ಬೆಂಗಳೂರು : ಮೂರು ವರ್ಷಗಳ ಹಿಂದೆ ಆರಂಭಗೊಂಡ ‘ಸಂವಿಧಾನ ಓದು’ ಅಭಿಯಾನ ಅದೊಂದು ಆಂದೋಲನದ ಸ್ವರೂಪದಿಂದಾಗಿ ಇಂದು ರಾಜ್ಯದ ಮನೆಮಾತಾಗಿವೆ ಎಂದು ಸಂವಿಧಾನ ಓದು ಪುಸ್ತಕದ ಕರ್ತೃ ಹಾಗೂ ನಿವೃತ್ತ ನ್ಯಾಯಮೂರ್ತಿಯಾದ ಎಚ್.ಎನ್ ನಾಗಮೋಹನ ದಾಸ್ ತಿಳಿಸಿದರು.
ಸಮುದಾಯ -ಸಹಯಾನ-ಚಿಂತನ ಸಹಯೋಗದಲ್ಲಿ ಆಯೋಜಿಸಲಾದ ಸಂವಿಧಾನ ಓದು ಹಿನ್ನೋಟ ಮತ್ತು ಮುನ್ನೋಟ ಮೂರು ವರ್ಷದ ನೆನಪಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಆರಂಭದಲ್ಲಿ ಕೇವಲ 2000 ಪ್ರತಿಗಳ ಮಾರಾಟದೊಂದಿಗೆ ಆರಂಭಗೊಂಡ ಈ ಅಭಿಯಾನ ಇಂದು 50 ಬಾರಿ ಮುದ್ರಣದೊಂದಿಗೆ 2 ಲಕ್ಷ ಪ್ರತಿಗಳ ದಾಖಲೆ ಮಾರಾಟವಾಗಿದೆ. ಅಲ್ಲದೆ ಹಿಂದಿ ಇಂಗ್ಲಿಷ್ ಭಾಷೆಗೂ ತರ್ಜುಮೆಗೊಂಡಿದೆ ಮಾತ್ರವಲ್ಲ ಇದೀಗ ಮಲೆಯಾಳಿಗೂ ಅನುವಾದಗೊಂಡಿದೆ. ಇದಕ್ಕೆ ರಾಜ್ಯ ಜನಪರ ಮನಸ್ಸುಗಳು ನೀಡಿದ ಸಹಾಯ ಕಾರಣವಾಗಿದೆ ಹೀಗಾಗಿ ಈ ಆಂದೋಲನದಲ್ಲಿ ನಾನೊಬ್ಬ ಸಹಯಾನಿ ಮಾತ್ರ ಎಂದು ಅವರು ಹೇಳಿದರು.
ಮೂಲಭೂತ ಹಕ್ಕುಗಳ ಉಲ್ಲಂಘನೆ : ಹಿಂದೆಂದಿಗಿಂತಲೂ ಹೆಚ್ಚಾಗಿರುವ ದೇಶದ್ರೋಹ, ರಾಷ್ಟ್ರೀಯ ಭದ್ರತೆ, ಯುಎಪಿಎ ಕಾನೂನುಗಳ ದುರ್ಬಳಕೆ, ಹೆಚ್ಚುತ್ತಿರುವ ನ್ಯಾಯಾಂಗದ ಮೇಲೆ ಒತ್ತಡ, ಪೆಗಾಸಿಸ್ ಗೂಢಚರ್ಯೆ ಸೇರಿದಂತೆ ಹೆಚ್ಚುತ್ತಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಹೆಚ್ಚು ಹೆಚ್ಚು ಜನರಲ್ಲಿ ಸಂವಿಧಾನ ಪ್ರಜ್ಞೆ ಬೆಳೆಸುವ ಅಗತ್ಯವನ್ನು ಒತ್ತಿ ಹೇಳುತ್ತಿವೆ ಎಂದು ದಾಸ್ ಅಭಿಪ್ರಾಯ ಪಟ್ಟರು.
