ಸನಾತನ ಧರ್ಮವನ್ನು ಒಪ್ಪಿಕೊಳ್ಳುವವರು ಮನುಷ್ಯರೆ ಅಲ್ಲ; ಉದಯನಿಧಿ ಹೇಳಿಕೆ ಸಮರ್ಥಿಸಿದ ಡಿಎಂಕೆ ನಾಯಕ ಎ. ರಾಜಾ

ಚೆನ್ನೈ: ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳನ್ನು ಡಿಎಂಕೆ ಸಂಸದ ಎ. ರಾಜಾ ಅವರು ಸಮರ್ಥಿಸಿದ್ದು, “ಸನಾತನ ಧರ್ಮದ ಕುರಿತು ಉದಯನಿಧಿ ಮೃದುವಾಗಿ ಮಾತನಾಡಿದ್ದಾರೆ, ನಾನಾಗಿದ್ದರೆ ಇನ್ನೂ ಕಠಿಣವಾಗಿ ಮಾತನಾಡುತ್ತಿದ್ದರೆ ಎಂದು ಹೇಳಿದ್ದಾರೆ. “ಸನಾತನಧರ್ಮ ಎಚ್‌ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ಕಳಂಕ ಹೊಂದಿರುವ ರೋಗಗಳಿಗೆ ಹೋಲಿಸಬೇಕು” ಎಂದು ಅವರು ಹೇಳಿದ್ದಾರೆ.

ಚೈನ್ನೈನಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿಶ್ವಕರ್ಮ ಯೋಜನೆ ವಿರುದ್ಧ ಜಾತ್ಯತೀತ ಪ್ರಗತಿಪರ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಎ. ರಾಜಾ, “ಉದಯನಿಧಿ ಸ್ವಾಲಿನ್ ಅವರು ಸನಾತನಧರ್ಮವನ್ನು ಮಲೇರಿಯಾ, ಡೆಂಗ್ಯೂ ಎಂದು ಹೋಲಿಸಿದರು. ಆದರೆ ಈ ರೋಗಗಳು ಸಾಮಾಜಿಕ ಕಳಂಕವನ್ನು ಹೊಂದಿಲ್ಲ. ಆದರೆ ಕುಷ್ಠರೋಗ ಮತ್ತು HIVಯನ್ನು ಸಮಾಜದಲ್ಲಿ ಅಸಹ್ಯಕರವಾಗಿ ನೋಡಲಾಯಿತು. ನಾನು ಸನಾತನಧರ್ಮವನ್ನು ಎಚ್‌ಐವಿ ಮತ್ತು ಕುಷ್ಠರೋಗದಂತಹ ರೋಗಗಳಾಗಿ ನೋಡುತ್ತೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನೂತನ ಸಂಸತ್‌ ಭವನ ಉದ್ಘಾಟನೆಗೆ ರಾಷ್ಟ್ರಪತಿ ಆಹ್ವಾನಿಸದಿರುವುದೇ ಸನಾತನಧರ್ಮದ ತಾರತಮ್ಯ: ಉದಯನಿಧಿ ಸ್ಟಾಲಿನ್

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವಕರ್ಮ ಯೋಜನೆಯು “ಗುರು-ಶಿಷ್ಯ ಪರಂಪರೆ”ಯ ತತ್ತ್ವಶಾಸ್ತ್ರದ ಆಧಾರದ ಪರಿಚಯಿಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ವ್ಯಾಪಿಸಿರುವ 18 ಸಾಂಪ್ರದಾಯಿಕ ಉದ್ಯೋಗವನ್ನು ಪುನರುಜ್ಜೀವನ ಮಾಡುವ ಉದ್ದೇಶ ಹೊಂದಿದೆ. ತಮಿಳುನಾಡಿನ ದ್ರಾವಿಡ ಮತ್ತು ಎಡಪಕ್ಷಗಳು ಇದನ್ನು ವಿರೋಧಿಸಿದ್ದು, ಈ ಯೋಜನೆಯು ಜಾತಿ ಪದ್ದತಿಯನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿವೆ.

