ಸಂವಿಧಾನ ಮೌಲ್ಯಗಳನ್ನು ವಿದ್ಯಾರ್ಥಿ ಯುವಜನತೆ ಅರಿಯುವುದು ಅತ್ಯವಶ್ಯಕ: ಬಸವರಾಜ ಪೂಜಾರ

ಹುಬ್ಬಳ್ಳಿ: ದೇಶದ ಎಲ್ಲ ನಾಗರಿಕರು ಸಂವಿಧಾನಿಕ ತತ್ವಗಳನ್ನು ಜೀವನದಲ್ಲಿ ಮೌಲ್ಯಗಳಾಗಿ ಅಳವಡಿಸಿಕೊಂಡು ದೇಶದ ಪ್ರಜಾಸತ್ತೆಯನ್ನು ಗಟ್ಟಿಗೊಳಿಸಬೇಕು. ಇದಕ್ಕಾಗಿ ವಿದ್ಯಾರ್ಥಿ ಯುವಜನರು ಸಂವಿಧಾನವನ್ನು ಸ್ವಯಂ ಸ್ಫೂರ್ತಿಯಿಂದ ಅಧ್ಯಯನ ಮಾಡುವುದು ಅತ್ಯವಶ್ಯಕ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.

ಶನಿವಾರ(ನವೆಂಬರ್‌ 26) ನಗರದ ಶ್ರಮಿಕ ಭವನದಲ್ಲಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್ಐ) ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಪಾಲ್ಗೊಂಡು, ವಿದ್ಯಾರ್ಥಿಗಳಿಗೆ ಸಂವಿಧಾನದ ಪೂರ್ವ ಪೀಠಿಕೆ ಪ್ರತಿಜ್ಞೆ ಭೋಧಿಸಿ ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನವನ್ನು ರಚಿಸಿಕೊಂಡು 1949ರಲ್ಲಿ ನಾವುಗಳೆಲ್ಲರೂ, ನಮ್ಮ ದೇಶವನ್ನು “ಸಾರ್ವಭೌಮ ಜಾತ್ಯತೀತ ಪ್ರಜಾಸತ್ತಾತ್ಮಕ, ಸಮಾಜವಾದಿ, ಗಣರಾಜ್ಯ” ವನ್ನಾಗಿ ರೂಪಿಸಿಕೊಂಡು ಹಾಗೂ ಘೋಷಿಕೊಂಡು ಆಚರಣೆಗೆ ಕ್ರಮವಹಿಸಿದ ದಿನವಾಗಿದೆ ಎಂದರು.

 

ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ, ಈ ದಿನಗಳಲ್ಲಿ ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನವನ್ನು ದುರ್ಬಲಗೊಳಿಸುವ ಕೆಲಸವನ್ನು ಮತ್ತು ಸರ್ವಾಧಿಕಾರವನ್ನು ಹೇರುವ ಮಾಡುತ್ತಿವೆ. ದೇಶವನ್ನು ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಗುಲಾಮಿತನಕ್ಕೆ ತಳ್ಳಲು ಹವಣಿಸುತ್ತಿರುವ ಅಪಾಯವನ್ನು ಅರಿಯಬೇಕು ಎಂದರು.

ಜಾತಿ, ಲಿಂಗ ತಾರತಮ್ಯ ಹಾಗೂ ಅಸ್ಪೃಶ್ಯಾಚರಣೆ, ಕೋಮು ದ್ವೇಷವನ್ನು ಗಂಭೀರವಾಗಿ ತೊಡೆದು ಹಾಕಿ, ಬಹುತ್ವ ಭಾರತವನ್ನು ಗಟ್ಟಿಗೊಳಿಸಲು ತುರ್ತಾಗಿ ಮುಂದಾಗಬೇಕಿದೆ. ಸಂವಿಧಾನ ವಿರೋಧಿ ಹಾಗೂ ಜನ ವಿರೋಧಿ ಶಕ್ತಿಗಳನ್ನು ಸೋಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಿಂಘ್ವಿ ಚಾರಿಟೇಬಲ್ ಟ್ರಸ್ಟ್ ವಿದ್ಯಾರ್ಥಿ ವೇತನ ವಿಭಾಗದ ಮುಖ್ಯಸ್ಥ ಈರಪ್ಪ ನಾಯ್ಕ,  ಸಿಐಟಿಯು ಜಿಲ್ಲಾ ಮುಖಂಡರಾದ ಗುರುಸಿದ್ದಪ್ಪ ಅಂಬಿಗೇರ, ಮಂಜುನಾಥ ಹುಜರಾತಿ, ಬಸವಣ್ಣೆಪ್ಪ ನೀರಲಗಿ, ಕು. ಖುಷಿ ಕಂಬಾಳಿಮಠ, ಶ್ವೇತಾ ಅಗಸರ ಮತ್ತಿತರರು ವೇದಿಕೆ ಮೇಲಿದ್ದರು. ವಿವಿಧ ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಯುವಜನತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *