ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಾಸ್ಯ ನಟ ಮನದೀಪ್ ರಾಯ್ (74) ಭಾನುವಾರ ಮುಂಜಾನೆ ಹೃದಯಾಘಾತ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ದ ಮನದೀಪ್ ರಾಯ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಚೇತರಿಕೆ ಬಳಿಕ ಮನೆಗೆ ವಾಪಸ್ಸಾಗಿದ್ದರು.
1949ರಲ್ಲಿ ಜನಿಸಿದ ಮನದೀಪ್ ರಾಯ್ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅನಂತ್ ನಾಗ್ ಹಾಗೂ ಶಂಕರ್ ನಾಗ್ ಅವರೊಂದಿಗೆ ಚಿತ್ರರಂಗ ಪ್ರವೇಶಿಸಿದ ಅವರು, ಹಾಸ್ಯ ನಟರಾಗಿ ಹಾಗೂ ಪೋಷಕ ಪಾತ್ರಗಳಿಗೆ ಬಣ್ಣ ತಮ್ಮ ಅಭಿನಯ ಚಾತುರ್ಯ್ಯವನ್ನು ಮೆರೆದರು.
ಇದನ್ನು ಓದಿ: ಕನ್ನಡದ ಹೆಸರಾಂತ ಪೋಷಕ ನಟ ಲಕ್ಷ್ಮಣ್ ನಿಧನ
ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ಹಾಸ್ಯ ಕಲಾವಿದರಾಗಿ ಮಿಂಚಿದ ಮನ್‌ದೀಪ್ ರಾಯ್ ಬೆಳದಿಂಗಳ ಬಾಲೆ, ಪುಷ್ಪಕ ವಿಮಾನ, ಮಿಂಚಿನ ಓಟ , ಬೆಂಕಿಯ ಬಲೆ, ಆಕಸ್ಮಿಕ, ಅಪೂರ್ವ ಸಂಗಮ, ಚಲಿಸುವ ಮೋಡಗಳು, ಏಳು ಸುತ್ತಿನ ಕೋಟೆ, ಆಸೆಗೊಬ್ಬ ಮೀಸೆಗೊಬ್ಬ, ದೀಪಾವಳಿ, ಅಗ್ನಿ ಐಪಿಎಸ್, ಗಜಪತಿ ಗರ್ವಭಂಗ ಆಪ್ತರಕ್ಷಕ , ಆಂಟಿ ಪ್ರೀತ್ಸೆ , ಪ್ರೀತ್ಸೋದ್ ತಪ್ಪಾ ಹೀಗೆ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ.ರಾಜ್ ಕುಮಾರ್ ಅವರಿಂದ ಹಿಡಿದು ಇತ್ತೀಚಿಗೆ ಚಿತ್ರರಂಗ ಪ್ರವೇಶಿಸಿದ ಹೊಸಬರ ಚಿತ್ರಗಳಲ್ಲಿಯೂ ಅವರು ನಟಿಸಿರುವು ಹೆಗ್ಗಳಿಕೆಯ ವಿಚಾರವಾಗಿದೆ.
ಇಂಜಿನಿಯರಿಂಗ್ ಪದವಿ ಪಡೆದಿದ್ದ ಮನ್‌ದೀಪ್ ರಾಯ್ ಐಬಿಎಂ ಮತ್ತು ಟಿಸಿಎಸ್ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಆಗ ಶಂಕರ್‌ನಾಗ್‌ರ ಮಿಂಚಿನ ಓಟ ಸಿನಿಮಾದಲ್ಲಿ ನಟಿಸಿದ್ದರು. ಮನ್‌ದೀಪ್ ರಾಯ್ ಮೂಲತಃ ಮುಂಬೈನವರು. 9ನೇ ವಯಸ್ಸಿನಲ್ಲಿಯೇ ರಂಗಭೂಮಿ ಪ್ರವೇಶಿಸಿದರು. ಆಗ ಅವರಿಗೆ ಪರಿಚಯವಾದ ಶಂಕರನಾಗ್ ಮೂಲಕ ಚಿತ್ರರಂಗ ಪ್ರವೇಶಿಸಿದರು.
ಇದನ್ನು ಓದಿ: 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹಿರಿಯ ನಟ ಲೋಹಿತಾಶ್ವ ನಿಧನ
ಬೆಂಗಳೂರಿನ ಕಾವಲ್ ಭೈರಸಂದ್ರದ ನಿವಾಸದಲ್ಲಿ ಮನ್‌ದೀಪ್ ರಾಯ್ ಕೊನೆಯುಸಿರೆಳೆದರು. ಇಂದು(ಜನವರಿ 29) ಸಂಜೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮನದೀಪ್ ರಾಯ್ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
2022ರ ನವೆಂಬರ್‌ನಲ್ಲಿ ಕನ್ನಡದ ಹಿರಿಯ ನಟ ಲೋಹಿತಾಶ್ವ ನಿಧನ ಹೊಂದಿದ್ದರು. ಕಳೆದ ವಾರ ಕನ್ನಡದ ಹಿರಿಯ ನಟ ಲಕ್ಷ್ಮಣ್ ವಿಧಿವಶರಾಗಿದ್ದರು. ಶುಕ್ರವಾರ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ನಟಿಸಿದ್ದ ‘ಸಾಕ್ಷಾತ್ಕಾರ’ ಖ್ಯಾತಿಯ ನಟಿ ಜಮುನಾ ನಿಧನ ಹೊಂದಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