ಆಗಸ್ಟ್ 26-27ರಂದು ದಿಲ್ಲಿ ಸಮೀಪದ ಸಿಂಘು ಗಡಿಯಲ್ಲಿ ನಡೆದ ಬೃಹತ್ ರಾಷ್ಟ್ರೀಯ ಸಮಾವೇಶ ಸೆಪ್ಟೆಂಬರ್ 25ರಂದು ಭಾರತ್ ಬಂದ್ ಗೆ ಕರೆ ನೀಡಿದೆ.
ಸೆಪ್ಟೆಂಬರ್ 5ರಂದು ಉತ್ತರಪ್ರದೇಶದ ಮುಝಪ್ಪರ್ ನಗರದಲ್ಲಿ ನಡೆಯಲಿರುವ ಕಿಸಾನ್ ಮಹಾಪಂಚಾತಯನ್ನು ಯಶಸ್ವಿಗೊಳಿಸಬೇಕು ಎಂದೂ ಈ ರಾಷ್ಟ್ರೀಯ ಸಮಾವೇಶ ಕರೆ ನೀಡಿದೆ. ಈ ಮಹಾಪಂಚಾಯತ್ನೊಂದಿಗೆ “ಉತ್ತರಪ್ರದೇಶ–ಉತ್ತರಾಖಂಡ ಮಿಷನ್” ಆರಂಭವಾಗಲಿದ್ದು ಅದನ್ನು ಎರಡೂ ರಾಜ್ಯಗಳಲ್ಲಿ ಬುಡಮಟ್ಟದವರೆಗೆ ಒಯ್ದು, ಅಲ್ಲಿ ಸದ್ಯದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಆಳ್ವಿಕೆಗಳ ಸೋಲನ್ನು ಖಾತ್ರಿಪಡಿಸಬೇಕು ಎಂದೂ ರೈತರು ನಿರ್ಧರಿಸಿದ್ದಾರೆ.
ದಿಲ್ಲಿ ಗಡಿಗಳಲ್ಲಿ ರೈತರ ಬೃಹತ್ ಹೋರಾಟ 9 ತಿಂಗಳುಗಳನ್ನು ಪೂರೈಸಿದ ಸಂದರ್ಭದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್.ಕೆ.ಎಂ.) ಈ ರಾಷ್ಟ್ರೀಯ ಸಮಾವೇಶವನ್ನು ಸಂಘಟಿಸಿತ್ತು. ಈ ಎರಡು ದಿನಗಳ ರಾಷ್ಟ್ರೀಯ ಸಮಾವೇಶ ಎಲ್ಲ ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿ ಎಸ್.ಕೆ.ಎಂ. ಸಮಿತಿಗಳನ್ನು ರಚಿಸಿ ರೈತರ ಹೋರಾಟವನ್ನು ದೇಶವ್ಯಾಪಿಯಾಗಿ ವಿಸ್ತರಿಸಬೇಕು ಮತ್ತು ತೀವ್ರಗೊಳಿಸಬೇಕು ಎಂದೂ ಕರೆ ನೀಡಿದೆ.
22 ರಾಜ್ಯಗಳ ನೂರಕ್ಕೂ ಹೆಚ್ಚು ರೈತ ಸಂಘಟನೆಗಳಿಂದ 2000ಕ್ಕೂ ಹೆಚ್ಚು ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದರು. ರೈತರು ಮಾತ್ರವಲ್ಲದೆ ಕಾರ್ಮಿಕರು, ಕೃಷಿಕೂಲಿಕಾರರು, ಮಹಿಳಾ, ಯುವಜನ, ವಿದ್ಯಾರ್ಥಿ, ದಲಿತ, ಬುಡಕಟ್ಟು ಸಂಘಟನೆಗಳ ಪ್ರತಿನಿಧಿಗಳೂ ಇದರಲ್ಲಿ ಭಾಗವಹಿಸಿ ಇದನ್ನು ನಿಜಕ್ಕೂ ರಾಷ್ಟ್ರೀಯ ಸಮಾವೇಶವಾಗಿಸಿದರು ಎಂದು ಎಸ್.ಕೆ.ಎಂ ಹೇಳಿದೆ.
ಈ ರೈತ ಹೋರಾಟದ 600ಕ್ಕೂ ಹೆಚ್ಚು ಹುತಾತ್ಮರಿಗೆ ಶ್ರದ್ಧಾಂಜಲಿಯೊಂದಿಗೆ ಆರಂಭವಾದ ಈ ಸಮಾವೇಶವನ್ನು ರೈತ ಮುಖಂಡ ರಾಕೇಶ್ ಟಿಕಾಯತ್ ಉದ್ಘಾಟಿಸಿದರು.
ರೈತರ ಸಮಸ್ಯೆಗಳನ್ನು ಕುರಿತ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಹನ್ನನ್ ಮೊಲ್ಲ, ಅತುಲ್ ಕುಮಾರ್ ಅಂಜಾನ್, ದರ್ಶನ್ ಪಾಲ್, ಜೊಗಿಂದರ್‌ಸಿಂಗ್ ಉಗ್ರಹಾನ್, ಮೇಧಾ ಪಾಟ್ಕರ್, ಯೋಗೇಂದ್ರ ಯಾದವ್ ಮತ್ತಿತರ ಎಸ್‌ಕೆಎಂ ಮತ್ತು ರೈತ ಚಳುವಳಿಯ ಮುಖಂಡರು ಮಾತನಾಡಿದರು.
ಇದರ ನಂತರ ಪ್ರತ್ಯೇಕ ಅಧಿವೇಶನಗಳು ನಡೆದವು. ಇವನ್ನು ಉದ್ದೇಶಿಸಿ ಕಾರ್ಮಿಕ ಮುಖಂಡರು, ಕೃಷಿಕೂಲಿಕಾರ ಸಂಘಟನೆಗಳ ಮುಖಂಡರು, ದಲಿತರು, ಬುಡಕಟ್ಟು ಜನಗಳು, ಮಹಿಳಾ, ಯುವಜನ, ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಮಾತಾಡಿದರು.
ಕಳೆದ 9 ತಿಂಗಳಿಂದ ರೈತರು ದೇಶದ ರಾಜಧಾನಿಯ ಗಡಿಗಳಲ್ಲಿ ಎತ್ತುತ್ತ ಬಂದಿರುವ ಮೂರು ಪ್ರಮುಖ ಬೇಡಿಕೆಗಳಲ್ಲದೆ, ನಾಲ್ಕು ಕಾರ್ಮಿಕ ಸಂಹಿತೆಗಳ ರದ್ಧತಿ, ನಿರುದ್ಯೋಗ, ಹಸಿವು, ಮನರೇಗದ ವಿಸ್ತರಣೆ ಮುಂತಾದ ಬೇಡಿಕೆಗಳನ್ನು ಬೆಂಬಲಿಸಿ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಆರೆಸ್ಸೆಸ್-ಬಿಜೆಪಿಯ ವಿಭಜನಕಾರೀ ಕೋಮುವಾದದ ವಿರುದ್ಧ ಮತ್ತು ಮೋದಿ ಆಳ್ವಿಕೆ ದೇಶವನ್ನು ಕಾರ್ಪೊರೇಟ್‌ಗಳಿಗೆ ಮಾರುತ್ತಿರುವುದರ ವಿರುದ್ಧ ನಿರ್ಣಯಗಳನ್ನೂ ಅಂಗೀಕರಿಸಲಾಯಿತು.