ನವದೆಹಲಿ: ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕೆ ಸಂಬಂಧಿಸಿದಂತೆ ಮಸೂದೆಗೆ ಅಂಗೀಕಾರವನ್ನು ಪಡೆದುಕೊಳ್ಳಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಪ್ರತಿಭಟನಾನಿರತ ರೈತ ಸಂಘಟನೆಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರವೊಂದನ್ನು ಬರೆದಿವೆ.
ದೆಹಲಿಯ ಸಿಂಘು ಗಡಿಯಲ್ಲಿನ ಪ್ರತಿಭಟನಾ ಸ್ಥಳದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಪತ್ರಿಕಾಗೋಷ್ಠಿಯನ್ನು ನಡೆಸಿತು. ಕೇಂದ್ರ ಸರ್ಕಾರವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವವರೆಗೆ ಮತ್ತು ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ಖಾತ್ರಿಪಡಿಸುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದಿರುವ ರೈತ ಸಂಘಟನೆಗಳು ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ತಿಳಿಸಿದರು.
ಪ್ರಧಾನಿ ಹೇಳಿಕೆಯ ನಂತರ ಮೊದಲ ಬಾರಿಗೆ ನಡೆದ ರೈತರ ಸಭೆಯಲ್ಲಿ, ಎಂಎಸ್ಪಿ ಖಾತರಿ, ಹುತಾತ್ಮ ರೈತರ ಕುಟುಂಬಗಳಿಗೆ ಪರಿಹಾರ ಮತ್ತು ರೈತರ ವಿರುದ್ಧದ ಪ್ರಕರಣಗಳನ್ನು ಕೈಬಿಡಬೇಕೆಂಬ ಪ್ರಮುಖ ಆರು ಬೇಡಿಕೆಗಳನ್ನು ಈಡೇರಿಸುವವರೆಗೂ ತಮ್ಮ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ.
ರೈತ ಸಂಘಗಳು ಎಂದಿನ ವೇಳಾಪಟ್ಟಿಯಂತೆ ವಿವಿಧ ಪ್ರತಿಭಟನೆಗಳನ್ನು ಮುಂದುವರಿಸಲಿವೆ. ತದನಂತರ ನವೆಂಬರ್ 27ರಂದು ಪ್ರಮುಖ ಸಭೆ ನಡೆಸಲಾಗುವುದು ಎಂದು ಹೇಳಿದೆ.
ಪ್ರಧಾನಿಗೆ ಬರೆದ ಪತ್ರದಲ್ಲಿ ಅಂಶಗಳು
೧. ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಮೇಲೆ ತಮ್ಮ ಪ್ರಮುಖ ಬೇಡಿಕೆಯನ್ನು ಪ್ರಕಟಿಸಿದ್ದು “ಸಮಗ್ರ ಉತ್ಪಾದನಾ ವೆಚ್ಚದ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆಯನ್ನು (C2+50%) ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಲ್ಲಾ ರೈತರ ಕಾನೂನುಬದ್ಧ ಹಕ್ಕನ್ನು ಮಾಡಬೇಕು. ಇದರಿಂದ ದೇಶದ ಪ್ರತಿಯೊಬ್ಬ ರೈತರ ಬೆಳೆಗೆ ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆಯನ್ನಾದರೂ ಖಾತ್ರಿಪಡಿಸಿಕೊಳ್ಳಬಹುದು ಎಂದಿದೆ.