” ಸನಾತನ ಮತ್ತು ವಿಶ್ವಕರ್ಮ ಯೋಜನೆ ಬೇರೆ ಬೇರೆ ಅಲ್ಲ, ಒಂದೇ ಆಗಿದೆ. ಉದಯನಿಧಿ ಮೃದುವಾಗಿ ಮಾತನಾಡಿದ್ದಾರೆ, ನಾನಾಗಿದ್ದರೆ ಇನ್ನೂ ಕಠಿಣವಾಗಿ ಮಾತನಾಡುತ್ತಿದ್ದೆ. ಬಿಜೆಪಿಯಿಂದ ಯಾರೇ ಬಂದರೂ ಸರಿ, ಸನಾತನಧರ್ಮದ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ. 10 ಲಕ್ಷ ಅಥವಾ 1 ಕೋಟಿ ಜನ ಸೇರಿ, ಯಾವುದೇ ರೀತಿಯ ಆಯುಧಗಳೊಂದಿಗೆ ಬಂದರೂ ಪರವಾಗಿಲ್ಲ. ನಾನು ಅವರನ್ನು ಎದುರಿಸಲು ದೆಹಲಿಯಲ್ಲಿ ಪೆರಿಯಾರ್ ಮತ್ತು ಅಂಬೇಡ್ಕರ್ ಪುಸ್ತಕಗಳೊಂದಿಗೆ ಚರ್ಚೆ ಸಿದ್ದ” ಎಂದು ಎ. ರಾಜಾ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವು ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಮತ್ತು ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಸನಾತನ ಧರ್ಮವನ್ನು ಕೊರೊನಾ ವೈರಸ್, ಮಲೇರಿಯಾ ಮತ್ತು ಡೆಂಗ್ಯೂ ವೈರಸ್‌ಗೆ ಹೋಲಿಸಿದ್ದ ಅವರು, “ಸನಾತನ ಧರ್ಮವನ್ನು ಕೇವಲ ವಿರೋಧಿಸುವುದು ಮಾತ್ರವಲ್ಲ, ಅದನ್ನು ನಾಶಪಡಿಸಬೇಕಾಗಿದೆ” ಎಂದು ಹೇಳಿದ್ದರು.

ಇದನ್ನೂ ಓದಿ: ವಿಶೇಷ ಅಧಿವೇಶನದ ಅಜೆಂಡಾ ಇನ್ನೂ ರಹಸ್ಯ | ಪ್ರತಿಪಕ್ಷಗಳಿಂದ ತೀವ್ರ ವಾಗ್ದಾಳಿ

ಪುದುಚೇರಿಯಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಮಾತನಾಡಿದ ಎ. ರಾಜಾ ಅವರು, “ಸನಾತನ ನಾಶದಿಂದಾಗಿ ನೀವು ಗೃಹ ಮಂತ್ರಿ ಆಗಿದ್ದೀರಿ, ಇಲ್ಲದಿದ್ದರೆ ನೀವು ಬೇರೆ ಏನೋ ಆಗಿರುತ್ತಿದ್ದಿರಿ. ನಾವು ಸನಾತನ ಧರ್ಮದ ವಿರುದ್ಧ ಹೋರಾಡಿದ್ದರಿಂದಲೇ, ತಮಿಳಿಸೈ ಸೌಂದರರಾಜನ್ ಈಗ ರಾಜ್ಯಪಾಲರಾಗಿದ್ದಾರೆ, ವನತಿ ಶ್ರೀನಿವಾಸನ್ ವಕೀಲರಾಗಿದ್ದಾರೆ, ಅಣ್ಣಾಮಲೈ ಐಪಿಎಸ್ ಆಗಿದ್ದಾರೆ. ಇಲ್ಲವೆಂದರೆ ಅವರು ಆಡುಗಳನ್ನು ಸಾಕಿಕೊಂಡಿರುತ್ತಿದ್ದರು. ನಾವು ಸನಾತನ ಧರ್ಮವನ್ನು ನಾಶಪಡಿಸಿದ ಕಾರಣಕ್ಕೆ ಅಧಿಕಾರ ಪಡೆದುಕೊಂಡ ನೀವು, ಈಗ ಅದರ ಪರವಾಗಿ ಮಾತನಾಡಲು ನಿಮಗೆ ನಾಚಿಕೆಯಾಗುವುದಿಲ್ಲ, ನಿಮಗೆ ಆತ್ಮಸಾಕ್ಷಿ ಇಲ್ಲವೇ?” ಎಂದು ರಾಜಾ ಕೇಳಿದ್ದಾರೆ.

ಇದನ್ನೂ ಓದಿ: ಮಂಗಳೂರು: ಗಣೇಶೋತ್ಸವಕ್ಕೆ 2 ಲಕ್ಷ ರೂ. ನೀಡಬೇಕೆಂದ ಬಿಜೆಪಿ ಶಾಸಕನ ತಂಡ, ಕುಲಪತಿ ಮೇಲೆ ಗೂಂಡಾಗಿರಿ!

