ಸಂಡೂರು ‌ತಹಶೀಲ್ದಾರ್ ಅಮಾನತಿಗೆ ಕಾಂಗ್ರೆಸ್‌ ಆಗ್ರಹ: ಸದನದ ಬಾವಿಗಿಳಿದು ಪ್ರತಿಭಟನೆ

ಬೆಳಗಾವಿ: ಕಾಂಗ್ರೆಸ್‌ ಶಾಸಕ ತುಕರಾಮ್ ಅವರಿಗೆ ಅವಮಾನ ಮಾಡಿದರು ಎಂದು ಆರೋಪಿಸಿ ಸಂಡೂರು ತಾಲ್ಲೂಕಿನ ತಹಶೀಲ್ದಾರ್ ರಶ್ಮಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಶಾಸಕ ತುಕರಾಮ್ ಈ ಬಗ್ಗೆ ಸದನದಲ್ಲಿ ಹಕ್ಕುಚ್ಯುತಿ ಪ್ರಸ್ತಾಪ ಮಂಡನೆ ಮಾಡಿ, ಕಾಲೇಜಿನಲ್ಲಿ ಪಾರ್ಟಿ ಮಾಡುವ ತಹಶೀಲ್ದಾರ್ ಕರ್ತವ್ಯ ಲೋಪವೆಸಗಿ ಭ್ರಷ್ಟಾಚಾರದ ಆರೋಪ ಹೊತ್ತುಕೊಂಡಿದ್ದಾರೆ. ತಹಶೀಲ್ದಾರರು ಕೋಲು ಹಿಡಿದು ಗೂಂಡಾ ವರ್ತನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನು ಓದಿ: ರೈತರಿಗೆ ಬೆಳೆ ಹಾನಿ ಪರಿಹಾರ ಮೂರು ಪಟ್ಟು ಹೆಚ್ಚು ನೀಡಬೇಕು: ಸಿದ್ದರಾಮಯ್ಯ

ವಾಲ್ಮೀಕಿ ಜಯಂತಿ ದಿನ ಕಾರ್ಯಕ್ರಮದಲ್ಲಿ ನನ್ನ ಹೆಸರು ಹಾಕಿಲ್ಲ. ಆಹ್ವಾನ ಪತ್ರದಲ್ಲಿಯೂ ಹೆಸರು ಹಾಕಲಿಲ್ಲ. ಈ ಮೂಲಕ ಅವಮಾನ ಮಾಡಿದ್ದಾರೆ ಎಂದು ತುಕರಾಮ್ ಸದನದ ಗಮನ ತಂದು, ಭ್ರಷ್ಟಾಚಾರದ ಆರೋಪದ ಬಗ್ಗೆ ಕೇಳಲು ಅವರ ಕಚೇರಿಗೆ ಹೋದಾಗ ಅಗೌರವವಾಗಿ ನಡೆಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರ ವಿರುದ್ಧ‌ ಸೂಕ್ತ ಕ್ರಮಕೈಗೊಳ್ಳಲು ಎಂದು ಒತ್ತಾಯಿಸಿದ್ದಾರೆ.

ಇದಕ್ಕೆ ಧ್ವನಿ ಗೂಡಿಸಿದ ಕಾಂಗ್ರೆಸ್ ಶಾಸಕರು, ತಹಶೀಲ್ದಾರರನ್ನು ಅಮಾನತು ಮಾಡಬೇಕು ಎಂದು ಜೋರು ದನಿಯಲ್ಲಿ ಹೇಳಿದರು.

ತುಕರಾಮ್ ಪರವಾಗಿ ಸಿದ್ದರಾಮಯ್ಯ ಮಾತನಾಡಿ, ಇದು ಬಹಳ ಗಂಭೀರವಾದ ವಿಚಾರವಾಗಿದೆ. ತುಕರಾಮ್ ಪತ್ರದ ಮೇಲೆ ಕ್ರಮಕೈಗೊಳ್ಳಲು ಮಾಧುಸ್ವಾಮಿ ಸೂಚಿಸಿದ್ದಾರೆ. ಇದಾದ  ಮೇಲೂ ಶಾಸಕರಿಗೆ ತಹಶಿಲ್ದಾರರರು ಅವಮಾನ ಮಾಡುವುದು ನಿಂತಿಲ್ಲ. ಮುಖ್ಯಮಂತ್ರಿ ಆದೇಶ ಇದ್ದರೂ ಇಲಾಖೆ ಅಧಿಕಾರಿಗಳು ತಹಶಿಲ್ದಾರರನ್ನು  ವರ್ಗಾವಣೆ ಮಾಡಿಲ್ಲ. ಈ ವಿಚಾರವಾಗಿ ಉಡಾಫೆಯ ಉತ್ತರ ಕೊಡಬಾರದು. ಅಧಿಕಾರಿಗಳು ನಿಮ್ಮ ಜಿಲ್ಲೆಯಲ್ಲಿ ಹೀಗೆ ಮಾತನಾಡಿದರೆ ಸುಮ್ಮನಿರುತ್ತಾರಾ? ಎಂದು ಪ್ರಶ್ನಿಸಿದರು.

