯೊಂದಿಗೆ ಸಂಘ ಪರಿವಾರದ ಪಾಲಾಗುತ್ತದೆ. ಬಡ ಭೂರಹಿತರ ಅರ್ಜಿಗಳು ಕಸದ ಬುಟ್ಟಿ ಸೇರುತ್ತವೆ.