“ಒಬ್ಬ ವ್ಯಕ್ತಿಯ ಶಿಕ್ಷಣವು ಸಮಾಜಕ್ಕೆ ಹಾನಿಕರವಾಗಿದ್ದರೆ ಅವನು ಮೃಗಕ್ಕಿಂತ ಅಪಾಯಕಾರಿ ಎಂದು ಬಿ ಆರ್ ಅಂಬೇಡ್ಕರ್ ಹೇಳಿದ್ದರು. ಮಿಸ್ಟರ್ ಮೋದಿ, ಅಮಿತ್ ಶಾ ಮತ್ತು ತಮಿಳಿಸೈ ಅವರೇ ಅಂಬೇಡ್ಕರ್ ಹೇಳಿದ್ದು ನಿಮಗೆ ಅನ್ವಯಿಸುತ್ತದೆ” ಎಂದು ಹೇಳಿದ್ದಾರೆ.

“ಸನಾತನಧರ್ಮ ಜನರಲ್ಲಿ ಅಸಮಾನತೆಗಳನ್ನು ಉತ್ತೇಜಿಸುತ್ತದೆ, ಮಹಿಳೆಯರ ಹಕ್ಕುಗಳನ್ನು ನಿಗ್ರಹಿಸುತ್ತದೆ ಮತ್ತು ಸತಿಯನ್ನು ಪ್ರತಿಪಾದಿಸಿದೆ. ನಾವು ಅಂತಹ ಆಚರಣೆಗಳನ್ನು ಪುನರುಜ್ಜೀವನಗೊಳಿಸಲು ಬಯಸುತ್ತೇವೆಯೇ?. ಅಂತಹ ಆಚರಣೆಗಳನ್ನು ನಿರ್ಮೂಲನೆ ಮಾಡುವಲ್ಲಿ ನಾವು ಹೋರಾಟ ಮಾಡಿದ್ದೇವೆ. ನಾವು ಈ ಸನಾತನ ಧರ್ಮವನ್ನು ಒಪ್ಪಿಕೊಂಡರೆ, ನಾವು ಪೆರಿಯಾರ್, ಅಣ್ಣಾದೊರೈ, ಕಲೈಂಗರ್ (ಕರುಣಾನಿಧಿ) ಪ್ರತಿಪಾದಿಸಿದ ತತ್ವಗಳಿಗೆ ವಿರುದ್ಧವಾಗಿದ್ದಂತೆ. ಈ ಧರ್ಮವನ್ನು ಒಪ್ಪಿಕೊಂಡರೆ ಸಹ ಮಾನವರಿಗೆ ನಾವು ಶತ್ರುವಾಗುತ್ತೇವೆ, ನಾನು ಈ ಧರ್ಮವನ್ನು ಒಪ್ಪಿಕೊಂಡರೆ ನಾವು ಮನುಷ್ಯರೇ ಅಲ್ಲ” ಎಂದು ರಾಜಾ ಹೇಳಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ, ಷಾ ಸೇರಿದಂತೆ ಅವರ ಸಂಪುಟ ಸಹೋದ್ಯೋಗಿಗಳು ಮತ್ತು ಆರ್‌ಎಸ್‌ಎಸ್ ನಾಯಕರಿಗಿಂತ ಬ್ರಿಟಿಷರು ತುಂಬಾ ಉತ್ತಮರು. 100 ವರ್ಷಗಳ ನಂತರ 1919 ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಬ್ರಿಟನ್‌ನ ಮಾಜಿ ಪ್ರಧಾನಿ (ಥೆರೆಸಾ ಮೇ) ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ಮಣಿಪುರದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಸಾಮೂಹಿಕ ಅತ್ಯಾಚಾರ ಮಾಡಿ, ಅವರನ್ನು ಬೆತ್ತಲೆ ಮೆರವಣಿಗೆ ಮಾಡಿ, ಅಲ್ಲಿನ ಹಿಂಸಾಚಾರದಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಕೂಡಾ ಸಂಸತ್ತಿನಲ್ಲಿ ಮೋದಿ ಮತ್ತು ಶಾ ಮಣಿಪುರ ಮುಖ್ಯಮಂತ್ರಿಯನ್ನು ಹೊಗಳಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೊ ನೋಡಿ: ಗೌರಿ ನೆನಪಿನಲ್ಲಿ ಮೂಡಿ ಬಂದ ಹಾಡುಗಳು Janashakthi Media

Donate Janashakthi Media

Leave a Reply

Your email address will not be published. Required fields are marked *