೨. “11 ಸುತ್ತಿನ ಮಾತುಕತೆಯ ನಂತರ, ನೀವು ದ್ವಿಪಕ್ಷೀಯ ಪರಿಹಾರಕ್ಕಿಂತ ಏಕಪಕ್ಷೀಯ ಘೋಷಣೆಯ ಮಾರ್ಗವನ್ನು ಆರಿಸಿಕೊಂಡಿದ್ದೀರಿ ಎಂದು ನಾವು ಗಮನಿಸಿದ್ದೇವೆ; ಅದೇನೇ ಇದ್ದರೂ, ನೀವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದ್ದಕ್ಕಾಗಿ ನಮಗೆ ಸಂತೋಷವಾಗಿದೆ. ನಾವು ಈ ಘೋಷಣೆಯನ್ನು ಸ್ವಾಗತಿಸುತ್ತೇವೆ ಮತ್ತು ನಿಮ್ಮ ಸರ್ಕಾರವು ಈ ಭರವಸೆಯನ್ನು ಶೀಘ್ರವಾಗಿ ಮತ್ತು ಪೂರ್ಣವಾಗಿ ಪೂರೈಸುತ್ತದೆ ಎಂದು ಭಾವಿಸುತ್ತೇವೆ.
೩. ವಿದ್ಯುತ್ ಬಿಲ್ ಮತ್ತು ವಾಯು ಮಾಲಿನ್ಯದ ಮೇಲೆ ರೈತರ ವಿರುದ್ಧ ಯಾವುದೇ ದಂಡದ ಕ್ರಮವನ್ನು ರದ್ದುಪಡಿಸುವ ಬೇಡಿಕೆಯ ಹೊರತಾಗಿ, ಪತ್ರದಲ್ಲಿ ಕಳೆದ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಘಟನೆಯನ್ನು ಉಲ್ಲೇಖಿಸಲಾಗಿದೆ. ಅಂದು ನಡೆದ ರೈತರ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ನಿಧನವೊಂದಿದರು. “ಲಖಿಂಪುರ ಖೇರಿ ಹತ್ಯೆ ಪ್ರಕರಣದ ಅತ್ಯಂತ ಪ್ರಮುಖ ಆರೋಪಿ ಮತ್ತು ಸೆಕ್ಷನ್ 120 ಬಿ ಆರೋಪಿಯಾಗಿರುವ ಅಜಯ್ ಮಿಶ್ರಾ ಟೆನಿ ಇನ್ನೂ ಸ್ವತಂತ್ರವಾಗಿ ತಿರುಗಾಡುತ್ತಿದ್ದಾರೆ. ನಿಮ್ಮ ಸಂಪುಟದಲ್ಲೇ ಸಚಿವರಾಗಿಯೂ ಉಳಿದಿದ್ದಾರೆ. ಅವರು ನಿಮ್ಮೊಂದಿಗೆ ಮತ್ತು ಇತರ ಹಿರಿಯ ಸಚಿವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಅವರನ್ನು ವಜಾಗೊಳಿಸಬೇಕು ಮತ್ತು ಬಂಧಿಸಬೇಕು” ಎಂದು ಪತ್ರದಲ್ಲಿ ತಿಳಿಸಲಾಗಿದೆ.
೪. ದೆಹಲಿ, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಈ ಚಳವಳಿಯ ಸಂದರ್ಭದಲ್ಲಿ (ಜೂನ್ 2020 ರಿಂದ ಇಲ್ಲಿಯವರೆಗೆ) ನೂರಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಪ್ರತಿಭಟನಾಕಾರ ರೈತರ ವಿರುದ್ಧ ತಕ್ಷಣದ ಕ್ರಮವನ್ನು ಹಿಂಪಡೆಯುವುದು.
೫. ಈ ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಇದುವರೆಗೆ ಸುಮಾರು 700 ರೈತರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಅವರ ಕುಟುಂಬಗಳಿಗೆ ಪರಿಹಾರ ಮತ್ತು ಪುನರ್ವಸತಿ ಬೆಂಬಲ ನೀಡಬೇಕು. ಹುತಾತ್ಮ ರೈತರ ಸ್ಮರಣಾರ್ಥ ಹುತಾತ್ಮರ ಸ್ಮಾರಕ ನಿರ್ಮಿಸಲು ಸಿಂಘು ಗಡಿಯಲ್ಲಿ ಭೂಮಿ ನೀಡಬೇಕು.