ಹಿಂದೆ ಕ್ವಿಟ್ ಇಂಡಿಯಾ ಘೋಷಣೆ ಮೊಳಗಿಸಿದ್ದರೆ ಈಗ ಭಾರತ ಉಳಿಸಿ ,ಸಂವಿಧಾನ ಉಳಿಸಿ ಎಂಬ ಘೋಷಣೆ ಎಲ್ಲೆಡೆ ಕೇಳಿಬರುತ್ತಿದೆ. ಪ್ರತಿ ದಿನ ಸಂವಿಧಾನ ಉಲ್ಲಂಘನೆ ಕೆಲಸಗಳು ನಡೆಯುತ್ತಿರುವಾಗ ಜನರಲ್ಲಿ ಸಂವಿಧಾನ ಪ್ರಜ್ಞೆ ಮೂಡಿಸುವುದು ಮಾತ್ರವೇ ಸಂವಿಧಾನವನ್ನು ರಕ್ಷಿಸುತ್ತದೆ ಸಂವಿಧಾನ ರಕ್ಷಣೆ ಆದರೆ ಮಾತ್ರವೇ ದೇಶದಲ್ಲಿ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ,ಸಾಮಾಜಿಕ ನ್ಯಾಯ ಉಳಿಯುತ್ತದೆ ಎಂದು ಅವರು ಪ್ರತಿಪಾದಿಸಿದರು
ಹಿರಿಯ ಚಿಂತಕ ಎಂ.ಜಿ ಹೆಗಡೆ ರವರು ಮಾತಾನಾಡಿ, ಈ ಸಂವಿಧಾನ ಓದು ಒಂದು ಆಂಧೋಲನ ಸ್ವರೂಪ ತಾಳಲು ಕಾರಣವಾಗಿದ್ದು ಡಾಃ ವಿಠ್ಠಲ ಭಂಡಾರಿ ಶ್ರಮ ಕಾರಣ. ಸ್ವತಃ ಒಬ್ಬ ಅಧ್ಯಾಪಕನಾಗಿ, ಸಾಂಸ್ಕೃತಿಕ ಚಳವಳಿಯ ಒಬ್ಬ ಕಾರ್ಯಕರ್ತ ನಾಗಿ ಅವನು ಮಾಡಿದ ಅಪರಿಮಿತ ಶ್ರಮದಿಂದಾಗಿ ಈ ಸಂವಿಧಾನ ಓದು ರಾಜ್ಯದ ಎಲ್ಲ ವಿಭಾಗಗಳ ಜನರನ್ನು ತಲುಪುವಲ್ಲಿ ಸಫಲವಾಗಿದೆ ಎಂದರು
ರಾಜ್ಯಶಾಸ್ತ್ರ ವಿಷಯದ ಪಠ್ಯ ವಾಗಿ ಮಾತ್ರ ಸಾಮಾನ್ಯವಾಗಿ ಗ್ರಹಿಸಿದ್ದ ಸಂವಿಧಾನ ವನ್ನು ಒಂದು ಜೀವನ ತತ್ವವಾಗಿ ಹಾಗೂ ಸಾಂಸ್ಕೃತಿಕ ಪಠ್ಯ ವಾಗಿ ಜನರ ಮುಂದೆ ಸಂವಿಧಾನ ಓದು ಅಭಿಯಾನ ತೋರ್ಪಡಿಸಿದೆ ಇದೇ ಅಭಿಯಾನ ಯಶಸ್ವಿ ಆಗಲು ಕಾರಣ ಎಂದು ಹೇಳಿದರು.
ವಿವಿಧ ಜಿಲ್ಲೆಗಳಲ್ಲಿ ಸಂವಿಧಾನ ಓದು ಅಭಿಯಾನವನ್ನು ತಲೆಯ ಮೇಲೆ ಹೊತ್ತು ನಡೆಸಿದ ಸಂವಿಧಾನ ಸಹಯಾನಿಗಳು ತಮ್ಮ ಅನುಭವ ಗಳನ್ನು ತಿಳಿಸಿದರು.
ದಾವಣಗೆರೆಯ ಅನಿಶ್ ಪಾಶಾ, ಹಾಸನದ ಡಾ.ಭಾರತಿ ದೇವಿ, ಸಹಯಾನದ ಯಮುನಾ ಗಾಂವ್ಕಾರ್, ಚಾಮರಾಜನಗರದ ನವೀನ್, ಮಂಡ್ಯದ ಯಶವಂತ್, ಕಲ್ಬುರ್ಗಿಯ ಶರಣಪ್ಪ ಸೈದಾಪುರ, ಬಾಗಲಕೊಟೆಯ ರಮೇಶ್ ಮತ್ತಿತರು ಮಾತಾಡಿದರು.
ಕಾರ್ಯಕ್ರಮದಲ್ಲಿ ಡಾ. ವರಮಹಾಲಕ್ಮೀ ‘ಸಂವಿಧಾನ ಓದು’ವನ್ನು ‘ಹರಿಕಥೆ’ ಹಾಗೂ ಜನಪದ ಪ್ರಕಾರವಾಗಿ ಅಳವಡಿಸಿಕೊಂಡು ಪ್ರಸ್ತುತಪಡಿಸಿದರು. ಅಭಿಯಾನದಲ್ಲಿ ಖ್ಯಾತ ಗಾಯಕ ಪಿಚ್ಚಳ್ಳಿ ಶ್ರೀನಿವಾಸ, ನರಸಿಂಹಮೂರ್ತಿ ಜಾಗೃತಿ ಗೀತೆಗಳನ್ನು ಹಾಡಿದರು.
ಸಂವಿಧಾನ ಓದು ಅಭಿಯಾನವನ್ನು ಮುಂದುವರೆಸಲು ವಿವಿಧ ಮಾದರಿಗಳನ್ನು, ರೀತಿಗಳನ್ನು ಅಳವಡಿಸಿ ಮುಂದುವರೆಸಲು ನಿರ್ಧಾರ ಮಾಡಲಾಯಿತು. ಪ್ರಾಸ್ತಾವಿಕ ವಾಗಿ ಮಾತಾನಾಡಿದರು. ಪ್ರಾಧ್ಯಾಪಕ ರಾಜಶೇಖರ ಕಿಗ್ಗ ರವರು ನಿರ್ವಹಿಸಿದರು ಸಮುದಾಯದ ದೇವೆಂದ್ರಗೌಡ ರವರು ಸ್ವಾಗತಿಸಿದರು.
ಆನ್ಲೈನ್ ಕಾರ್ಯಕ್ರಮದಲ್ಲಿ, ಪ್ರೋ.ಪುರುಷೋತ್ತಮ ಬಿಳಿಮಲೆ ,ನಾಗರಾಜ್ ಸಮುದಾಯ ಸಂಘಟನೆಯ ರಾಜ್ಯಾಧ್ಯಕ್ಷ ಅಚ್ಯತ್, ಬಾಲಕೃಷ್ಣ ಶೆಟ್ಟಿ, ಹೆಚ್ ಆರ್ ನವೀನ್ ಕುಮಾರ್ ,ಲ ಜಗನ್ನಾಥ್ ಸೇರಿದಂತೆ ನಾಡಿನಾದ್ಯಂತ ಈ ಆಂದೋಲನಲ್ಲಿ ಸಹಯಾನಿಗಳಾಗಿದ್ದ ನೂರಾರು ಕಾರ್ಯಕರ್ತರು ಆನ್ ಲೈನ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಂವಿಧಾನ ಓದು ಕಾರ್ಯಕ್ರಮದ ಫೋಟೊಗಳು.
ವರದಿ : ಕೆ.ಮಹಾಂತೇಶ್