ಬೆಂಗಳೂರು: ಒಂದು ಅಮಾಯಕ ಅಲ್ಪಸಂಖ್ಯಾತ ವರ್ಗದ ಹೆಸರು, ಟೋಪಿ, ಬಟ್ಟೆ, ಆಹಾರ ಇತ್ಯಾದಿಗಳನ್ನು ಉಲ್ಲೇಖಿಸಿ ಪರಸ್ಪರ ನಿಂದನೆ ಅವಮಾನಿಸಲು ಬಳಕೆಯಾಗುತ್ತಿರುವುದು ನಮ್ಮ ರಾಜಕಾರಣದ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ ಪಿ ಆರೋಪಿಸಿದ್ದಾರೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅವರು, ಅಲ್ಪಸಂಖ್ಯಾತ ವರ್ಗದ ಹೆಸರು, ಟೋಪಿ, ಬಟ್ಟೆ, ಆಹಾರ ಇತ್ಯಾದಿ ನಿರ್ದಿಷ್ಟ ವಿಷಯಗಳನ್ನು ಉಲ್ಲೇಖಿಸಿಕೊಂಡು ರಾಜಕೀಯ ಪಕ್ಷದ ಮುಖಂಡರ ರಾಜಕಾರಣದ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಜಕಾರಣಿಗಳ ಇಂತಹ ನಡೆ ಖಂಡನೀಯ ಎಂದು ತಿಳಿಸಿದ್ದಾರೆ.
ಇಂತಹ ಹೇಳಿಕೆಗಳು ನಮ್ಮ ಸಂವೇದನಾರಹಿತ ರಾಜಕಾರಣಕ್ಕೆ ಕನ್ನಡಿಯಾಗಿದೆ. ಬಿಜಿಪಿಯು ತನ್ನ ಕೋಮುವಾದಿ ಹಾಗು ದ್ವೇಷದ ರಾಜಕಾರಣದ ಭಾಗವಾಗಿ ಇದನ್ನು ಪ್ರಾರಂಭದಿಂದಲೂ ಬಳಸಿಕೊಂಡು ಬರುತ್ತಿದೆ. ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಈ ಬಗೆಯ ಮೌಲ್ಯರಹಿತ ರಾಜಕಾರಣದ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೊಲೆಗೈದು ಅಧಿಕಾರದ ಗದ್ದುಗೆ ಏರುವ ಅವರ ಕೊಳಕು ರಾಜಕಾರಣ ಸೂಕ್ಷ್ಮಮತಿಯ ಜನರಿಗೆ ಅರ್ಥವಾಗುತ್ತದೆ ಎಂದು ತಿಳಿಸಿದ್ದಾರೆ.
ಆದರೆ, ಕಾಂಗ್ರೆಸ್ ಪಕ್ಷ ಕೂಡ ಇದೇ ದಾರಿ ತುಳಿಯುತ್ತಿರುವುದು ಮನಸ್ಸಿಗೆ ನೋವಾಗಿದೆ ಮತ್ತು ಆತಂಕ ವ್ಯಕ್ತಪಡಿಸಿರುವ ನಿರಂಜನಾರಾಧ್ಯ ಅವರು, ಕೇಂದ್ರ ಹಾಗು ರಾಜ್ಯ ಸರಕಾರಗಳ ಅಸಂವಿಧಾನಿಕ ನೀತಿ /ಕಾನೂನುಗಳು; ಶಿಕ್ಷಣದ ಖಾಸಗೀಕರಣ, ವ್ಯಾಪರೀಕರಣ ಹಾಗು ಕೋಮುವಾದೀಕರಣ; ಬಡ ಜನರ ಬದುಕು ಕಸಿದ ಬೆಲೆ ಏರಿಕೆ; ಕಂಡರಿಯದ ಕಡು ಭ್ರಷ್ಟಾಚಾರ; ಯುವಜನರ ಬದುಕು ಕಸಿದ ನಿರುದ್ಯೋಗ ಸಮಸ್ಯೆ; ದೇಶದ ಸಾರ್ವಜನಿಕ ಆಸ್ತಿ ಮಾರಾಟ; ದೇಶದಲ್ಲಿ ಸುಳ್ಳು ಬಿತ್ತುವ ಮೂಲಕ ಧರ್ಮಾಂಧತೆ, ಕೋಮು ದಳ್ಳುರಿ ಹಾಗು ಜನರನ್ನು ದಿಕ್ಕು ತಪ್ಪಿಸುವ ಜನವಿರೋಧಿ ಕ್ರಮ ಎಂದಿದ್ದಾರೆ.
ಜನರ ಜ್ವಲಂತ ವಿಚಾರಗಳು, ನೀತಿಗಳು ಚುನಾವಣೆಯ ಪ್ರಮುಖ ವಿಷಯಗಳಾಗಿ ದೇಶಾದ್ಯಂತ-ರಾಜ್ಯಾದಂತ ಚರ್ಚೆಯಾಗಬೇಕಾದ ಸಂದರ್ಭದಲ್ಲಿ, ಈ ಬಗೆಯ ಸಂವೇದನಾರಹಿತ ವ್ಯಕ್ತಿ ನಿಂದನೆ, ಒಂದು ಸಮುದಾಯವನ್ನು ತೇಜೋವಧೆಗೊಳಿಸಿ ಕೊಳಕು ರಾಜಕಾರಣಕ್ಕೆ ಇಳಿದಿರುವುದು ಕರ್ನಾಟಕದ ಜನತೆಗೆ ಶೋಭೆತರುವುದಿಲ್ಲ. ರಾಜಕಾರಣಿಗಳ ಇಂತಹ ಕ್ರಮಗಳನ್ನು ಪ್ರಜ್ಞಾವಂತರು ಜಾತಿ, ಧರ್ಮ, ಪಕ್ಷ-ಬೇಧ ಮರೆತು ಖಂಡಿಸಬೇಕೆಂದು ಕರೆ ನೀಡಿದ್ದಾರೆ.