೬. “ಪ್ರಧಾನಿಯವರೇ, ಈಗ ನಾವು ಮನೆಗೆ ಹಿಂತಿರುಗಬೇಕು ಎಂದು ರೈತರಿಗೆ ನೀವು ಮನವಿ ಮಾಡಿದ್ದೀರಿ. ನಾವು ಬೀದಿಗಳಲ್ಲಿ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ ಎಂದು ನಿಮಗೆ ಭರವಸೆ ನೀಡಲು ನಾವು ಬಯಸುತ್ತೇವೆ. ಈ ಇತರ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಿದ ನಂತರ, ನಾವು ನಮ್ಮ ಮನೆಗಳು, ಕುಟುಂಬಗಳು ಮತ್ತು ಕೃಷಿಗೆ ಮರಳಬೇಕೆಂದು ನಾವು ಬಯಸುತ್ತೇವೆ.
ನಿಮಗೂ ಅದೇ ಬೇಕಾದರೆ, ಮೇಲಿನ ಆರು ವಿಷಯಗಳ ಕುರಿತು ಸರ್ಕಾರವು ಕೂಡಲೇ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಮಾತುಕತೆಯನ್ನು ಪುನರಾರಂಭಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ನವೆಂಬರ್ 27ರಂದು ಪ್ರಮುಖ ಸಭೆ
ಸೋಮವಾರ(ಇಂದು) ಸಂಯುಕ್ತ ಕಿಸಾನ್ ಮೋರ್ಚಾ ಲಕ್ನೋದಲ್ಲಿ ಕಿಸಾನ್ ಮಹಾಪಂಚಾಯತ್ ನಡೆಸಲು ಕರೆ ನೀಡಿದ್ದು, ಮುಂದಿನ ನವೆಂಬರ್ 24ರಂದು ಸರ್ ಛೋಟು ರಾಮ್ ಜನ್ಮದಿನದ ಹಿನ್ನೆಲೆ ರೈತ ಒಕ್ಕೂಟಗಳು ಕಿಸಾನ್ ಮಜ್ದೂರ್ ಸಂಘರ್ಷ್ ದಿವಸ್ ಅನ್ನು ಆಚರಿಸಲಿವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಪ್ರತಿದಿನ 500 ರೈತರಿಂದ ಟ್ರ್ಯಾಕ್ಟರ್ ರ್ಯಾಲಿ
ನವೆಂಬರ್ 26ರಂದು ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಒಂದು ವರ್ಷ ಪೂರೈಸಲಿದೆ. ಈ ಹಿನ್ನೆಲೆ ಪಂಜಾಬ್ ಮತ್ತು ಹರಿಯಾಣದಿಂದ ಮೊದಲ ಹಂತದಲ್ಲಿ ಸಿಂಘು ಗಡಿಗೆ ಆಗಮಿಸಲಿರುವ ರೈತರು ವರ್ಷಾಚರಣೆ ಮಾಡಲಿದ್ದಾರೆ. ಅಂದು ರಾಜ್ಯಗಳಾದ್ಯಂತ ಟ್ರ್ಯಾಕ್ಟರ್ ರ್ಯಾಲಿಗಳೊಂದಿಗೆ ಆಗಮಿಸಲಿದ್ದಾರೆ. ನಡೆಸಲಿದ್ದಾರೆ. ತದನಂತರ ನವೆಂಬರ್ 29 ರಿಂದ ದೆಹಲಿಯಲ್ಲಿ ಸಂಸತ್ ಚಳಿಗಾಲ ಅಧಿವೇಶನದಲ್ಲಿ ಪ್ರತಿಭಟಿಸಲು ಪ್ರತಿದಿನ 500 ಪ್ರತಿಭಟನಾಕಾರರನ್ನು ಟ್ರ್ಯಾಕ್ಟರ್ಗಳಲ್ಲಿ ಸಂಸತ್ತಿಗೆ ಕಳುಹಿಸಲು ಸಂಯುಕ್ತ ಕಿಸಾನ್ ಮೋರ್ಚಾ ತೀರ್ಮಾನಿಸಿದೆ.