ಸುಳ್ಯ : ಭಾವೈಕ್ಯತೆ, ಸಹಬಾಳ್ವೆ ಮೂಡಿಸುವ ನಿಟ್ಟಿನಲ್ಲಿ ಸಂವಿಧಾನದ ಸಮರ್ಪಣಾ ದಿನದ ಸ್ಮರಣೆಗಾಗಿ ನವೆಂಬರ್ 27 ರಂದು ಪ್ರಜಾಧ್ವನಿ ಕರ್ನಾಟಕದಿಂದ ರಾಷ್ಟ್ರಧ್ವಜ ಗೌರವ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ಸಂವಿಧಾನದ ಸಮರ್ಪಣಾ ದಿನದ ನೆನಪಿಗಾಗಿ ಈ ಯಾತ್ರೆಯನ್ನು ಹಮ್ಮಿಕೊಂಡಿದೆ.
ರಾಷ್ಟ್ರಧ್ವಜ ಗೌರವ ಯಾತ್ರೆ ಸುಳ್ಯ ತಾಲೂಕಿನಾದ್ಯಂತ ನಡೆಯಲಿದ್ದು, ಯಾತ್ರೆಯನ್ನು 27ರಂದು ಸಂಪಾಜೆ ಗೇಟಿನ ಬಳಿ ಬೆಳಿಗ್ಗೆ 8.30ಕ್ಕೆ ಸುಳ್ಯ ತಹಶೀಲ್ದಾರರಾದ ಮಂಜುಳಾ ಎಂ. ಅವರು ನೆರವೇರಿಸಲಿದ್ದಾರೆ.
ಉದ್ಘಾಟನೆಯ ನಂತರ ರಾಷ್ಟ್ರಧ್ವಜ ಯಾತ್ರೆಯು ಕಲ್ಲುಗುಂಡಿ, ಆರಂತೋಡು, ಮರ್ಕಂಜ, ಎಲಿಮಲೆ, ಗುತ್ತಿಗಾರು, ಸುಬ್ರಹ್ಮಣ್ಯ, ಪಂಜ, ನಿಂತಿಕಲ್ಲು, ಬೆಳ್ಳಾರೆ, ಐವರ್ನಾಡು, ಸೋಣಂಗೇರಿ, ಪೈಚಾರು ಮಾರ್ಗವಾಗಿ ಸಂಚರಿಸಲಿದೆ. ಅಂದು ಸಂಜೆ 5 ಗಂಟೆಗೆ ಸುಳ್ಯದಲ್ಲಿ ಸಮಾವೇಶಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಸುಳ್ಯ ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ, ಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ, ಸ್ಥಳಿಯ ಮುಖಂಡರಾದ ಹರಿಪ್ರಸಾದ್ ತುದಿಯಡ್ಕ, ಸಯದ್ ಆತಾಹ್ವಿರ್ ಸಾದಿ, ಫಾ. ವಿಕ್ಟರ್ ಡಿಸೋಜಾ ಹಾಗೂ ಪ್ರಜಾಧ್ವನಿ ಸಂಚಾಲಕ ಗೋಪಾಲ್ ಪೆರಜೆ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಗಾಂಧಿನಗರದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ನಡೆಯಲಿದೆ.
ಯಾತ್ರೆಯುದ್ದಕ್ಕೂ ಸಾರ್ವಜನಿಕರು, ಸಾಮಾಜಿಕ ಧುರೀಣರು ಹಾಗೂ ರಾಜಕೀಯ ಪಕ್ಷಗಳ ಮುಖಂಡರಿಂದ ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ನಡೆಯಲಿದೆ. ಯಾತ್ರೆಯುದ್ದಕ್ಕೂ ಸಂವಿಧಾನದ ಕುರಿತು ಗಣ್ಯರು ಭಾಷಣ ಮಾಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.