ಹೋಗ್ರೀ ನಮಗೆ ಆಡಳಿತ ನಡೆಸುವುದು ಗೊತ್ತಿದೆ ಎಂದರೆ ಸುಮ್ಮನಿರಬೇಕಾ? ಕೂಡಲೇ ತಹಶಿಲ್ದಾರರನ್ನು ಅಮಾನತು ಮಾಡಿ‌ ಶಿಸ್ತು ಕ್ರಮಕೈಗೊಳ್ಳಬೇಕು. ಸರ್ಕಾರ ಇದನ್ನು ಪ್ರತಿಷ್ಠೆಯ ವಿಚಾರವಾಗಿ ನೋಡಬಾರದು ಎಂದರು.

ಇದನ್ನು ಓದಿ: ಬೆಳಗಾವಿ ಕಾಂಗ್ರೆಸ್‌ ಗೆಲುವು – ಎರಡನೇ ಪ್ರಾಶಸ್ತ್ಯದಲ್ಲಿ ಲಖನ್‌ಗೆ ಗೆಲುವು ಬಿಜೆಪಿಗೆ ಮುಖಭಂಗ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ನೀಡಿ, ಸರ್ಕಾರ‌‌ ಈ ವಿಚಾರದ ಬಗ್ಗೆ ಗಂಭೀರವಾಗಿ ಪರಿಗಣಿಸಲಿದೆ. ಕೂಡಲೇ ವರ್ಗಾವಣೆ ಮಾಡಲು ಆದೇಶ ಮಾಡುತ್ತೇನೆ ಹಾಗೂ ತನಿಖೆಗೂ ಸೂಚನೆ ನೀಡುತ್ತೇನೆ ಎಂದರು.

ಮುಖ್ಯಮಂತ್ರಿಗಳ ಉತ್ತರಕ್ಕೆ ಸಮಾಧಾನಗೊಳ್ಳದ ಸಿದ್ದರಾಮಯ್ಯ ಅವರು ವರ್ಗಾವಣೆ ಮಾಡುವುದು ಶಿಕ್ಷೆ ಅಲ್ಲ. ತಹಶೀಲ್ದಾರ್  ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು.

ಮರು ಉತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಏನು ತಪ್ಪು ಆಗಿದೆ ಎಂದು ತನಿಖೆ ಮಾಡಿ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತೇನೆ ಎಂದು  ಭರವಸೆ ಕೊಟ್ಟರು.

ಇದೇ ವೇಳೆ ಹಕ್ಕುಚ್ಯುತಿ ಸಮಿತಿಗೆ ನೀಡಲು ಸ್ಪೀಕರ್ ಕಾಗೇರಿ ಮುಂದಾದಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮತ್ರಿ ಬಸವರಾಜ ಬೊಮ್ಮಾಯಿ ಎರಡೆರಡು ತನಿಖೆ ಕೈಗೊಳ್ಳಲು ಸಾಧ್ಯವಿಲ್ಲ. ವರ್ಗಾವಣೆ ಹಾಗೂ ತನಿಖೆಗೆ ಸೂಚಿಸುತ್ತೇವೆ ಅಥವಾ  ಹಕ್ಕುಚ್ಯುತಿ ಸಮಿತಿಗೆ ಕೊಡಿ ವರದಿ ಬಂದ ಬಳಿಕ ಕ್ರಮಕೈಗೊಳ್ಳುತ್ತೇವೆ. ಹಕ್ಕುಚ್ಯುತಿ ಸಮಿತಿಗೆ  ಕೊಟ್ಟರೆ ವರ್ಗಾವಣೆ, ತನಿಖೆಗೆ ಕೊಡಲು ಸಾಧ್ಯವಿಲ್ಲ. ‌ಎರಡು ಕ್ರಮ ಏಕಕಾಲದಲ್ಲಿ ಮಾಡಲು ಆಗುವುದಿಲ್ಲ ಎಂದು  ಪ್ರಸ್ತಾಪಿಸಿದರು.

ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ ಅವರು ಹಲವು ಬಾರಿ ಕಾನೂನು ಸಚಿವರ ಗಮನಕ್ಕೆ ತಂದಿದ್ದಾರೆ. ಇಷ್ಟೆಲ್ಲಾ ಆದರೂ ವರ್ಗಾವಣೆ ಸರಿಯಾದ ಕ್ರಮ ಅಲ್ಲ. ಅಮಾನತು ಮಾಡಿ ಕ್ರಮಕೈಗೊಳ್ಳಲಿ. ಹಿರಿಯ ಶಾಸಕರಿಗೆ ಅವಮಾನ ಆದರೆ ಸಹಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ನಡೆಯನ್ನು ವಿರೋಧಿಸಿ ವಿಧಾನಸಭೆಯ ಬಾವಿಗಿಳಿದು ಕಾಂಗ್ರೆಸ್ ಶಾಸಕರ ಪ್ರತಿಭಟನೆ ನಡೆಸಿದರು. ಇದರಿಂದ ಸದನವನ್ನು ಸ್ಪೀಕರ್ ಹತ್ತು ನಿಮಿಷಗಳ ಕಾಲ ಮುಂದೂಡಿದರು.

Donate Janashakthi Media

Leave a Reply

Your email address will not be published. Required fields are marked *